ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ವಾರ್ಡ್‌ಗಳಿಗೆ ಸಮಾನ ಆದ್ಯತೆ; ತಾರತಮ್ಯಕ್ಕೆ ತೆರೆ

ವಿಜಯಪುರ ಮಹಾನಗರ ಪಾಲಿಕೆ ನೂತನ ಮೇಯರ್‌ ಮಹೆಜಬೀನ್‌ ಹೊರ್ತಿ
Published 20 ಜನವರಿ 2024, 4:58 IST
Last Updated 20 ಜನವರಿ 2024, 4:58 IST
ಅಕ್ಷರ ಗಾತ್ರ

ವಿಜಯಪುರ: ಈ ವಾರ್ಡ್‌ನಲ್ಲಿ ಹಿಂದುಗಳು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ನಿರ್ಲಕ್ಷ್ಯವಾಗಲಿ, ಆ ವಾರ್ಡ್‌ನಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಹೆಚ್ಚಿನ ಆದ್ಯತೆಯಾಗಲಿ, ಈ ವಾರ್ಡ್‌ ಕಾಂಗ್ರೆಸ್‌ಗೆ ಸೇರಿದೆ ಎಂಬ ಕಾರಣಕ್ಕೆ ಮೊದಲ ಆದ್ಯತೆ ನೀಡುವುದಾಗಲಿ, ಆ ವಾರ್ಡ್‌ ಬಿಜೆಪಿಗೆ ಸೇರಿದೆ ಎಂಬ ಕಾರಣಕ್ಕೆ ಕಡೆಗಣಿಸುವುದಾಗಲಿ ಮಾಡದೇ, ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಎಲ್ಲ 35 ವಾರ್ಡ್‌ಗಳಿಗೂ ಸಮಾನ ಆದ್ಯತೆ ನೀಡಲಾಗುವುದು ಎಂದು ನೂತನ ಮೇಯರ್‌ ಮಹೆಜಬೀನ್‌ ಅಬ್ದುಲ್‌ ರಜಾಕ್‌ ಹೊರ್ತಿ ಭರವಸೆ ನೀಡಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಆಯ್ದ 17 ವಾರ್ಡ್‌ಗಳಿಗೆ ಮಾತ್ರ ವಿಶೇಷ ಆದ್ಯತೆ ನೀಡಿ, ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಸೇರಿದಂತೆ ಸಕಲ ಸೌಲಭ್ಯ ಒದಗಿಸಲಾಗಿದೆ.  ಆದರೆ, ಇನ್ನುಳಿದ 18 ವಾರ್ಡ್‌ಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿತ್ತು. ತಾರತಮ್ಯಕ್ಕೆ ಒಳಗಾಗಿರುವ ವಾರ್ಡ್‌ಗಳಿಗೆ ವಿಶೇಷ ಆದ್ಯತೆ ಮೇರೆಗೆ ಮೂಲಸೌಲಭ್ಯ ಒದಗಿಸಲಾಗುವುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ, ಶಾಸಕರಾದ ವಿಠಲ ಕಟಕಧೋಂಡ, ಬಸನಗೌಡ ಪಾಟೀಲ ಯತ್ನಾಳ, ಸುನೀಲಗೌಡ ಪಾಟೀಲ, ಪಕ್ಷದ ಮುಖಂಡರಾದ ಅಬ್ದುಲ್ ಹಮೀದ್‌ ಮುಶ್ರೀಫ್‌ ಅವರ ಮಾರ್ಗದರ್ಶನ, ಸಲಹೆ ಮೇರೆಗೆ ಮಹಾನಗರ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಿ, ಹಗಲು ರಾತ್ರಿ ಕಾರ್ಯನಿರ್ವಹಿಸಿ ಅವರ ಹೆಸರು ಉಳಿಸಲು ಆದ್ಯತೆ ನೀಡಲಾಗುವುದು ಎಂದರು.

24X7 ನೀರು ಪೂರೈಕೆಗೆ ಆದ್ಯತೆ: 2016ರಲ್ಲಿ ಜಾರಿಗೆ ಬಂದ ಅಮೃತ್‌ ಯೋಜನೆ 2019ರಲ್ಲಿ ಪೂರ್ಣಗೊಂಡು ನಗರದ ಮನೆಮನೆಗೆ 24X7 ನಿರಂತರ ನೀರು ಪೂರೈಕೆಯಾಗಬೇಕಿತ್ತು. ಆದರೆ, ಜಲಮಂಡಳಿ ಅಧಿಕಾರಿಗಳ ಭ್ರಷ್ಟಾಚಾರ, ನಿರ್ಲಕ್ಷ್ಯದಿಂದ ಯೋಜನೆ ಅಪೂರ್ಣವಾಗಿದೆ. ಇನ್ನೂ ಶೇ60ರಷ್ಟು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಹಣ ದುರ್ಬಳಕೆ ಮಾಡಿಕೊಂಡಿರುವ ಜಲಮಂಡಳಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಪತ್ರ ಬರೆಯಲಾಗಿದೆ ಎಂದರು.

ಒಳಚರಂಡಿ ಅವ್ಯವಸ್ಥೆ: ಎಡಿಬಿ ಸ್ಕೀಮ್‌ನಲ್ಲಿ ₹134 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಒಳಚರಂಡಿ ಯೋಜನೆಯೂ ಅಪೂರ್ಣವಾಗಿದೆ. ಕೆಲವೆಡೆ ಅವೈಜ್ಞಾನಿಕವಾಗಿ ಅನುಷ್ಠಾನ ಮಾಡಲಾಗಿದೆ. ಅನಧಿಕೃತ ಬಡಾವಣೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಅಧಿಕೃತ ಬಡಾವಣೆಗಳಿಗೆ ಸಂಪರ್ಕವೇ ಕಲ್ಪಿಸಿಲ್ಲ. ಅವ್ಯವಸ್ಥೆಯ ಆಗರವಾಗಿದ್ದು, ಇದನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಎಲ್‌ಇಡಿ ಬಲ್ಬ್‌ ಅಳವಡಿಕೆ: ವಿದ್ಯುತ್‌ ಉಳಿತಾಯದ ದೃಷ್ಟಿಯಿಂದ ನಗರದಲ್ಲಿ ಈಗಿರುವ ಬೀದಿ ದೀಪಗಳನ್ನು ಬದಲಾಯಿಸಿ 27 ಸಾವಿರ ಎಲ್‌ಇಡಿ ಬಲ್ಬ್‌ ಅಳವಡಿಕೆಗೆ ಒತ್ತು ನೀಡಲಾಗುವುದು. ಜೊತೆಗೆ ನಗರದಲ್ಲಿ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆಗೆ ಆದ್ಯತೆ ನೀಡಲಾಗುವುದು ಎಂದರು.

ಟಾಂಗಾ ಪುನಶ್ಚೇತನ: ವಿಜಯಪುರ ನಗರ ವಿಶ್ವ ಪ್ರಸಿದ್ಧ ಪ್ರವಾಸಿತಾಣವಾಗಿದ್ದು, ದೇಶ–ವಿದೇಶದ ಪ್ರವಾಸಿಗರು ಬರುತ್ತಾರೆ. ಅವರಿಗೆ ನಮ್ಮಲ್ಲಿಯ ಸಾಂಪ್ರಾದಾಯಿಕ ಟಾಂಗಾಗಳ ಮೂಲಕ ಪ್ರವಾಸಿತಾಣಗಳಿಗೆ ಭೇಟಿ ನೀಡಿ ಆನಂದಿಸುವಂತೆ ಮಾಡುವ ಉದ್ದೇಶದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಟಾಂಗಾವಾಲಾಗಳ ಪುನಶ್ಚೇತನಕ್ಕೆ ಪಾಲಿಕೆಯಿಂದ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಸ್ವಚ್ಛತೆ, ಹಸಿರೀಕರಣ: ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬಹಳಷ್ಟು ಅನುದಾನ ಬರುತ್ತಿದೆ. ಆದರೆ, ಸ್ವಚ್ಛತೆ ಮರೀಚಿಕೆಯಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸಚಿವ ಎಂ.ಬಿ.ಪಾಟೀಲ ಅವರ ಆಶಯದಂತೆ ಕೋಟಿ ವೃಕ್ಷ ಅಭಿಯಾನಕ್ಕೆ ಒತ್ತು ನೀಡಿ, ಹಸಿರೀಕರಣ ಮಾಡಲಾಗುವುದು ಎಂದು ಹೇಳಿದರು.

ಜನರ ಸಹಭಾಗಿತ್ವ: ಐತಿಹಾಸಿಕ ನಗರದ ಸೌಂದರ್ಯೀಕರಣಕ್ಕೆ ಜನರ ಸಹಕಾರ, ಸಹಭಾಗಿತ್ವ ಅತೀ ಮುಖ್ಯ. ಪಾಲಿಕೆ ಜೊತೆಗೆ ಜನರು ಕೈಜೋಡಿಸಬೇಕು. ತೆರಿಗೆಯನ್ನು ಕಾಲಕಾಲಕ್ಕೆ ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಈಗಾಗಲೇ ಭೇಟಿಯಾಗಿ ಅಭಿವೃದ್ಧಿ ಕಾರ್ಯಗಳಿಗಾಗಿ ಮಹಾನಗರ ಪಾಲಿಕೆಗೆ ಹೆಚ್ಚಿನ ಅನುದಾನ ಕೇಳಲಾಗಿದ್ದು ಭರವಸೆ ಸಿಕ್ಕಿದೆ

–ಮಹೆಜಬೀನ್‌ ಅಬ್ದುಲ್‌ ರಜಾಕ್‌ ಹೊರ್ತಿ ಮೇಯರ್‌ ಮಹಾನಗರ ಪಾಲಿಕೆ ವಿಜಯಪುರ

ಗುಂಟಾ ಪ್ಲಾಟ್‌ ಸಕ್ರಮಕ್ಕೆ ಆದ್ಯತೆ

‘ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ 30ರಷ್ಟು ಗುಂಟಾ ಪ್ಲಾಟ್‌ಗಳಿವೆ. ಇವುಗಳನ್ನು ಅಕ್ರಮ–ಸಕ್ರಮ ಯೋಜನೆಯಡಿ ಸಕ್ರಮ ಮಾಡಿದರೆ ಪಾಲಿಕೆಗೆ ಮತ್ತು ಸರ್ಕಾರಕ್ಕೆ ಆದಾಯ ಬರಲಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದಿಂದ ಸಕ್ರಮ ಮಾಡಿಸಲು ಆದ್ಯತೆ ನೀಡಲಾಗುವುದು’ ಎಂದು ಮೇಯರ್‌ ಹೊರ್ತಿ ಹೇಳಿದರು.

ಪಾಲಿಕೆ ಬಜೆಟ್‌ಗೆ ಸಿದ್ಧತೆ 

‘ಫೆಬ್ರುವರಿಯಲ್ಲಿ ಬಜೆಟ್‌ ಮಂಡಿಸಲು ಸಿದ್ಧತೆ ಆರಂಭಿಸಲಾಗಿದೆ’ ಎಂದು ಮೇಯರ್‌ ಮಹೆಜಬೀನ್‌ ಅಬ್ದುಲ್‌ ರಜಾಕ್‌ ಹೊರ್ತಿ ತಿಳಿಸಿದರು. ‘ಬಜೆಟ್‌ಗೆ ಪೂರ್ವಭಾವಿಯಾಗಿ ನಗರದ ಸಾರ್ವಜನಿಕರು ಸಂಘ ಸಂಸ್ಥೆ ಪಾಲಿಕೆಯ ಎಲ್ಲ ಸದಸ್ಯರು ಜನಪ್ರತಿನಿಧಿಗಳು ಅಧಿಕಾರಿಗಳ ಸಲಹೆ ಮೇರೆಗೆ ಜನಸಾಮಾನ್ಯರಿಗೆ ಅನುಕೂಲವಾಗುವ ಜನಪರ ಬಜೆಟ್‌ ಸಿದ್ಧಪಡಿಸಲಾಗುವುದು’ ಎಂದು ಹೇಳಿದರು.

ಮಾಸ್ಟರ್ ಪ್ಲಾನ್‌ ಅನುಷ್ಠಾನ 

‘ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಮುಖ ರಸ್ತೆಗಳಲ್ಲಿ ಜನಸಾಮಾನ್ಯರಿಗೆ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಮಾಸ್ಟರ್ ಪ್ಲಾನ್‌ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು’ ಎಂದು ಮೇಯರ್‌ ಹೊರ್ತಿ ತಿಳಿಸಿದರು. ‘ನಗರದ ಗಾಂಧಿಚೌಕಿಯಲ್ಲಿ ಮೇಲ್ಸೇತುವೆ ನಿರ್ಮಾಣ ನಗರದ ವಿವಿಧೆಡೆ ಸಂಚಾರ ದಟ್ಟಣೆ ತಡೆಗೆ ಅಗತ್ಯ ಕ್ರಮಕೈಗೊಳ್ಳುವ ಸಂಬಂಧ ಟ್ರಾಫಿಕ್‌ ಪೊಲೀಸ್‌ ಜೊತೆ ಚರ್ಚಿಸಲಾಗಿದೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT