ಶುಕ್ರವಾರ, ಡಿಸೆಂಬರ್ 4, 2020
22 °C
ಭೂಮಿಯಲ್ಲಿ ನಡೆಯುತ್ತಿರುವ ಸಹಜ ಪ್ರಕ್ರಿಯೆ; ಮಳೆಗಾಲದಲ್ಲಿ ಮಾಮೂಲು; ಭಯಪಡುವ ಅಗತ್ಯವಿಲ್ಲ

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನದ ಸಾಧ್ಯತೆ ಅಲ್ಲಗಳೆದ ತಜ್ಞರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಭೂಕಂಪನ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ ಹೇಳಿದರು.

ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ, ಹುಬನೂರ ಮತ್ತು ಸಿದ್ಧಾಪೂರ ಕೆ. ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸದ ನಂತರ ಅವರು ಮಾತನಾಡಿದರು.

ಜಿಲ್ಲೆಯ ಕೋಲ್ಹಾರ ತಾಲ್ಲೂಕಿನ ಮಲಘಾಣ, ಮಸೂತಿ ಬಬಲೇಶ್ವರ ತಾಲ್ಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲ್ಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ವ್ಯಾಪ್ತಿಯಲ್ಲಿ ಭೂಮಿಯೊಳಗೆ ಭಾರೀ ಸ್ಪೋಟದ ಶಬ್ಧಗಳು ಬರುತ್ತಿರುವ ಪರಿಶೀಲನೆ ನಡೆಸಲಾಗಿದೆ ಎಂದರು.

ಜಿಲ್ಲೆಯು ಅತೀ ಕಡಿಮೆ ಭೂಕಂಪನದ ವಲಯದಲ್ಲಿ ಬರುವುದರಿಂದ ಇಲ್ಲಿ ಯಾವುದೇ ಭೂಕಂಪನದ ಸಾಧ್ಯತೆ ಇರುವುದಿಲ್ಲ. ಗ್ರಾಮಸ್ಥರ ಮಾಹಿತಿಯನುಸಾರ ಭೂಮಿಯಲ್ಲಿ ಈ ಶಬ್ಧವು ಮಳೆಗಾಲದಲ್ಲಿ ಮಾತ್ರ ಬರುತ್ತಿರುವುದರಿಂದ ಮಳೆ ನೀರು, ಅಂತರ್ಜಲ ತಲುಪುವ ಸಂದರ್ಭದಲ್ಲಿ ರಾಸಾಯನಿಕಗಳ ಸಮೀಕರಣದಿಂದ ಮತ್ತು ಭೂಮಿ ಪದರುಗಳಲ್ಲಿ ನೀರಿನ ಒತ್ತಡದಿಂದಾಗಿ ಇಂತಹ ಶಬ್ಧಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಆಲಮಟ್ಟಿ ವ್ಯಾಪ್ತಿಯಲ್ಲಿ ಭೂಕಂಪನ ಮಾಪನ ಉಪಕರಣವನ್ನು ಅಳವಡಿಸಲಾಗಿದ್ದು, 200 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ವರದಿ ದಾಖಲಾಗುತ್ತದೆ. ಅದರಂತೆ, ರಾಜ್ಯದಲ್ಲಿ ಒಟ್ಟು 14 ಇಂತಹ ಭೂಕಂಪನ ಮಾಪನಾ ಕೇಂದ್ರಗಳು ಸಹ ಉಪಗ್ರಹ ಆಧಾರಿತ ಮಾಹಿತಿ ನೀಡುತ್ತಿದ್ದು, ಜಿಲ್ಲೆಯ ಈ ಭಾಗಗಳಲ್ಲಿ ಆದ ಭೂಕಂಪನದ ಬಗ್ಗೆ ಯಾವುದೇ ವರದಿ ದಾಖಲಾಗಿರುವುದಿಲ್ಲ ಎಂದರು.

ಜಿಲ್ಲೆಯ ಜನತೆ ಹಾಗೂ ಸಂಬಂಧಪಟ್ಟ ಗ್ರಾಮಸ್ಥರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನಿರ್ಭಿತಿಯಿಂದ ಇರುವಂತೆ ತಿಳಿಸಿದರು.

ಅಧಿಕಾರಿಗಳ ತಂಡವು ಗ್ರಾಮಸ್ಥರಿಗೆ ವಿಡಿಯೊ ಮೂಲಕ ವೈಜ್ಞಾನಿಕ ಮಾಹಿತಿ ಮತ್ತು ಶಬ್ಧದ ಮೂಲ ಕಾರಣಗಳ ಬಗ್ಗೆ ಮನವರಿಕೆ ಮಾಡಿದರು.

ಭೂಮಿಯಲ್ಲಿ ಮಳೆಗಾಲದಲ್ಲಿ ಅಂತರ್ಜಲಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಿಂದ ಈ ಶಬ್ಧಗಳು ಕೇಳಿಬರುತ್ತಿದ್ದು, ನವೆಂಬರ್ ಅಥವಾ ಡಿಸೆಂಬರ್ ಅಂತ್ಯಕ್ಕೆ ಕಡಿಮೆಯಾಗುವ ಸಾಧ್ಯತೆ ಇದೆ. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಈ ಶಬ್ಧಗಳು ಬರದೇ ಇರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಲಭ್ಯವಾಗಿದ್ದು, ಮಳೆಗಾಲದ ನಂತರ ತನ್ನಿಂದ ತಾನೇ ಈ ಶಬ್ಧ ಕ್ಷೀಣಿಸಲಿದೆ ಎಂದು ಮನವರಿಕೆ ಮಾಡಿದರು.

ಈ ಭಾಗದ ಗ್ರಾಮಗಳ ಮೇಲೆ ತಜ್ಞರ ತಂಡವು ನಿರಂತರ ನಿಗಾ ಇಡಲಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ ದಿಕ್ಪಾಲ್, ತಹಶೀಲ್ದಾರ್‌ ಮ್ಯಾಗೇರಿ, ಗಣಿ ಮತ್ತು ಕಿರಿಯ ವೈಜ್ಞಾನಿಕ ಅಧಿಕಾರಿ ಕೆ.ಕೆ ಅಭಿನಯ ಹಾಗೂ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 

---

ವಿಜಯಪುರ ಜಿಲ್ಲಾಡಳಿತದಿಂದ ಭೂಕಂಪನ ಮಾಪನಾ ಕೇಂದ್ರ ಸ್ಥಾಪನೆ ಕುರಿತು ಶಿಫಾರಸು ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು
ಜಗದೀಶ, ವೈಜ್ಞಾನಿಕ ಅಧಿಕಾರಿ, ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು