ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಸಂಘ ಸತತ 12 ವರ್ಷಗಳ ಕಾಲ ಲಾಭದಲ್ಲಿ: ಬಿ.ಬಿ. ಗುಡ್ಡದ

Published : 20 ಸೆಪ್ಟೆಂಬರ್ 2024, 14:29 IST
Last Updated : 20 ಸೆಪ್ಟೆಂಬರ್ 2024, 14:29 IST
ಫಾಲೋ ಮಾಡಿ
Comments

ಇಂಡಿ: ‘ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಸತತ 12 ವರ್ಷಗಳ ಕಾಲ ಲಾಭದಲ್ಲಿದೆ. ಇದಕ್ಕೆಲ್ಲಾ ರೈತರ ಸಹಕಾರವೇ ಕಾರಣ’ ಎಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ. ಗುಡ್ಡದ ಹೇಳಿದರು.

ಶುಕ್ರವಾರ ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ 70ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಹಕಾರ ಸಂಘದ ಮೂಲಕ ರೈತರಿಗೆ ರಸಗೊಬ್ಬರ ಮಾರಾಟಕ್ಕೆ ಸರ್ಕಾರದಿಂದ ಅನುಮತಿ ಪಡೆದುಕೊಂಡು ಮಾರಾಟ ಮಾಡಲಾಗುತ್ತದೆ. ತಾಲ್ಲೂಕಿನ ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಮನವಿ ಮಾಡಿಕೊಂಡರು.

‘ಇನ್ನು ಮುಂದೆ ರಸಗೊಬ್ಬರದ ಜೊತೆಗೆ ಕ್ರಿಮಿನಾಶಕ ಕೂಡ ಮಾರಾಟ ಮಾಡಲು ಅನುಮತಿ ಪಡೆದುಕೊಳ್ಳಲಾಗುವುದು’ ಎಂದು ಹೇಳಿದರು.

ರೈತ ಕಲ್ಲಪ್ಪ ಗಂಟಿ ಅವರು ರೈತರ ಷೇರು ಹಣಕ್ಕೆ ಲಾಭಾಂಶ ಹಂಚಿಲ್ಲ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅಧ್ಯಕ್ಷರು, ‘ರೈತರ ಷೇರು ಹಣದ ಲಾಭಾಂಶ ಸಂಘದ ಕಚೇರಿ ಕಟ್ಟಡಕ್ಕೆ ವಿನಿಯೋಗಿಸಲಾಗಿದೆ’ ಎಂದರು.

ರೈತರಾದ ಅಣ್ಣಪ್ಪ ಬಿದರಕೋಟಿ, ಭೀಮರಾಯಗೌಡ ಬಿರಾದಾರ ಮಾತನಾಡಿ, ‘ಸಂಘದ ಅಡಿಯಲ್ಲಿ ಪೆಟ್ರೋಲ್ ಪಂಪ್ ಮತ್ತು ಮಂಗಲ ಕಾರ್ಯಾಲಯ ನಿರ್ಮಿಸಬೇಕು’ ಎಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಅಧ್ಯಕ್ಷರು, ‘ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಲಾಭದಲ್ಲಿ ಇದ್ದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರ ಪೆಟ್ರೋಲ್ ಪಂಪ್‌, ಇಥೆನಾಲ್ ಮತ್ತು ಶೀತಲೀಕರಣ ಮಳಿಗೆಗಳಿಗೆ ಅನುದಾನದ ಜೊತೆಗೆ ಅನುಮತಿ ನೀಡಲಿವೆ. ಇದು ಜಾರಿಯಲ್ಲಿ ಬಂದರೆ ಜಿಲ್ಲೆಯಲ್ಲಿಯೇ ನಮ್ಮ ಸಂಘ ಅತಿ ಲಾಭದಲ್ಲಿದೆ. ನಮ್ಮ ಸಂಘದ ಅಡಿಯಲ್ಲಿ 4 ಎಕರೆ ಜಮೀನಿದೆ. ನಮಗೇ ಆದ್ಯತೆ ದೊರೆಯಲಿದೆ. ಕಾರಣ ಸ್ವಲ್ಪ ದಿನ ಕಾದು ನೋಡೋಣ’ ಎಂದರು.

‘ನಮ್ಮ ಸಹಕಾರ ಸಂಘದ ಮೂಲಕ ತಾಲ್ಲೂಕಿನ ಎಲ್ಲ ರೈತ ಸಹಕಾರ ಸಂಘಗಳಿಗೆ ತಲಾ ₹ 2 ಲಕ್ಷ ಅನುದಾನ ನೀಡಲು ಕ್ರಮ ಜರುಗಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಅಣ್ಣಾಸಾಹೇಬ ಪಾಟೀಲ, ಗುರುನಾಥ ಮೈತ್ರಿ, ಶಿವನಗೌಡ ಪಾಟೀಲ, ರಾಜೇಂದ್ರ ಪಾಟೀಲ, ಮಲ್ಲಪ್ಪ ಗುಡ್ಡಲ, ಬಸವರಾಜ ಲವಗಿ, ಮಲ್ಲಪ್ಪ ಬೋಸಗಿ, ಲಕ್ಷ್ಮಣ ಲಮಾಣಿ, ಸಹಾಯಕ ನಿಬಂಧಕ ಕೆ.ಎಚ್. ವಡ್ಡರ, ವಿಜುಗೌಡ ಪಾಟೀಲ, ಅಣ್ಣಪ್ಪ ಬಿದರಕೋಟಿ, ವಿಜು ನಿಡಗುಂದಿ, ವಿಜುಗೌಡ ಪಾಟೀಲ, ಬಾಬುಸಾಹುಕಾರ ಮೇತ್ರಿ ಇದ್ದರು.

ಶ್ರೀಕುಮಾರ ಪಾಟೀಲ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಾಣಾಧಿಕಾರಿ ಆರ್.ಜಿ.ಕಾವಿ ಸ್ವಾಗತಿಸಿದರು. ಲೆಕ್ಕಿಗ ಕೃಷ್ಣಾಜಿ ಕುಲಕರ್ಣಿ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT