ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹ

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ
Last Updated 6 ನವೆಂಬರ್ 2020, 10:27 IST
ಅಕ್ಷರ ಗಾತ್ರ

ವಿಜಯಪುರ: ನಗರದ ಹದಗೆಟ್ಟ ರಸ್ತೆಗಳ ದುರಸ್ಥಿಗೆ ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರುಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಹದಗೆಟ್ಟಿರುವ ನಗರದ ರಸ್ತೆಗಳಿಗೆ ಡಾಂಬರ್‌ ಹಾಕಿಸಬೇಕು,ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಬೇಕು,ರಸ್ತೆಗಳನ್ನುದೂಳು ಮುಕ್ತಗೊಳಿಸಬೇಕು, ಜನರ ಜೀವ ಕಾಪಾಡಬೇಕು ಎಂದು ಆಗ್ರಹಿಸಿದರು.ಮಹಾನಗರ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿದರು.

ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳಿಂದಾಗಿ ಜಗತ್ತನ್ನೇ ತನ್ನೆಡೆ ಸೆಳೆದುಕೊಂಡ ವಿಜಯಪುರ ಈಗ, ಹದಗೆಟ್ಟ ರಸ್ತೆಗಳ ನಗರ ಎಂಬ ಕುಖ್ಯಾತಿಗೆ ಕಾರಣವಾಗಿದೆ ಎಂದು ಹೇಳಿದರು.

ನಗರದ ಎಲ್ಲ ರಸ್ತೆಗಳು ಜನಸಾಮಾನ್ಯರ ಓಡಾಡಕ್ಕೆ ಸುರಕ್ಷಿತವಾಗಿಲ್ಲ. ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು, ವಾಹನ ಚಾಲಕರು ಅಂಗೈಯಲ್ಲಿ ಜೀವ ಹಿಡಿದು ಓಡಾಡಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆಗಳ ದುರಸ್ತಿಗೆ ಸರ್ಕಾರದಿಂದ ಅಗತ್ಯವಿರುವಷ್ಟು ಹಣ ಬಿಡುಗಡೆಗೊಂಡಿದ್ದರೂ ಕೂಡ ಮಹಾನಗರ ಪಾಲಿಕೆಯು ಹಣವಿಲ್ಲ ಎಂಬ ನೆಪವೊಡ್ಡುತ್ತಿದೆ. ಕೇವಲ ತೇಪೆ ಹಚ್ಚುವ ಕೆಲಸಗಳು ಮಾತ್ರ ನಡೆದಿವೆ. ಶಾಶ್ವತ ಪರಿಹಾರ ಮರೀಚಿಕೆಯಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಮುತುವರ್ಜಿ ವಹಿಸಿ, ಸಮರೋಪಾದಿಯಲ್ಲಿ ಹದಗೆಟ್ಟ ರಸ್ತೆಗಳ ದುರಸ್ಥಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಜಯಪುರ ಜಿಲ್ಲಾ ಸಮಿತಿ ಸದಸ್ಯ ಬಾಳೂ ಜೇವೂರ ಮಾತನಾಡಿ, ಕೊರೊನಾ, ಅತಿವೃಷ್ಟಿ, ಬರ ಎಂತಲ್ಲ ನೆಪಗಳನ್ನು ಹೇಳುತ್ತಾ ನಗರದಲ್ಲಿ ಯಾವ ಕೆಲಸವು ನಡೆಯುತ್ತಿಲ್ಲ ಎಂದು ದೂರಿದರು.

ಪ್ರತಿಭಟನೆ ಬಳಿಕ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗೆವಾಡಿ, ಭರತಕುಮಾರ ಎಚ್.ಟಿ, ಮಲ್ಲಿಕಾರ್ಜುನ ಎಚ್.ಟಿ, ಕಾರ್ಯಕರ್ತರಾದ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ಆಕಾಶ, ಶೋಭಾ ಎಸ್, ಬೌರಮ್ಮ ಪಡಶೆಟ್ಟಿ, ಗುರುಬಾಯಿ ಬಿರಾದಾರ, ಮಹಾದೇವಿ, ರೇಣುಕಾ, ಪೀರ ಜಮಾದಾರ, ನಜೀರ್‌ ಪಟೇಲಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT