ಶನಿವಾರ, ಅಕ್ಟೋಬರ್ 31, 2020
20 °C

ವಿಜಯಪುರ: ಮಾನವ ಹಕ್ಕು ಹೋರಾಟಗಾರರ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭೀಮಾ ಕೊರೆಗಾಂವ್‌ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವಹಕ್ಕುಗಳ ಹೋರಾಟಗಾರ 82 ವರ್ಷ ವಯಸ್ಸಿನ ಫಾದರ್ ‌ಸ್ಟ್ಯಾನ್‌ ಸ್ವಾಮಿ ಅವರನ್ನುರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಂಚಿಯಲ್ಲಿ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಹಾಗೂ ಪ್ರಗತಿಪರ ಒಕ್ಕೂಟಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಯಿತು.

ಫಾದರ್‌ ಟಿಯೋಲ್ ಮಚಾದೋ ಮಾತನಾಡಿ,  ಮಾನವ ಹಕ್ಕುಗಳ ಪರ, ಧಮನಿತರ ಪರವಾಗಿ ಹೋರಾಟ ಮಾಡುತ್ತಿರುವವರ ವಿರುದ್ಧ ಈಗಿನ ಸರ್ಕಾರ ದೇಶ ವಿರೋಧಿ ಸುಳ್ಳು ಆರೋಪಗಳನ್ನು ಮಾಡಿ, ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸುವ ಮೂಲಕ ಕಾನೂನುಬಾಹಿರವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಫಾದರ್‌ ಸಂತೋಷ ಫೆರ್ನಾಂಡಿಸ್ ಮಾತನಾಡಿ, ಭೀಮಾ ಕೋರೆಗಾಂವ್‍ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭಾರತದ ವಿವಿಧ ಭಾಗಗಳಲ್ಲಿನ ಮಾನವ-ಹಕ್ಕು ಪರ ಕಾರ್ಯಕರ್ತರ ಹೆಸರುಗಳನ್ನು ಸೇರಿಸಿ, ಅವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪ್ರಯತ್ನವು 2018ರಿಂದಲೇ ನಡೆದಿದೆ ಎಂದರು.

ಇದೀಗ ಪುನ: ಅಂತಹದ್ದೇ ಪ್ರಕರಣದಡಿ ಇನ್ನೂ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಅನೇಕ ಸುಳ್ಳು ಆಪಾದನೆಗಳನ್ನು ಈ ಕಾರ್ಯಕರ್ತರ ಮೇಲೆ ಹೊರಿಸುವ ವಿಫಲ ಪ್ರಯತ್ನಗಳನ್ನು ಕೂಡ ನಡೆಸಲಾಗಿದೆ. ಆದರೆ ಇದರ ಹಿಂದಿರುವ ಉದ್ದೇಶ ಏನು ಎಂಬುವುದು ಗೊತ್ತಾಗುತ್ತಿಲ್ಲ ಎಂದರು.

ಈಗ ಬಂಧನಕ್ಕೊಳಗಾಗಿರುವ ಕ್ರೈಸ್ತಧರ್ಮಗುರು ಸ್ಟ್ಯಾನಿ ಸ್ವಾಮಿ ಕಳೆದ ನಾಲ್ಕು ದಶಕಗಳಿಂದ ಜಾರ್ಖಂಡ್‍ನಲ್ಲಿರುವ ಆದಿವಾಸಿ ಜನರಿಗಾಗಿ ಮಾಡಿರುವ ಕೆಲಸ ಕಾರ್ಯಗಳನ್ನು ಗಮನಿಸಿದಾಗ ಅದು ದೇಶದ್ರೋಹ ಹೇಗಾಗುತ್ತದೆ. ಇವರು ಅಲ್ಲಿನ ಆದಿವಾಸಿಗಳಿಗಾಗಿ ತಮ್ಮ ಜೀವನವನ್ನೆ ಸವೆಸಿದ್ದಾರೆಂದರೆ ತಪ್ಪಾಗಲ್ಲಿಕ್ಕಿಲ್ಲ ಎಂದು ಹೇಳಿದರು.

ಪ್ರಗತಿಪರ ಸಂಘಟನೆಯ ಮುಖಂಡರಾದ ಫಾದರ ಜಿನ್ಸ್, ಅಂಥೋನಿ ಲಾರೆನ್ಸ್, ಬ್ರದರ್ ಪ್ರೀತೇಶ, ಸಿಸ್ಟರ್ ಅಕ್ರಮ್‌ ಮಾಶಾಳಕರ, ಸಿದ್ದಲಿಂಗ ಬಾಗೇವಾಡಿ, ಶ್ರೀನಾಥ ಪೂಜಾರಿ, ಸಿದ್ದಲಿಂಗಯ್ಯ ಹಿರೇಮಠ, ನಿರ್ಮಲಾ ಹೊಸಮನಿ, ಚಂದ್ರು ಆಲಮೇಲ ಮೀನಾಕ್ಷಿ ಕಾಲೇಬಾಗ, ಶೋಭಾ ಗಾಯಕವಾಡ, ರೇಷ್ಮಾ, ಬಸವರಾಜ ಮಾಳಿ, ಕೃಷ್ಣಾ ಜಾದವ, ದಸ್ತಗೀರ ಉಕ್ಕಲಿ ಮತ್ತಿತರರು ಪಾಲ್ಗೊಂಡಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು