ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯವಂತಿಕೆ ಅರ್ಥೈಸಿಕೊಂಡರೆ ವಿಜಯದಶಮಿ

ಗುರುದೇವಾಶ್ರಮ: ಸಿದ್ಧೇಶ್ವರ ಸ್ವಾಮೀಜಿ ಪ್ರವಚನ
Last Updated 27 ಅಕ್ಟೋಬರ್ 2020, 3:40 IST
ಅಕ್ಷರ ಗಾತ್ರ

ಹೊರ್ತಿ: 'ಭಾರತೀಯರು ಎಂದೂ ಬಡವರಲ್ಲ; ಜಗತ್ತಿನಲ್ಲಿಯೇ ಅತೀ ಹೆಚ್ಚು ಶ್ರೀಮಂತರು. ಭಾರತೀಯರು ಹೊರಗಡೆ ಬಡವರ ಹಾಗೇ ಕಂಡರೂ ಅಂತರಂಗದಲ್ಲಿ ಅವರು ಭಾರಿ ಶ್ರೀಮಂತರು. ಭಾರತೀಯರ ತ್ವಚೆಯ ಬಣ್ಣ ಸಾಮಾನ್ಯವಾಗಿರಬಹುದು, ಆದರೆ ಅವರ ಹೃದಯದ ಬಣ್ಣ ಮಾತ್ರ ಬಂಗಾರದ್ದು ಎಂದು ಹೊರದೇಶದರು ಹೇಳುತ್ತಾರೆ’ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಕಾತ್ರಾಳ-ಬಾಲ ಗಾಂವದ ಗುರುದೇವಾಶ್ರಮದಲ್ಲಿ ವಿಜಯದಶ ಮಿಯಂದು ಸೋಮವಾರ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಹೊರ ದೇಶದ ಒಬ್ಬ ಯಾತ್ರಿಕ ಭಾರತಕ್ಕೆ ಬಂದು ಸುತ್ತಾಡಿದ ನಂತರ ಭಾರತೀಯರ ಹೃದಯ ಎಂಥಾ ವಿಶಾಲವಾದದ್ದು ಅಂದರೆ ನಾವು ನೀರು ಬೇಡಿದರೆ ಅವರು ಹಾಲನ್ನು ಕೊಡುತ್ತಾರೆ ಎಂದು ಹೇಳಿ ಹೊರಡುತ್ತಾರೆ. ಇದು ಭಾರತೀಯರಿಗೆ ಕೊಟ್ಟ ದೊಡ್ಡ ಪ್ರಶಸ್ತಿ. ಇಂತಹ ಹೃದಯ ವೈಶಾಲ್ಯತೆಯೇ ಧರ್ಮ ಹಾಗೂ ಇದೇ ಅಧ್ಯಾತ್ಮ, ಇದೇ ವಿಜಯದಶಮಿ’ ಎಂದರು.

ಜಗತ್ತಿನ ಎಲ್ಲೆಡೆ ಸಂತರು ಇದ್ದಾರೆ. ಆಗಲೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಸಂತರು ಇರುತ್ತಾರೆ. ಒಳ್ಳೆಯ ಹೃದಯವಂತ ಜನರು ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಇಂತಹ ಹೃದಯವಂತ ಜನರು ಹಳ್ಳಿ-ಹಳ್ಳಿಗಳಲ್ಲೂ ಇದ್ದಾರೆ ಎಂದರು.

ವಿಜಯದಶಮಿಯಂದು ಭಾರತೀಯರು ಎಲೆ(ಬನ್ನಿ)ಕೊಟ್ಟು ಬಂಗಾರ ಅನುಭವಿಸುವರು ಹಾಗೂ ಈ ದಿನ ಎಲೆಯಲ್ಲಿ ಬಂಗಾರವನ್ನು ಕಾಣುವವರು ಭಾರತೀಯರು. ನಾವು ಯಾವಾಗಲೂ ನಮ್ಮ ಹೃದಯಲ್ಲಿ ಪ್ರೇಮ, ಮಧುರತೆ ಹಾಗೂ ಜ್ಞಾನದ ಬೆಳಕು ಇರಬೇಕು. ಇದು ಸಾರ್ಥಕ ಜೀವನದ ಸಾಧನೆ ಎಂದರು.

‘ಮುಂಜಾನೆ ಎದ್ದು, ಲಿಂಗವ ಪೂಜಿಸಿ, ಸುಪ್ರಭಾತದಲ್ಲಿ ಶಿವಶರಣರ ಮುಖ ನೋಡುವುದು–ಬಸವಣ್ಣನವರು ಹೇಳಿರುವ ಈ ಸಣ್ಣ ಮಾತು ಪಾಲಿಸಿದರೆ ಸಾಕು ನಾವು ಮಾನವ ಜನ್ಮ ಪಡೆದಿರುವುದಕ್ಕೆ ಸಾರ್ಥಕವಾಗುತ್ತದೆ, ಅಲ್ಲದೆ ಇದರಿಂದ ನಮ್ಮ ಜೀವನ ವಿಜಯವಾಗುತ್ತದೆ’ ಎಂದು ನುಡಿದರು.

ಪ್ರವಚನಕ್ಕಾಗಮಿಸಿದ ಸಕಲ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಚಡಚಡಣ ಪಟ್ಟಣದ ಭಕ್ತರು ಕಲ್ಪಿಸಿದ್ದರು. ಪ್ರಸಾದ ವಿತರಣೆ ಸೇವೆಯನ್ನು ಅನೀಲ ಪಾಟೀಲ, ಸುರೇಶ ಬಡಚಿ, ಸಂಪತ್ತ ಗುರವ ಹಾಗೂ ಗೆಳಯರ ಬಳಗವು ಸಲ್ಲಿಸಿದರು.

ಈ ಸಂದರ್ಭದಲ್ಲಿ ಹುಬ್ಬಳಿಯ ವೀರ ಭಿಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಸ್ವಾಮೀಜಿ, ಗುರುದೇವಾಶ್ರಮದ ಡಾ.ಅಮೃತಾನಂದ ಸ್ವಾಮೀಜಿ, ಶೃದ್ಧಾನಂದ ಸ್ವಾಮೀಜಿ , ಈಶುಪ್ರಸಾದ ಸ್ವಾಮೀಜಿ , ಪ್ರಜ್ಞಾನಂದ ಸ್ವಾಮೀಜಿ , ಇಷ್ಟಲಿಂಗ ಸ್ವಾಮೀಜಿ , ಶಿವಾನಂದ ಸ್ವಾಮೀಜಿ , ಸಂದೀಪಗುರು, ಶಿವಾನಂದ ಶರಣರು, ಯೋಗಾನಂದ ಸ್ವಾಮೀಜಿ ಸಿದ್ಧಲಿಂಗದೇವರು, ಗಿರೀಶಾನಂದ ಮಹಾರಾಜರು, ರಮೇಶ ಕರೋಶಿ, ಸಾಯಬಣ್ಣಾ ಮುಚ್ಚಂಡಿ, ಅನೀಲ ಪಾಟೀಲ, ಸುರೇಶ ಬಡಚಿ, ಸಂಪತ್ತ ಗುರವ ಸೇರಿದಂತೆ ಕಾತ್ರಾಳ, ಜಿಗಜೀವಣಿ, ಉಮದಿ, ಬಾಲಗಾಂವ ,ಬೋರ್ಗಿ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT