ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬಿಸಿಲಿಗೆ ‘ಪಾಲಿಕೆ’ ನೆರಳು ಮರೀಚಿಕೆ

Published 18 ಮಾರ್ಚ್ 2024, 4:43 IST
Last Updated 18 ಮಾರ್ಚ್ 2024, 4:43 IST
ಅಕ್ಷರ ಗಾತ್ರ

ವಿಜಯಪುರ: ‘ಗುಮ್ಮಟನಗರಿ’ಯಲ್ಲಿ ದಿನದಿಂದ ದಿನಕ್ಕೆ ಸುಡು ಬಿಸಿಲಿನ ತಾಪ ಏರುತ್ತಿದೆ. ಸದ್ಯ 38 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದ್ದು, ತಿಂಗಳಾಂತ್ಯಕ್ಕೆ 40 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟುವ ಲಕ್ಷಣ ಕಾಣುತ್ತಿದೆ.

ನಗರದ ಜನ ಬಿಸಿಲಿಗೆ ಹೈರಣಾಗಿದ್ದಾರೆ. ಮನೆಯಿಂದ ಹೊರಬರಲು ಯೋಚಿಸುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ಹೊರಬರುತ್ತಾರೆ. ತಂಪು ಪಾನೀಯ, ಪ್ಯಾನ್‌, ಎಸಿ ಮೊರೆ ಹೊಗುತ್ತಿದ್ದಾರೆ. ನಗರದ ಯಾವುದೇ ದಿಕ್ಕಿನ, ಯಾವುದೇ ರಸ್ತೆಯಲ್ಲಿ ನೋಡಿದರೂ ಗಿಡಮರಗಳಿಲ್ಲದೇ ವಾತಾವರಣ ಕಾದ ಕಾವಲಿಯಂತಾಗಿದೆ. 

ನಗರದ ಹೃದಯಭಾಗ ಹೆಚ್ಚು ಜನ, ವಾಹನ ದಟ್ಟಣೆ ಇರುವ ಗಾಂಧಿಚೌಕಿ, ಬಸವೇಶ್ವರ ಚೌಕಿ, ಕೇಂದ್ರ ಬಸ್‌ ನಿಲ್ದಾಣ, ವಾಟರ್ ಟ್ಯಾಂಕ್‌ ವೃತ್ತ ಸೇರಿದಂತೆ  ಪ್ರಮುಖ ವೃತ್ತಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ಸುಡು ಬಿಸಿಲಿನಲ್ಲೇ ಮೂರ್ನಾಲ್ಕು ನಿಮಿಷ ಟ್ರಾಫಿಕ್‌ನಲ್ಲಿ ವಾಹನ ಸವಾರರು ನಿಂತು ಮುಂದೆ ಸಾಗಬೇಕಾಗುತ್ತದೆ. ಅದರಲ್ಲೂ ಬೈಕ್‌ ಸವಾರರು ಟ್ರಾಫಿಕ್‌ನಲ್ಲಿ ಗ್ರೀನ್‌ ಸಿಗ್ನಲ್‌ಗಾಗಿ ಬಿಸಿಲಿನಲ್ಲಿ ಕಾಯುವುದು ಯಮಯಾತನೆಯನ್ನು ಉಂಟು ಮಾಡುತ್ತದೆ. ಇದನ್ನು ಮನಗಂಡ ಮಹಾನಗರ ಪಾಲಿಕೆ ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿರುವಂತೆ ಟ್ರಾಫಿಕ್‌ನಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸುತ್ತಿತ್ತು. ಇದರಿಂದ ಟ್ರಾಫಿಕ್‌ನಲ್ಲಿ ವಾಹನ ಸವಾರರು ಎಷ್ಟೇ ಹೊತ್ತು ನಿಂತರೂ ಒಂದಷ್ಟು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮಹಾನಗರ ಪಾಲಿಕೆ ನೆರಳಿನ ವ್ಯವಸ್ಥೆ ಇನ್ನೂ ಮಾಡಿಲ್ಲ.

ಬಿಸಿಲಿನ ಝಳಕ್ಕೆ ಪ್ರಯಾಣಿಕರು ಅದರಲ್ಲೂ ವಯಸ್ಸಾದವರು, ಬಿಪಿ, ಶುಗರ್‌ ಸೇರಿದಂತೆ ಅನಾರೋಗ್ಯಕ್ಕೆ ಒಳಗಾದವರು ತಲೆ ಸುತ್ತು ಬಂದು ಬೀಳುವ, ಸನ್‌ ಸ್ಟ್ರೋಕ್‌ ಅಥವಾ ಹೀಟ್‌ ಸ್ಟ್ರೋಕ್‌ ಆಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಮಹಾನಗರ ಪಾಲಿಕೆ ಪ್ರಮುಖ ವೃತ್ತದಲ್ಲಿ ಹಸಿರಿನ ನೆಟ್‌ ಅನ್ನು ಚಪ್ಪರದಂತೆ ಅಳವಡಿಸಿ ಪ್ರಯಾಣಿಕರಿಗೆ ನೆರಳಿನ ಆಸರೆ ಕಲ್ಪಿಸುವ ಮೂಲಕ ಕಾಳಜಿ ತೋರುತ್ತಿತ್ತು.ಆದರೆ, ಈ ವರ್ಷ ರಣಬಿಸಿಲು ಆರಂಭವಾಗಿ ತಿಂಗಳಾದರೂ ಪಾಲಿಕೆ ಇತ್ತ ಗಮನ ಹರಿಸಿಲ್ಲ.

ಸದ್ಯ ಆರಂಭವಾಗಿರುವ ಬೇಸಿಗೆ ಬಿಸಿಲು ಜೂನ್‌ ಆರಂಭದವರೆಗೂ ತಾಳತಾರದಷ್ಟು ಅಧಿಕವಾಗಲಿದೆ. ಅದರಲ್ಲೂ ಈ ಬಾರಿ ಬರ ಪರಿಸ್ಥಿತಿ ಇರುವುದರಿಂದ ಬಿಸಿಲಿನ ಝಳ ಕಳೆದ ವರ್ಷಗಳಿಗಿಂತ ತುಸು ಹೆಚ್ಚಿದೆ. ಈ ನಡುವೆ ಪ್ರತಿ ವರ್ಷ ಹೋಳಿ ಆಜುಬಾಜು ಒಂದೆರಡು ಮಳೆಯಾಗಿ, ವಾತಾವರಣ ತಂಪಾಗುತ್ತಿತ್ತು. ಆದರೆ, ಈ ವರ್ಷ ಇದುವರೆಗೂ ಬೇಸಿಗೆ ಮಳೆ ಒಂದು ಹನಿಯೂ ಭೂಮಿಗೆ ಬಿದ್ದಿಲ್ಲ. ಕಾಂಕ್ರಿಟ್‌ ನಾಡು ಕಾದು ಕಾದು ಕಾವು ಹೊಮ್ಮುತ್ತಿದೆ.

ಇದೀಗ ಲೋಕಸಭಾ ಚುನಾವಣೆ ಕೂಡ ಇದೆ. ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸಂಚಾರವೂ ಅಧಿಕ. ಜೊತೆಗೆ ಈ ವರ್ಷ ಬೇಸಿಗೆಯಲ್ಲಿ ಸರ್ಕಾರಿ ಕಚೇರಿಗಳ ವೇಳೆಯಲ್ಲೂ ಬದಲಾವಣೆಯಾಗಿಲ್ಲ. ನಗರದ ಜನ ಒಂದು ಕಡೆ ನೀರಿಲ್ಲದೇ ಹೈರಾಣಾಗಿದ್ದಾರೆ. ಇನ್ನೊಂದು ಕಡೆ ಪಾಲಿಕೆಯಿಂದ ನೆರಳಿನ ವ್ಯವಸ್ಥೆಯೂ ಇಲ್ಲದೇ ಜನ ರಸ್ತೆಯಲ್ಲಿ ತಿರುಗಾಡದಂತಾಗಿದೆ. ಮಹಾನಗರ ಪಾಲಿಕೆ ಇತ್ತ ಗಮನ ಹರಿಸುವುದೇ ಕಾದುನೋಡಬೇಕಿದೆ.

ವಿಜಯಪುರ ನಗರದ ಗಾಂಧಿ ಚೌಕಿ ಟ್ರಾಫಿಕ್‌ನಲ್ಲಿ ಬಿಸಿಲಿನಲ್ಲೇ ಕಾದು ನಿಂತಿರುವ ಆಟೋ ರಿಕ್ಷಾ ಸವಾರರು

ವಿಜಯಪುರ ನಗರದ ಗಾಂಧಿ ಚೌಕಿ ಟ್ರಾಫಿಕ್‌ನಲ್ಲಿ ಬಿಸಿಲಿನಲ್ಲೇ ಕಾದು ನಿಂತಿರುವ ಆಟೋ ರಿಕ್ಷಾ ಸವಾರರು 

–ಪ್ರಜಾವಾಣಿ ಚಿತ್ರ 

ವಿಜಯಪುರದ ಗಾಂಧಿಚೌಕ್‌ನಲ್ಲಿ ಹೋದ ವರ್ಷ ಅಳವಡಿಸಿದ್ದ ಹಸಿರು ಹೊದಿಕೆ

ವಿಜಯಪುರದ ಗಾಂಧಿಚೌಕ್‌ನಲ್ಲಿ ಹೋದ ವರ್ಷ ಅಳವಡಿಸಿದ್ದ ಹಸಿರು ಹೊದಿಕೆ

ಪ್ರಜಾವಾಣಿ ಸಂಗ್ರಹ ಚಿತ್ರ

ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಸಿಬ್ಬಂದಿಗೆ ಸೂಚಿಸಿದ್ದೇನೆ. ಶೀಘ್ರದಲ್ಲೇ ನೆರಳಿನ ವ್ಯವಸ್ಥೆ ಮಾಡಲಾಗುವುದು
-ಅಸಾದ್‌ ಉರ್‌ ರಹಮಾನ್‌ ಆಯುಕ್ತ ಮಹಾನಗರ ಪಾಲಿಕೆ ವಿಜಯಪುರ
ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ ಮಾಡುವಂತೆ ಈಗಾಗಲೇ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿರುವೆ. ಶೀಘ್ರದಲ್ಲೇ ನೆರಳಿನ ವ್ಯವಸ್ಥೆ ಕಲ್ಪಿಸಿ ‍ಜನರಿಗೆ ಅನುಕೂಲ ಮಾಡಿಕೊಡಲಾಗುವುದು
–ಮಹೆಜಬಿನ್‌ ಹೊರ್ತಿ ಮೇಯರ್‌ ಮಹಾನಗರ ಪಾಲಿಕೆ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT