ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಮಗ್ಗ ನೇಕಾರರಿಗೆ ಕಚ್ಚಾನೂಲು, ಬೀಮ್ ಪೂರೈಕೆಗೆ ಆಗ್ರಹ

ವಿದ್ಯಾವಿಕಾಸ ಯೋಜನೆ ಮುಂದುವರಿಕೆಗೆ ಒತ್ತಾಯ
Published 24 ಆಗಸ್ಟ್ 2023, 14:19 IST
Last Updated 24 ಆಗಸ್ಟ್ 2023, 14:19 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಕೈಮಗ್ಗ ನೇಕಾರರಿಗೆ ಕೆಎಚ್‌ಡಿಸಿ ನಿಗಮದಿಂದ ಕಚ್ಚಾನೂಲು, ಬೀಮ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಕೈಮಗ್ಗ ನೇಕಾರರು ಇಲ್ಲಿಯ ಕೆಎಚ್‌ಡಿಸಿ ಕಚೇರಿಯ ಅಧಿಕಾರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ಏಪಿಎಂಸಿ ಆವರಣದಲ್ಲಿರುವ ಕೆಎಚ್‌ಡಿಸಿ ನಿಗಮದ ಕಚೇರಿಗೆ ಬಂದಿದ್ದ ತಾಲ್ಲೂಕಿನ ಮುದ್ದೇಬಿಹಾಳ, ಶಿರೋಳ, ಬಸರಕೋಡ ಭಾಗದ ನೇಕಾರರು ಕಚೇರಿಯ ನಿರ್ವಾಹಕಿ ಬಿ.ಎಸ್. ಗಣಾಚಾರಿ, ಗುಣನಿಯಂತ್ರಣ ವಿಭಾಗದ ಶರಣು ಬೆನ್ನೂರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಕೈಮಗ್ಗ ನಿಗಮದ ಅಧಿಕಾರಿಗಳು ನಮಗೆ ಕಚ್ಚಾ ನೂಲು, ಬೀಮ್ ಈ ತಿಂಗಳಿನಿಂದ ಪೂರೈಕೆ ಮಾಡುವುದು ಆಗುವುದಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯ ಮೂಲಕ ವಿದ್ಯಾವಿಕಾಸ ಯೋಜನೆಯ ಅಡಿ ಕೆ.ಎಚ್.ಡಿ.ಸಿ ನಿಗಮದಿಂದ ಶಾಲಾ ಮಕ್ಕಳಿಗೆ ಬಟ್ಟೆ ಖರೀದಿಸುತ್ತಿತ್ತು. ಆದರೆ ಈ ತಿಂಗಳಿನಿಂದ ಖರೀದಿಯನ್ನು ನಿಲ್ಲಿಸಲಾಗಿದೆ ಎಂದು ಹೇಳುತ್ತಿದೆ. ಇದರಿಂದ ನೇಕಾರಿಕೆಯನ್ನೇ ನಂಬಿ ಬದುಕು ನಡೆಸುತ್ತಿರುವ ನೂರಾರು ನೇಕಾರರ ಕುಟುಂಬಗಳು ಬೀದಿ ಪಾಲಾಗುತ್ತವೆ’ ಎಂದು ನೇಕಾರರಾದ ಅಮರೇಶ ಹೆಬ್ಬಾಳ, ಶಂಕರಲಿಂಗ ಹುಣಶ್ಯಾಳ ದೂರಿದರು.

‘ಕೈಮಗ್ಗ ನೇಕಾರಿಕೆ ಬಿಟ್ಟರೆ ನಮಗೆ ಬೇರೆ ಉದ್ಯೋಗ ಗೊತ್ತಿಲ್ಲ. ನೇಕಾರಿಕೆಯನ್ನೇ ಮೂಲ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ಈಗ ಏಕಾಏಕಿ ನಿಗಮದಿಂದ ಬಟ್ಟೆ ನೇಯಲು ಕಚ್ಚಾ ನೂಲು, ಬೀಮ್ ಪೂರೈಕೆ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ದಿಕ್ಕೇ ತೋಚದಂತಾಗಿದೆ. ಮಕ್ಕಳ ಶಾಲಾ ಶುಲ್ಕ, ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಸೇರಿದಂತೆ ಇನ್ನಿತರ ಜೀವನಾವಶ್ಯಕತೆಗಳಿಗೆ ತೊಂದರೆಯಾಗುತ್ತದೆ. ಕೂಡಲೇ ರಾಜ್ಯ ಸರ್ಕಾರ ವಿದ್ಯಾವಿಕಾಸ ಯೋಜನೆಯ ಅಡಿ ಬಟ್ಟೆ ಖರೀದಿಸಲು ನಿಗಮಕ್ಕೆ ಆದೇಶ ನೀಡಬೇಕು’ ಎಂದು ನೇಕಾರ ಉದ್ಯೋಗಿಗಳಾದ ಸುಭದ್ರಾ ಸೋಮನಕಟ್ಟಿ, ಜಯಶ್ರೀ ಹೆಬ್ಬಾಳ ಒತ್ತಾಯಿಸಿದರು.

ನೇಕಾರರಾದ ಎಸ್.ಎಸ್. ಹುಣಶ್ಯಾಳ, ಸಿ.ಐ. ಹೆಬ್ಬಾಳ, ಎಸ್.ಆರ್. ಹೆಬ್ಬಾಳ, ಪಿ.ಆರ್. ಜನಿವಾರದ, ಸಿದ್ದಪ್ಪ ಹೆಬ್ಬಾಳ, ಎನ್.ವಿ. ಎಂಜಿಗನರಿ, ಎಂ.ಎಸ್. ಚಿತ್ತರಗಿ, ಎಸ್.ಎಚ್. ಗೌಡರ, ವಿ.ಎಸ್. ಹೆಬ್ಬಾಳ, ಡಿ.ಎಂ. ಹುಣಶ್ಯಾಳ, ಎಸ್.ಐ. ಗಡದ, ಎಚ್.ಟಿ. ಹೆಬ್ಬಾಳ, ಎಸ್.ಎಸ್. ಸೋಮನಕಟ್ಟಿ, ಎನ್.ಎಸ್. ಹೆಬ್ಬಾಳ, ಸಂಗವ್ವ ಸಿನ್ನೂರ, ಜಯಮ್ಮ ಹೆಬ್ಬಾಳ ಇದ್ದರು.

ಜವಳಿ ಸಚಿವರು ಗಮನಿಸಲಿ

ಅತ್ಯಂತ ಕಷ್ಟದಲ್ಲಿ ಜೀವನ ನಡೆಸುತ್ತಿರುವ ನೇಕಾರರ ಕುಟುಂಬಗಳಿಗೆ ತಮ್ಮ ಉದ್ಯೋಗ ಮುಂದುವರಿಸಲು ಕಚ್ಚಾನೂಲು ಬೀಮ್ ಪೂರೈಕೆಗೆ ಸರ್ಕಾರದಿಂದ ಆದೇಶ ಹೊರಡಿಸಬೇಕು. ಜಿಲ್ಲೆಯವರೇ ಆಗಿರುವ ಜವಳಿ ಖಾತೆಯನ್ನು ಹೊಂದಿರುವ ಸಚಿವ ಶಿವಾನಂದ ಪಾಟೀಲರು ನೇಕಾರರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಉದ್ಯೋಗಕ್ಕೆ ಕಚ್ಚಾ ನೂಲು ಬೀಮ್ ದೊರೆಯುವ ಖಚಿತತೇ ಇಲ್ಲದೇ ಆತಂಕ ಎದುರಿಸುತ್ತಿರುವ ನೇಕಾರರು ಮನವಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT