ಸೋಮವಾರ, ಜೂಲೈ 6, 2020
23 °C
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಿಲ್ಲಾ ಮಟ್ಟದ ಜಾಗೃತಿ ಸಭೆ

ನಾಗರಿಕ ಸೇವಾ ಪರೀಕ್ಷೆ ತರಬೇತಿ ಕೇಂದ್ರ ಆರಂಭಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ವ್ಯಾಪ್ತಿಯಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾವಂತ ನಿರುದ್ಯೋಗಿಗಳಿಗೆ ನಾಗರಿಕ ಸೇವಾ ಪರೀಕ್ಷೆ ಮತ್ತು ಹುದ್ದೆಗಳಿಗೆ ಸಂಬಂಧಪಟ್ಟಂತೆ ಪರೀಕ್ಷಾ ಪೂರ್ವ ತರಬೇತಿ ನೀಡಲು ತರಬೇತಿ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಅವಶ್ಯಕವಿರುವ ಸ್ಮಶಾನ ಭೂಮಿ ಕಾಯ್ದಿರಿಸಬೇಕು. ಆದ್ಯತೆ ಮೇಲೆ ಅವಶ್ಯಕತೆಯಿರುವ ಕಡೆಯಲ್ಲಿ ಭೂಮಿ ಖರೀದಿಸಬೇಕು ಎಂದು ಸೂಚಿಸಿದರು.

ಈಗಾಗಲೇ ಜಿಲ್ಲೆಯ 144 ಗ್ರಾಮಗಳಿಗೆ ಮತ್ತು ಉಪವಿಭಾಗ ಮಟ್ಟದಲ್ಲಿ ಸ್ಮಶಾನ ಭೂಮಿ ಸೌಲಭ್ಯ ಕಲ್ಪಿಸಲಾಗಿದೆ. ಅದರಂತೆ ತೊರವಿ ಗ್ರಾಮದಲ್ಲಿ 4 ಎಕರೆ ಜಮೀನನ್ನು ಸ್ಮಶಾನಕ್ಕಾಗಿ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಸ್‍ಎಫ್‍ಸಿ ಅನುದಾನವನ್ನು ಸಂಬಂಧಿಸಿದ ಕಾಮಗಾರಿಗಳಿಗಾಗಿ ಬಳಸಬೇಕು. ಅದರಂತೆ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 1 ಎಕರೆಗಿಂತಲೂ ಕಡಿಮೆ ಜಮೀನು ಹೊಂದಿದವರಿಗೂ ಸ್ಪಿಂಕ್ಲರ್ ಪೈಪ್ ನೀಡುವ ವ್ಯವಸ್ಥೆಯಾಗಬೇಕು ಎಂದರು.

ವಿಜಯಪುರ ನಗರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಯ ನವೀಕರಣಗೊಳಿಸಲು ಮತ್ತು ವೃತ್ತ ಸೌಂದರೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

₹45.38 ಲಕ್ಷ ಪರಿಹಾರ ವಿತರಣೆ:

ಶೋಷಣೆಗೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 23 ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ₹45.38 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ ತಿಳಿಸಿದರು.

ಜಿಲ್ಲೆಯಲ್ಲಿ 2020ರ ಜನವರಿ 1 ರಿಂದ ಮೇ 31 ವರೆಗೆ ಒಟ್ಟು 33 ದೌರ್ಜನ್ಯ ಪ್ರಕರಣಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲೆ ನಡೆದ ಬಗ್ಗೆ ದಾಖಲಾಗಿದ್ದು, ಈ ಪೈಕಿ 23 ಪ್ರಕರಣಗಳಲ್ಲಿ ಸಂತ್ರಸ್ತರಿಗೆ ₹ 45.38 ಲಕ್ಷ ವಿತರಿಸಲಾಗಿದ್ದು, ಇನ್ನೂ 10 ಪ್ರಕರಣಗಳಲ್ಲಿ ₹ 11.75 ಲಕ್ಷ ವಿತರಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಉಪ ವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ, ಡಿಎಸ್ಪಿ ಲಕ್ಷ್ಮೀ ನಾರಾಯಣ್, ಸಮಿತಿಯ ಸದಸ್ಯರಾದ ಅಡಿವೆಪ್ಪ ಸಾಲಗಲ್ಲ, ಅರವಿಂದ ಸಾಲವಾಡಗಿ, ರಾಜಶೇಖರ್ ಕೂಚಬಾಳ, ಸುರೇಶ ಮನೂರ, ವಿನಾಯಕ ಗುಣಸಾಗರ್, ಬಸವರಾಜ ಪೂಜಾರಿ, ಗಣಪತಿ ಬಾಣಿಕೋಲ, ಶಿವಾನಂದ ಪಟ್ಟೇದ, ಅಶೋಕ ಕರೆಕಲ್ಲ, ಮುತ್ತಣ್ಣ ಸಾಸನೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು