ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರ ಬದಲಾವಣೆಗೆ ಹೆಚ್ಚಿದ ಆಗ್ರಹ

‘ಪ್ರಜಾವಾಣಿ’ ವರದಿ ಆಧಾರಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ
Last Updated 30 ನವೆಂಬರ್ 2020, 11:33 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2019 ಮತ್ತು 2020ನೇ ಸಾಲಿನ ಪ್ರಶಸ್ತಿ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾದ ಬೆನ್ನೆಲ್ಲೇ ಪ್ರತಿಷ್ಠಾನದ ಸದಸ್ಯರ ಬದಲಾವಣೆಗೆ ತೀವ್ರ ಒತ್ತಾಯ ಕೇಳಿಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತಿಗಳು, ಲೇಖಕರ ನಡುವೆ ಬಿರುಸಿನ ಚರ್ಚೆ, ವಾಗ್ವಾದ ನಡೆದಿದೆ.

‘ಸರ್ಕಾರದ ಪ್ರತಿಷ್ಠಾನ, ಅಕಾಡೆಮಿಗಳು ಸಾಮಾಜಿಕ ನ್ಯಾಯದ ತಳಹದಿ ಮೇಲೆ ಕೆಲಸ ಮಾಡಬೇಕು. ಆದರೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಪರಿಗಣಿಸದೇ ನಿರ್ಲಕ್ಷ್ಯಿಸಿರುವುದು ಖಂಡನೀಯ’ ಎಂದು ಕಲಬುರ್ಗಿಯ ಸಾಹಿತಿಎಚ್‌.ಟಿ.ಪೋತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪ್ರತಿಷ್ಠಾನದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸದಸ್ಯರಿಲ್ಲ. ಇದುವರೆಗೆ ಒಂದೇ ಸಮುದಾಯದ ಶೇ 90ರಷ್ಟು ಮಂದಿಗೆ ಪ್ರಶಸ್ತಿ ಕೊಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಪ್ರತಿಷ್ಠಾನ ಯುವ ಸಾಹಿತಿಗಳನ್ನು ಗುರುತಿಸಬೇಕಿತ್ತು. ಅದನ್ನು ಬಿಟ್ಟು ವಯಸ್ಸಿನ ಮಾನದಂಡ ಮಾಡಿಕೊಂಡಿರುವುದು ಸರಿಯಲ್ಲ. ಸರ್ಕಾರಿ ಪ್ರತಿಷ್ಠಾನ, ಅಕಾಡೆಮಿಗಳೇ ನ್ಯಾಯ ಒದಗಿಸದ್ದರೆ ಅರೆ ಸರ್ಕಾರಿ ಸಂಸ್ಥೆಗಳಿಂದ ಸಾಮಾಜಿಕ ನ್ಯಾಯ ನಿರೀಕ್ಷೆ ಕಷ್ಟ’ ಎಂದಿದ್ದಾರೆ.

‘ವಿಜಯಪುರದಲ್ಲಿ ಆರಂಭವಾಗಿರುವ ಪ್ರತಿಷ್ಠಾನದ ಸಭೆಗಳು ಧಾರವಾಡದಲ್ಲಿ ನಡೆದರೆ ಹೇಗೆ? ಇದರ ಸಾರ್ಥಕತೆ ಏನು?’ ಎಂದು ಅವರು ಪ್ರಶ್ನಿಸಿದ್ದಾರೆ.

ದಾವಣಗೆರೆಯ ಸಂಸ್ಕೃತಿ ಚಿಂತಕ ಮಲ್ಲಿಕಾರ್ಜುನ ಕಡಕೋಳ, ಅಕಾಡೆಮಿ ಮಾದರಿಯಲ್ಲಿ ಪ್ರತಿಷ್ಠಾನಗಳಿಗೆ ಒಂದು ಸಾಮಾಜಿಕ,ಸಾಂಸ್ಕೃತಿಕ ಶಿಸ್ತು ಅಗತ್ಯ. ಪ್ರತಿಷ್ಠಾನಗಳು ಆರಂಭವಾದಾಗಿನಿಂದ ಇರುವ ಸದಸ್ಯರೇ ಇಂದಿಗೂ ಇದ್ದಾರೆ. ಅವರನ್ನು ಬದಲಾಯಿಸಬೇಕು ಎಂದು ಹೇಳಿದ್ದಾರೆ.

ಪ್ರಶಸ್ತಿ ಮೊತ್ತದಲ್ಲಿ ಏಕರೂಪತೆ ಇರಬೇಕು. ಪ್ರತಿಷ್ಠಾನಗಳಿಗೆ ಸರ್ಕಾರ ಲಕ್ಷಗಟ್ಟಲೆ ಅನುದಾನ ಕೊಡುತ್ತದೆ. ಆದರೆ, ಏನು ಮಾಡುತ್ತಿವೆ ಎಂಬುದು ತಿಳಿಯುತ್ತಿಲ್ಲ. ಅಧಿಕಾರಿಗಳ ಕೈಗೆ ಪ್ರತಿಷ್ಠಾನಗಳನ್ನು ಕೊಡುವುದು ಸರಿಯಲ್ಲ ಎಂದಿದ್ದಾರೆ.

‘ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ ಇದೆ ಎಂಬುದೇ ಗೊತ್ತಿರಲಿಲ್ಲ’ ಎಂದು ಬರಹಗಾರ ವಾಸುದೇವ ನಾಡಿಗ ಅಚ್ಚರಿ ವ್ಯಕ್ತಪಡಿಸಿದ್ದಾರೆ.

‘ಹಲಸಂಗಿ ಗೆಳೆಯರ ಪ್ರತಿಷ್ಠಾನದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ವಿಜಯಪುರದ ಒಬ್ಬ ಸಾಹಿತಿಯೂ ಇಲ್ಲದಿರುವುದು ತಪ್ಪು. ಸಮಿತಿ ಸದಸ್ಯರು ಬದಲಾಗಬೇಕು’ ಎಂದು ಆನಂದ ಕುಲಕರ್ಣಿ ಆಗ್ರಹಿಸಿದ್ದಾರೆ.

‘ಪ್ರತಿಷ್ಠಾನದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಧಾರವಾಡದ ಡಾ.ಗುರುಲಿಂಗ ಕಾಪಸೆ ಅವರ ಮನೆಯಲ್ಲಿ ಗೌಪ್ಯ ಸಭೆ ಮಾಡಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂಬುದು ನನ್ನ ಅನುಮಾನ. ಅಲ್ಲಿ ಕಾಪಸೆ ಅವರೇ ಪ್ರಶಸ್ತಿ ಕೊಡುವರು. ಅವರೇ ಪ್ರಶಸ್ತಿ ತೆಗೆದುಕೊಂಡರೆ ಹೇಗೆ? ಯಾವ ಮಾನದಂಡದ ಅನ್ವಯ ಕೊಟ್ಟಿದ್ದೀರಿ’ ಎಂದು ಸಾಹಿತಿ ಸಿದ್ದರಾಮ ಉಪ್ಪಿನ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT