ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲತವಾಡ | ವಿದ್ಯುತ್ ಕಣ್ಣಾಮುಚ್ಚಾಲೆ: ಶಾಖಾ ಕಚೇರಿಗೆ ಬೀಗ ಹಾಕಿದ ರೈತರು

Published 23 ಆಗಸ್ಟ್ 2023, 16:30 IST
Last Updated 23 ಆಗಸ್ಟ್ 2023, 16:30 IST
ಅಕ್ಷರ ಗಾತ್ರ

ನಾಲತವಾಡ: ಹಿರೇಮುರಾಳ ವಿದ್ಯುತ್ ಘಟಕದಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಕಳಪೆ ಸೇವೆ ನಮಗೆ ಬೇಸರ ತಂದಿದೆ. ನಾಲತವಾಡ ಮೂಲಕ ವಿದ್ಯುತ್ ಕೊಡಿ ಎಂದು ಆಗ್ರಹಿಸಿ ಹಿರೇಮುರಾಳ, ರಕ್ಕಸಗಿ, ಬಲದಿನ್ನಿ, ಬಂಗಾರಗುಂಡ ಹಾಗೂ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿ ಹೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ಈಚೆಗೆ ಹರಿಸಲಾದ ಕಾಲುವೆ ನೀರಿನಿಂದ ಹಾಗೂ ನದಿಯಿಂದ ಒಣಗುತ್ತಿರುವ ಜಮೀನುಗಳಿಗೆ ನೀರುಣಿಸುವ ಚಟುವಟಿಕೆ ಆರಂಭಗೊಂಡಿದೆ. ಇರುವ ಬೆಳೆ ಕೈಗೆ ಬಂದಷ್ಟು ಬರಲಿ ಎನ್ನುವ ದೃಷ್ಟಿಯಿಂದ ನಿದ್ದೆಗೆಟ್ಟು ಬೆಳೆಗಳಿಗೆ ನೀರುಣಿಸಲು ಜಮೀನಲ್ಲೇ ವಾಸ ಮಾಡುತ್ತಿದ್ದೇವೆ. ಆದರೆ ಮೇಲಿಂದ ಮೇಲೆ ಕೈಕೊಡುವ ವಿದ್ಯುತ್‌ನಿಂದಾಗಿ ರಾತ್ರಿಯಿಡೀ ಜಮೀನಿನಲ್ಲೇ ಇದ್ದರೂ ಪ್ರಯೋಜನವಾಗುತ್ತಿಲ್ಲ. ಕಬ್ಬು ಒಣಗುತ್ತಿದೆ, ತೊಗರಿ ಹಾಗೂ ಇತರ ಬೆಳೆ ಬಾಡುತ್ತೀವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಶಾಖಾಧಿಕಾರಿ ಬಿ.ಟಿ. ಮ್ಯಾಗೇರಿ ಅವರನ್ನು ತರಾಟೆಗೆ ತಗೆದುಕೊಂಡರು.

ತಡೆದ ಪೋಲೀಸರು

ಸ್ಥಳಕ್ಕೆ ಧಾವಿಸಿದ ಸ್ಥಳೀಯ ಎಎಸ್‌ಐ ಎ.ಎಸ್. ಸಾಲಿ, ಬಸವರಾಜ ಚಿಂಚೊಳ್ಳಿ, ಹೆಬ್ಬುಲಿ ಹಾಗೂ ಮುದ್ದೇಬಿಹಾಳದ ಪೋಲೀಸರು ರೈತರನ್ನು ತಡೆದರು. ರೈತರಾದ ಭೀಮಣ್ಣ ಗುರಿಕಾರ, ಶ್ರೀಕಾಂತ ನಾಡಗೌಡ, ಗುಡದಪ್ಪ ಕಮರಿ(ಬಿಜ್ಜೂರ), ಅಮರೇಶ ವಾಲಿ ಮಾತನಾಡಿ, ‘ಅನಧಿಕೃತವಾಗಿ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಆದೇಶ ತೋರಿಸಿ, ಹಿಂದೆ ಕನಿಷ್ಠ ರಾತ್ರಿ 4 ಗಂಟೆ ಹಗಲು 3 ಗಂಟೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿತ್ತು. ಈಚೆಗೆ ಕೇವಲ ರಾತ್ರಿ 2 ತಾಸು ಮಾತ್ರ ವಿದ್ಯುತ್‌ ಕೊಡಲಾಗುತ್ತಿದೆ. ರೈತರ ಪಾಡೇನು’ ಎಂದು ಪ್ರಶ್ನಿಸಿದರು. ಸಮಯಕ್ಕೆ ಸರಿಯಾಗಿ ವಿದ್ಯುತ್ ಬೇಕೆ ಬೇಕು ಎಂದು ಪಟ್ಟು ಹಿಡಿದರು.

ಮನವೊಲಿಕೆ

ಸ್ಥಳದಲ್ಲಿದ್ದ ಎಸ್‌ಒ ಬಿ.ಟಿ. ಮ್ಯಾಗೇರಿ ಮೇಲಧಿಕಾರಿಗಳೊಂದಿಗೆ ಮಾತನಾಡಿ ಇನ್ನೆರಡು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇವೆ ಪ್ರತಿಭಟನೆ ಕೈಬಿಡಿ ಎಂದು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ರೈತರು ಮತ್ತೆ 2 ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಭಿನ್ನ ರೀತಿಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿ ಪ್ರತಿಭಟನೆ ಕೈಬಿಟ್ಟರು.

ನಾಲತವಾಡ ಹೆಸ್ಕಾಂ ಶಾಖಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು
ನಾಲತವಾಡ ಹೆಸ್ಕಾಂ ಶಾಖಾಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ರೈತರು
ನಾಲತವಾಡ: ಶಾಖಾಧಿಕಾರಿಗಳೊಂದಿಗೆ ವಾದಕ್ಕಿಳಿದ ರೈತರ
ನಾಲತವಾಡ: ಶಾಖಾಧಿಕಾರಿಗಳೊಂದಿಗೆ ವಾದಕ್ಕಿಳಿದ ರೈತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT