ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಕಾಂಗ್ರೆಸ್‌ಗೆ ಅಧಿಕಾರ ನಿರೀಕ್ಷೆ; ಬಿಜೆಪಿ ಪಾಳೆಯಲ್ಲಿ ನಿರಾಸೆ

Published 6 ಜನವರಿ 2024, 5:05 IST
Last Updated 6 ಜನವರಿ 2024, 5:05 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್‌ ಆಯ್ಕೆಗೆ ಇದ್ದ ಬಹುತೇಕ ಅಡೆತಡೆಗಳು ನಿವಾರಣೆಯಾಗಿದ್ದು, 14 ತಿಂಗಳ ಬಳಿಕ ಚುನಾವಣೆ ನಡೆಸುವಂತೆ ಕೋರ್ಟ್‌ ಹಸಿರು ನಿಶಾನೆ ತೋರಿಸಿದೆ. ಜನವರಿ 9 ರಂದು ಮೂಹೂರ್ತ ನಿಗದಿಯಾಗಿದೆ.

ಚುನಾವಣೆ ದಿನಾಂಕ ಸಮೀಪಿಸುತ್ತಿದ್ದರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಂತಹ ಬಿರುಸಿನ ಚುಟುವಟಿಕೆಗಳು ಕಾಣಿಸುತ್ತಿಲ್ಲ. ಅತಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿರುವ ಬಿಜೆಪಿಯಲ್ಲಿ ಆಂತರಿಕ ರಾಜಕೀಯ ಬೆಳವಣಿಗೆಗಳು ನಿರಾಸೆ ಆವರಿಸುವಂತೆ ಮಾಡಿದೆ. ಹುರುಪಿನಲ್ಲಿರುವ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲು ತೆರೆಮರೆಯಲ್ಲಿ ತಂತ್ರ ರೂಪಿಸತೊಡಗಿದೆ. 

35 ಸದಸ್ಯ ಬಲ ಹೊಂದಿರುವ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17, ಕಾಂಗ್ರೆಸ್‌ 10, ಎಐಎಂಐಎಂ 2, ಜೆಡಿಎಸ್‌ 1 ಹಾಗೂ 5 ಪಕ್ಷೇತರ ಸದಸ್ಯರು ಇದ್ದಾರೆ. ಆದರೆ, ಎರಡು ದಿನಗಳ ಹಿಂದೆ ಪಾಲಿಕೆಯ 29ನೇ ವಾರ್ಡಿನ ಸದಸ್ಯ ವಿಜಯಕುಮಾರ ಬಿರಾದಾರ ಅನಾರೋಗ್ಯದಿಂದ ನಿಧನವಾಗಿರುವುದರಿಂದ ಬಿಜೆಪಿ ಬಲ 16ಕ್ಕೆ ಕುಸಿತವಾಗಿದೆ.

ಬಿಜೆಪಿ ನಿರಾಸಕ್ತಿ

ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಯಾವುದೇ ಸ್ಥಾನಮಾನ ಸಿಗದ ಕಾರಣಕ್ಕೆ ತೀವ್ರ ನಿರಾಸೆಗೊಂಡಿದ್ದು, ಪಕ್ಷದ ಮುಖಂಡರ ವಿರುದ್ಧವೇ ರಣಕಹಳೆ ಮೊಳಗಿಸಿದ್ದಾರೆ. ತಮ್ಮ ಸ್ಥಾನಮಾನದ ಚಿಂತೆಯಲ್ಲಿರುವ ಯತ್ನಾಳ ಅವರು ಸದ್ಯ  ಮೇಯರ್‌, ಉಪ ಮೇಯರ್‌ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೇ, ಅವರ ಬೆಂಬಲಿಗರೂ ಸಹ ಪಾಲಿಕೆ ಅಧಿಕಾರದ ಬಗ್ಗೆ ನಿರಾಸಕ್ತಿ ವಹಿಸಿದ್ದಾರೆ. 

ಮಹಾನಗರ ಪಾಲಿಕೆಯು ಶಾಸಕ ಯತ್ನಾಳ ಅವರ ಕ್ಷೇತ್ರಕ್ಕೆ ಸಂಬಂಧಪಟ್ಟಿರುವ ಕಾರಣ ಜಿಲ್ಲೆಯ ಇನ್ನುಳಿದ ಬಿಜೆಪಿ ಮುಖಂಡರು ಈ ಬಗ್ಗೆ ಆಸಕ್ತಿ ವಹಿಸಿಲ್ಲ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆಯೂ ಇದೇ ವೇಳೆ ನಡೆದಿರುವುದರಿಂದ ಚುನಾವಣೆಯ ಜವಾಬ್ದಾರಿಯನ್ನು ಯಾವೊಬ್ಬ ಬಿಜೆಪಿ ನಾಯಕರು ವಹಿಸಿಕೊಂಡಿಲ್ಲ. 

ಪಾಲಿಕೆಯ ಬಿಜೆಪಿ ಸದಸ್ಯರೇ ಚದುರಿಹೋಗಿದ್ದು, ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದರೂ ಅಚ್ಚರಿ ಇಲ್ಲ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದೆ.

ಕಾಂಗ್ರೆಸ್‌ಗೆ ಅಧಿಕಾರ?:

ಈಗಾಗಲೇ ಎಐಎಂಐಎಂ, ಜೆಡಿಎಸ್‌ ಮತ್ತು ಪಕ್ಷೇತರ ಸದಸ್ಯರು ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಬ್ಬರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಹಾಗೂ 10 ಮಂದಿ ಪಾಲಿಕೆ ಸದಸ್ಯರು ಸೇರಿದಂತೆ 22 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಹೊರ್ತಿ ಮೇಯರ್‌ ಹಳ್ಳಿ ಉಪಮೇಯರ್‌?

ಕಾಂಗ್ರೆಸ್‌ನಲ್ಲಿ ಮೇಯರ್‌ ಉಪ ಮೇಯರ್‌ ಹುದ್ದೆಗೆ ಭಾರಿ ಲಾಭಿ ನಡೆದಿದೆ. ಮೇಯರ್‌ ಹುದ್ದೆಗೆ ಮಹೆಜಬೀನ್ ಅಬ್ದುಲ್‌ ರಜಾಕ್‌ ಹೊರ್ತಿ (ವಾರ್ಡ್‌ ನಂ.34 ಸದಸ್ಯೆ) ಹಾಗೂ ಉಪ ಮೇಯರ್‌ ಸ್ಥಾನಕ್ಕೆ ದಿನೇಶ್ ಹಳ್ಳಿ (ವಾರ್ಡ್‌ ನಂ.18) ಅವರ ಹೆಸರು ಮುಂಚೂಣಿಯಲ್ಲಿದ್ದು ಬಹುತೇಕ ಇವರೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಬಿಜೆಪಿಯಿಂದ ಮೇಯರ್‌ ಉಪ ಮೇಯರ್‌ ಹುದ್ದೆಗೆ ಯಾರ ಹೆಸರು ಇನ್ನೂ ಅಂತಿಮವಾಗಿಲ್ಲ. ದಿನದಿಂದ ದಿನಕ್ಕೆ ಚುನಾವಣೆ ಕಾವು ಏರಿಕೆಯಾಗುತ್ತಿದ್ದು ಪಾಲಿಕೆ ಅಧಿಕಾರ ಯಾವ ಪಕ್ಷದ ಪಾಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಮೇಯರ್‌ ಉಪಮೇಯರ್‌ ಚುನಾವಣೆ ಜ.9ಕ್ಕೆ

ವಿಜಯಪುರ ಮಹಾನಗರ ಪಾಲಿಕೆಯ 21ನೇ ಅವಧಿಗೆ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳ ಆಯ್ಕೆಗೆ ಜ.9ರಂದು ಚುನಾವಣೆ ನಡೆಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ವೇಳಾಪಟ್ಟಿ ನಿಗದಿಗೊಳಿಸಿದ್ದಾರೆ. ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಚುನಾವಣೆ ನಡೆಯಲಿದೆ. ಮಹಾಪೌರ ಸ್ಥಾನವು ಸಾಮಾನ್ಯ ವರ್ಗಕ್ಕೆ ಹಾಗೂ ಉಪ ಮಹಾಪೌರ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದೆ. ಚುನಾವಣಾ ವೇಳಾಪಟ್ಟಿಯಂತೆ ಜ.9 ರಂದು ಬೆಳಿಗ್ಗೆ 9 ರಿಂದ 11ರ ವರೆಗೆ ನಾಮಪತ್ರಗಳ ಸ್ವೀಕಾರ ಮಧ್ಯಾಹ್ನ 1 ಗಂಟೆಯ ನಂತರ ಸಭೆ ಆರಂಭಿಸಿ ಪ್ರಮಾಣ ವಚನ ಹಾಜರಾತಿ ಕೋರಂ ಪರಿಶೀಲನೆ ಕ್ರಮಬದ್ಧ ನಾಮಪತ್ರಗಳ ಘೋಷಣೆ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು ಉಮೇದುವಾರರ ಪಟ್ಟಿ ಘೋಷಣೆ ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪಾಲಿಕೆಯಲ್ಲಿ ಅತೀ ಹೆಚ್ಚು ಸ್ಥಾನ ಬಿಜೆಪಿಗೆ ಇದೆ. ಬಹುಮತ ಸಾಬೀತಿಗೆ ಜೆಡಿಎಸ್‌ ಪಕ್ಷೇತರ ಸದಸ್ಯರ ಬೆಂಬಲಯಾಚಿಸಿದ್ದೇವೆ. ಗೆಲುವಿಗೆ ಅಗತ್ಯ ತಂತ್ರ ರೂಪಿಸುತ್ತಿದ್ದೇವೆ –
ಆರ್‌.ಎಸ್‌.ಪಾಟೀಲ ಕೂಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ವಿಜಯಪುರ
ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷದ ಸದಸ್ಯರೇ ಮೇಯರ್‌ ಉಪ ಮೇಯರ್‌ ಆಗುವುದು ಖಚಿತ. ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಮ್ಮ ಪಕ್ಷದ ಹಿರಿಯರು ಸಚಿವರು ಶಾಸಕರು ತೊಡಗಿದ್ದಾರೆ.
ರಾಜು ಆಲಗೂರ, ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT