ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ; ಹಿಂಗಾರು ಹಂಗಾಮಿಗೆ ನೀರಿಲ್ಲ..?

ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆ; ನಾಲ್ಕೈದು ಜಿಲ್ಲೆಗಳ ಹಿಂಗಾರು ಕೃಷಿಗೆ ಹೊಡೆತ
Last Updated 16 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಆಲಮಟ್ಟಿ: ಇಲ್ಲಿನ ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರ ಪರಿಣಾಮ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಲಬುರ್ಗಿ, ರಾಯಚೂರು, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ 5 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಭೂಮಿಗೆ ಈ ಬಾರಿ ಹಿಂಗಾರು ಹಂಗಾಮಿನ ನೀರು ಹರಿಯುವುದು ಅನುಮಾನವಾಗಿದೆ.

ಇದೇ 12ರ ಶುಕ್ರವಾರ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಭೀಮರಾಯನಗುಡಿ ಮುಖ್ಯ ಎಂಜಿನಿಯರ್, ಹಿಂಗಾರು ಹಂಗಾಮಿಗೆ ನೀರು ಹರಿಸಲು, ಅಗತ್ಯವಿರುವಷ್ಟು ನೀರು ಜಲಾಶಯದಲ್ಲಿ ಲಭ್ಯವಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ‘ಪ್ರಜಾವಾಣಿ’ಗೆ ತಿಳಿದು ಬಂದಿದೆ.

‘ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಗೆ ಸೆ.13ರಿಂದಲೇ ಒಳಹರಿವು ಸ್ಥಗಿತಗೊಂಡಿದೆ. ಇದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಎರಡೂ ಜಲಾಶಯಗಳಲ್ಲಿ ನೀರಿನ ಮಟ್ಟವನ್ನು ಎಂಡಿಡಿಎಲ್ ಮಟ್ಟಕ್ಕೆ ಕಾಯ್ದುಕೊಳ್ಳಬೇಕಿದೆ.

ನ.15ರಂದು ನೀರಾವರಿಗಾಗಿ ಜಲಾಶಯದಲ್ಲಿ ಉಳಿಯುವುದು ಕೇವಲ 2.01 ಟಿಎಂಸಿ ಅಡಿ ನೀರು. ಇದನ್ನು ತುರ್ತು ಸಂದರ್ಭದಲ್ಲಿ ಬಳಸಲು ಕಾಯ್ದಿರಿಸಿದರೆ, ಹಿಂಗಾರು ಹಂಗಾಮಿಗೆ ಯಾವುದೇ ನೀರಿನ ಲಭ್ಯತೆ ಇರುವುದಿಲ್ಲ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಏಕೆ ನೀರಿಲ್ಲ..?:

‘ಆಲಮಟ್ಟಿ ಜಲಾಶಯಕ್ಕೆ ಪ್ರಸಕ್ತ ವರ್ಷದಲ್ಲಿ 487 ಟಿಎಂಸಿ ಅಡಿ ನೀರು ಹರಿದು ಬಂದಿದೆ. 377 ಟಿಎಂಸಿ ಅಡಿ ನೀರು ನಾರಾಯಣಪುರಕ್ಕೆ ಹರಿದಿದೆ (ಸೆ.13ರವರೆಗೆ). ಸೆ.13ರಿಂದ ಇಲ್ಲಿಯವರೆಗೆ 38 ಟಿಎಂಸಿ ಅಡಿ ನೀರನ್ನು ನಾರಾಯಣಪುರಕ್ಕೆ ಹರಿಸಲಾಗಿದ್ದು, ಇನ್ನೂ 37 ಟಿಎಂಸಿ ಅಡಿ ನೀರು ಹರಿಸಬೇಕಿದೆ’ ಎನ್ನುತ್ತಾರೆ ಮುಖ್ಯ ಎಂಜಿನಿಯರ್ ಟಿ.ವೆಂಕಟೇಶ.

‘ಪ್ರತಿ ವರ್ಷವೂ ವಾರಾಬಂಧಿಗೆ ಅನುಗುಣವಾಗಿ (14 ದಿನ ಚಾಲು, 12 ದಿನ ಬಂದ್) ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಈ ಬಾರಿ ಒಳಹರಿವು ಇರುವವರೆಗೂ ಜುಲೈ 17ರಿಂದ ಸೆ.13ರವರೆಗೆ ನಿರಂತರವಾಗಿ ನೀರು ಹರಿಸಲಾಗಿದೆ.

ಬಿಸಿಲಿನ ತೀವ್ರತೆ, ತೇವಾಂಶದ ಕೊರತೆ, ಹಿಂಗಾರು ಮಳೆ ಸುರಿಯದ ಕಾರಣ, ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದವು. ರೈತರ ಒತ್ತಾಯದ ಮೇರೆಗೆ ವಾರಾಬಂಧಿ ಅವಧಿಯಲ್ಲಿ ಕಡಿತಗೊಳಿಸಿ, ಸೆ.26ರಿಂದ 2 ದಿನಕ್ಕೆ ಇಳಿಸಲಾಗಿದೆ.

ಸದ್ಯ 13ದಿನ ಚಾಲು, 2 ದಿನ ಬಂದ್ ಅವಧಿಯನ್ನು ನಿಗದಿಗೊಳಿಸಿ, ನ.14ರವರೆಗೆ ಮುಂಗಾರು ಹಂಗಾಮಿಗೆ ನಿರಂತರ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಎರಡೂ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ’ ಎಂದು ಅವರು ಹೇಳಿದರು.

ನೀರಿನ ಲಭ್ಯತೆ

* 92.395 ಟಿಎಂಸಿ ಅಡಿ ನೀರು ಎರಡೂ ಜಲಾಶಯಗಳಿಂದ ಬಳಕೆಗೆ ಲಭ್ಯ

* 45.94 ಟಿಎಂಸಿ ಅಡಿ ನೀರು ನ.14ರವರೆಗೂ ನೀರಾವರಿ ಬಳಕೆಗೆ

* 46.455 ಟಿಎಂಸಿ ಅಡಿ ನೀರು ಮುಂಗಾರು ಹಂಗಾಮಿನ ಬಳಿಕ ಉಳಿಯುವುದು

* 44.44 ಟಿಎಂಸಿ ಅಡಿ ನೀರು ಎರಡೂ ಜಲಾಶಯಗಳ ಭಾಷ್ಪೀಭವನ, ಕುಡಿಯುವ ನೀರು, ಕೈಗಾರಿಕೆ ಇನ್ನಿತರ ಬಳಕೆಗೆ ಬೇಕಿರುವುದು

* 2.01 ಟಿಎಂಸಿ ಅಡಿ ನೀರು ಉಳಿಯುವುದು

ನೀರಾವರಿ ಹೊರತುಪಡಿಸಿ ನೀರಿನ ಅಗತ್ಯತೆಯ ವಿವರ (ಜೂನ್ 2019ರವರೆಗೆ)

ಆಲಮಟ್ಟಿಯ ಲಾಲ್‌ಬಹದ್ದೂರ್‌ ಶಾಸ್ತ್ರಿ ಜಲಾಶಯ

* 1.34 ಟಿಎಂಸಿ ಅಡಿ ನೀರು ಗಲಗಲಿ ಬ್ಯಾರೇಜ್‌ ತುಂಬಲು

* 1 ಟಿಎಂಸಿ ಅಡಿ ನೀರು ಕೆರೆ ತುಂಬಿಸಲು

* 4.30 ಟಿಎಂಸಿ ಅಡಿ ನೀರು ಚಿಕ್ಕಪಡಸಲಗಿ ಬ್ಯಾರೇಜ್‌ ಭರ್ತಿಗೆ

* 2 ಟಿಎಂಸಿ ಅಡಿ ನೀರು ಕುಡಿಯುವ ನೀರಿಗಾಗಿ

* 0.50 ಟಿಎಂಸಿ ಅಡಿ ನೀರು ಕೂಡಗಿ ಎನ್‌ಟಿಪಿಸಿ ಘಟಕಕ್ಕೆ

* 8 ಟಿಎಂಸಿ ಅಡಿ ನೀರು ಭಾಷ್ಪೀಕರಣಕ್ಕೆ

* 6.50 ಟಿಎಂಸಿ ಅಡಿ ನೀರು ಹಿನ್ನೀರಿನ ಬಳಕೆ

* 1.50 ಟಿಎಂಸಿ ಅಡಿ ನೀರು ಮರೋಳ ಹನಿ ನೀರಾವರಿಗಾಗಿ

* 1 ಟಿಎಂಸಿ ಅಡಿ ನೀರು ತುಬಚಿ–ಬಬಲೇಶ್ವರ ಏತ ನೀರಾವರಿಗಾಗಿ

* 26.14 ಟಿಎಂಸಿ ಅಡಿ ನೀರು ಒಟ್ಟು ಬೇಕಿರುವುದು

ನಾರಾಯಣಪುರ ಜಲಾಶಯ

* 4 ಟಿಎಂಸಿ ಅಡಿ ನೀರು ಕುಡಿಯಲು ಮೀಸಲು

* 7 ಟಿಎಂಸಿ ಅಡಿ ನೀರು ರಾಯಚೂರು ಶಾಖೋತ್ಪನ್ನ ಘಟಕಕ್ಕೆ

* 4.50 ಟಿಎಂಸಿ ಅಡಿ ನೀರು ಭಾಷ್ಪೀಕರಣಕ್ಕೆ

* 1.80 ಟಿಎಂಸಿ ಅಡಿ ನೀರು ಹಿನ್ನೀರಿನ ಬಳಕೆಗೆ

* 1 ಟಿಎಂಸಿ ಅಡಿ ನೀರು ಕೈಗಾರಿಕೆಗಳಿಗೆ

* 18.3 ಟಿಎಂಸಿ ಅಡಿ ನೀರು ಒಟ್ಟು ಬಳಕೆಗೆ ಬೇಕಿರುವುದು

ಮಾಹಿತಿ: ಕೆಬಿಜೆಎನ್‌ಎಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT