ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣ: ರೈತರ ಪ್ರತಿಭಟನೆ 100ನೇ ದಿನಕ್ಕೆ

ಭೂಸ್ವಾಧೀನ ಕೈಬಿಡುವವರೆಗೆ ಹೋರಾಟ ಸಕ್ರಿಯ: ಹೋರಾಟಗಾರರ ಪಟ್ಟು
Last Updated 13 ಜುಲೈ 2022, 2:17 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ(ವಿಜಯಪುರ): ಕೈಗಾರಿಕಾ ವಲಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ 100 ದಿನಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರೈತರ ಸಮಾವೇಶ ನಡೆಯಿತು.

ಹೋರಾಟಗಾರ ಬಯ್ಯಾರೆಡ್ಡಿ ಮಾತನಾಡಿ, ‘ಸರ್ಕಾರಗಳು ರೈತರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು, ನಯಾನಾಜೂಕಾಗಿ ನನಗೆ ಸಕ್ಕರೆ ಕಾರ್ಖಾನೆಗಳಿದ್ದರೂ ಡ್ಯಾಂ ನಿರ್ಮಾಣಕ್ಕೆ ಭೂಮಿ ಕೊಟ್ಟಿದ್ದೇವೆ ಎಂದು ಹೇಳಿ ರೈತರು ಭೂಮಿಯನ್ನು ಕೊಟ್ಟು ಕೈಗಾರಿಕೆಗಳ ಸ್ಥಾಪನೆಗೆ ಸಹಕಾರ ನೀಡಬೇಕು ಎಂದಿದ್ದಾರೆ. ಇದು ಚಳವಳಿಯನ್ನು ಬಲಹೀನಗೊಳಿಸುವ ಹುನ್ನಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ಈ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ರೈತರು ಹೋರಾಟದಿಂದ ಹಿಂದೆ ಸರಿಯಬಾರದು. ಕುಂದಾಣದಲ್ಲಿ 12 ವರ್ಷದ ಹಿಂದಿನ ಭೂಸ್ವಾಧೀನದ ಹೋರಾಟ ಈಗ ಜೀವ ಪಡೆದಿದೆ. ಭೂಮಿ ಉಳಿಸಿಕೊಳ್ಳುವ ವಿಶ್ವಾಸ ಅವರಲ್ಲಿ ಮೂಡಿದೆ. ದೇವನಹಳ್ಳಿ ಭಾಗವನ್ನು ಮತ್ತೊಂದು ಬೆಂಗಳೂರು ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ಗ್ರಾಮೀಣ ಭಾರತವನ್ನು ಉಳಿಸಲಿಕ್ಕೆ ನಾವೆಲ್ಲರೂ ಕಟಿಬದ್ಧರಾಗಬೇಕು’ ಎಂದರು.

ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, ‘75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ರೈತರು ಭೂಮಿಗಾಗಿ ಹೋರಾಟ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಹೋರಾಟದ ಗಾಳಿ ಗಂಧ ಗೊತ್ತಿಲ್ಲದ ಸರ್ಕಾರ, ರೈತರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಭೂಮಿ ಕೊಟ್ಟವರೆಲ್ಲರೂ ಬೆಂಗಳೂರಿನಲ್ಲಿ ಮನೆಗೆಲಸ, ಕಟ್ಟಡ ಕಾಯುವ ಕೆಲಸ ಮಾಡುತ್ತಿದ್ದಾರೆ. ಭೂಸ್ವಾಧೀನ ಕಾಯಿದೆಗಳಿಂದ ರೈತರಮಾರಣ ಹೋಮವಾಗುತ್ತಿದೆ’ ಎಂದರು.

ನಿವೃತ್ತ ಎಡಿಜಿಪಿ ಬಾಸ್ಕರ್ ರಾವ್ ಮಾತನಾಡಿ, ರೈತರು, ಎಷ್ಟೇ ಕಾಲ ಬೀದಿಯಲ್ಲಿ ಕುಳಿತು ಹೋರಾಟ ಮಾಡಿದರೂ ಸರ್ಕಾರಕ್ಕೆ ಬಿಸಿತಟ್ಟುವುದಿಲ್ಲ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿಯಾದರೂ ನ್ಯಾಯ ಪಡೆಯಬೇಕು. ಎಂದರು. ಹೋರಾಟಗಾರ ಮಾರೇಗೌಡ ಮಾತನಾಡಿ, ಸರ್ಕಾರ, ನಮ್ಮ ಭೂಮಿಯ ಸ್ವಾಧೀನಪ್ರಕ್ರಿಯೆ ಕೈ ಬಿಡುವ ತನಕ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ಕೈಬಿಡಲ್ಲ ಎಂದರು.

ಹೋರಾಟಗಾರರಾದ ಬಯ್ಯಾರೆಡ್ಡಿ, ಪ್ರಕಾಶ್ ಕಮ್ಮರಡಿ, ಆಂಜನೇಯರೆಡ್ಡಿ ಎಸ್.ರವಿಕಲಾ, ಸುಷ್ಮಾಶ್ರೀನಿವಾಸ್, ಗಾಯಿತ್ರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

‘ಸಿ.ಎಂ ನ್ಯಾಯ ಕೊಡಬೇಕು’

ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಡಾ.ಕೆ.ಸುಧಾಕರ್ ಅವರಾಗಲಿ, ಎಂ.ಟಿ.ಬಿ.ನಾಗರಾಜ್ ಆಗಲಿ ರೈತರಿಗೆ ನ್ಯಾಯ ಕೊಡಲಿಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿಯ ಬಳಿ ಸಮಯ ನಿಗದಿಪಡಿಸಿಕೊಂಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಬೇಕು. ಅವರಿಂದ ಮಾತ್ರವೇ ರೈತರಿಗೆ ನ್ಯಾಯ ಕೊಡಲಿಕ್ಕೆ ಸಾಧ್ಯವಿದೆ ಎಂದರು. ಹೋರಾಟಗಾರರಾದ ಚಂದ್ರತೇಜಸ್ವಿ, ಕಾರಹಳ್ಳಿ ಶ್ರೀನಿವಾಸ್, ಅಶ್ವಥಪ್ಪ, ವೆಂಕಟರೋಣಪ್ಪ, ರಮೇಶ್, ಮುಕುಂದ್, ನಲ್ಲಪ್ಪನಹಳ್ಳಿ ನಂಜಪ್ಪ, ನಂಜೇಗೌಡ, ಲಕ್ಷ್ಮಮ್ಮ, ನಾರಾಯಣಮ್ಮ, ಪ್ರಮೋದ್, ಸುರೇಶ್, ಮುಂತಾದವರು ಹಾಜರಿದ್ದರು.

‘ಕೋಮುವಾದಿಗಳಿಂದ ದೇಶದ ಲೂಟಿ’

‘ಭೂಮಿಯೊಂದಿಗೆ ಇರುವ ಸಂಬಂಧವನ್ನು ರೈತ ಮಹಿಳೆಯರು ಸಚಿವರಿಗೆ ವಿವರಿಸಿದ್ದಾರೆ. ಸಚಿವರು, ರೈತರಿಗೆ ಪುಣ್ಯಕೋಟಿ ಕಥೆ ಹೇಳಲು ಹೊರಟಿದ್ದಾರೆ. ನಿರ್ದಯವಾಗಿ ಕೊಲ್ಲುವ ಹುನ್ನಾರ ನಡೆದಿದೆ. ಪ್ರಧಾನಿ ನರೇಂದ್ರಮೋದಿ ಹಕ್ಕುಗಳ ಬಗ್ಗೆ ಮಾತನಾಡಬೇಡಿ, ಕರ್ತವ್ಯದ ಬಗ್ಗೆ ಮಾತನಾಡಿ ಎಂದು ಎಚ್ಚರಿಕೆ ನೀಡುವ ಮೂಲಕ ಈ ದೇಶದ ಜನರ ಧ್ವನಿ ಅಡಗಿಸಲು ಹೊರಟಿದ್ದಾರೆ’ ಎಂದುಹೋರಾಟಗಾರ ಮಾವಳ್ಳಿ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.

‘ಬಂಡವಾಳ ಶಾಹಿಗಳು ಹಾಗೂ ಕೋಮುವಾದಿಗಳು ದೇಶವನ್ನು ಲೂಟಿ ಮಾಡುತ್ತಿದ್ದಾರೆ. ರಾಷ್ಟ್ರಪತಿಗಳನ್ನು ರಬ್ಬರ್ ಸ್ಟಾಂಪ್ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮರ್ಮು ಅವರು ಆದಿವಾಸಿಗಳ ಬಗ್ಗೆ ಒಂದೇ ಒಂದು ಮಾತು ಮಾತನಾಡಿರಲಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT