ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ಕನ್ನೂರ–ತಿಡಗುಂದಿ ನಡುವಿನ ರಸ್ತೆಯಲ್ಲಿ ಬಿದ್ದ ತಗ್ಗು–ಗುಂಡಿಗಳು
ಆನಂದ ರಾಠೋಡ
Published 23 ಜೂನ್ 2024, 5:03 IST
Last Updated 23 ಜೂನ್ 2024, 5:03 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ಕನ್ನೂರ–ತಿಡಗುಂದಿ ನಡುವಿನ ರಸ್ತೆಯಲ್ಲಿ ತಗ್ಗು–ಗುಂಡಿಗಳು ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ–52ರ ತಿಡಗುಂದಿ ಕ್ರಾಸ್‌ನಿಂದ ಆರಂಭವಾಗುವ ರಸ್ತೆ ತಾಲ್ಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಕನ್ನೂರ ವರೆಗೆ ವಾಹನ ಸವಾರರು, ರಸ್ತೆಯಲ್ಲಿ ಬಿದ್ದಿರುವ ತಗ್ಗು–ಗುಂಡಿಗಳ ಜೊತೆಗೆ ಸಾಗುವ ದುಸ್ಥಿತಿ ಎದುರಾಗಿದೆ. 

ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಪಂಢರಾಪುರ, ಕನ್ನೂರಿನ ಶಾಂತಿಕುಟೀರ, ಇಂಚಗೇರಿ ಮಠಕ್ಕೆ ತೆರಳುವ ಭಕ್ತರಿಗೆ ಸಂಪರ್ಕಕೊಂಡಿಯಾದ ಈ ರಸ್ತೆ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಹಾಳಾಗಿದೆ.

ತಾಲ್ಲೂಕಿನ ಪ್ರಮುಖ ಗ್ರಾಮಗಳಾದ ಮಖಣಾಪುರ ಎಲ್‌.ಟಿ.1, ಜಿಗಜೀವಣಿ, ದೇವರ ನಿಂಬರಗಿ, ಚಡಚಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ.

ಈ ಮಾರ್ಗವಾಗಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಇನ್ನೂ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ರಸ್ತೆಯಲ್ಲಿ ತಗ್ಗು, ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು, ಅಪಘಾತಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ. ಅನಾರೋಗ್ಯ ಪೀಡಿತರು, ಗರ್ಭಿಣಿಯರು ಈ ರಸ್ತೆಯಲ್ಲಿ ಸಂಚರಿಸುವುದು ತ್ರಾಸದಾಯಕವಾಗಿದೆ. 

ಈ ರಸ್ತೆ ಯಾವಾಗ ದುರಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ಕಾದು ಕುಳಿತಿದ್ದಾರೆ. ವಿಜಯಪುರ–ಚಡಚಣಕ್ಕೆ ಸಂಚರಿ ಸಬೇಕಾದ ಜನರು ಹದಗೆಟ್ಟ ರಸ್ತೆಗೆ ಹೆದರಿ ದೂರವಾದರು ಪರವಾಗಿಲ್ಲ ಎಂದು ಮಾರ್ಗ ಬದಲಾಯಿಸಿ ಹೋಗುವಂತಾಗಿದೆ. 

ತಿಡಗುಂಡಿಯಿಂದ ಕನ್ನೂರಿನವರೆಗೆ ರಸ್ತೆಯನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ದುರಸ್ತಿ ಮಾಡಿ ಸುಗಮಸಂಚಾರ ಕಲ್ಪಿಸಿಕೊಡಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮಖಣಾಪುರ ತಾಂಡಾದ ನಿವಾಸಿ ರವಿ ಸೇವು ಲಮಾಣಿ ಎಚ್ಚರಿಸಿದ್ದಾರೆ.

ಹದಗೆಟ್ಟ ರಸ್ತೆಯಿಂದ ನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಮಳೆಗೆ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿದೆ.
ಚೇತನ ಚಹ್ವಾಣ, ಮಕಣಾಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT