ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ಹತ್ಯೆ ತಡೆ ಕಾಯ್ದೆ ಅನುಷ್ಠಾನಕ್ಕೆ ಕಟಿಬದ್ಧ: ಬಸನಗೌಡ ಪಾಟೀಲ ಯತ್ನಾಳ

ಬುರಣಾಪೂರದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ
Last Updated 1 ಫೆಬ್ರುವರಿ 2022, 15:23 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರವು ಗೋ ಸಂರಕ್ಷಣೆಗೆ ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ಗೋ ಹತ್ಯೆ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಟಿಬದ್ಧವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಾಲ್ಲೂಕಿನ ಬುರಣಾಪೂರ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾ ಪ್ರಾಣಿ ದಯಾ ಸಂಘ, ಪಶುಪಾಲನಾ ಮತ್ತು ಪಶುವೈದಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಅಲ್ಲದೇ, ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಗೋಶಾಲೆಗಳಿಗೆ ಸರ್ಕಾರವು ಅನುದಾನ ಒದಗಿಸುತ್ತಿದೆ. ಒದಗಿಸಲಾದ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಿ ಅಚ್ಚುಕಟ್ಟಾದ ಹಾಗೂ ವ್ಯವಸ್ಥಿತವಾದ ಗೋಶಾಲೆ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಮಾತನಾಡಿ, ಈ ಗೋಶಾಲೆಯನ್ನು ರಾಜ್ಯದಲ್ಲಿ ಮಾದರಿ ಗೋಶಾಲೆಯನ್ನಾಗಿ ಮಾಡಲು ಹಾಗೂ ಆತ್ಮನಿರ್ಭರ ಗೋಶಾಲೆಯನ್ನಾಗಿ ಮಾಡಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಗೋಶಾಲೆಗಾಗಿ ಪಶುಪಾಲನೆ ಇಲಾಖೆಗೆ ಈಗಾಗಲೇ 10 ಎಕರೆ ಜಮೀನನ್ನು ಹಸ್ತಾಂತರಿಸಿದ್ದು, ಇನ್ನು 10 ಎಕರೆ ಜಮೀನನ್ನು ಕೊಡಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದರು.

ಗೋಶಾಲೆ ಸ್ಥಾಪನೆಯಿಂದ ಮಹಾನಗರ ಪಾಲಿಕೆಗೆ ಬಿಡಾಡಿ ದನಗಳ ನಿರ್ವಹಣೆಗೆ ಸಹಕಾರಿಯಾಗಲಿದ್ದು, ಮಹಾನಗರ ಪಾಲಿಕೆಯು ಕೂಡಾ ಸಂಪನ್ಮೂಲ ಕ್ರೋಢಿಕರಿಸಿ ಕೊಳವೆ ಬಾವಿ ಮೂಲಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ಗೋಶಾಲೆ ವ್ಯಾಪ್ತಿಗೆ ಬರುವ ಭೂಮಿಯನ್ನು ಸಮತಟ್ಟು ಮಾಡಲಾಗುವುದು. ಈ ಗೋಶಾಲೆಯ ಗಡಿಗಳಿಗೆ ತಂತಿ ಬೇಲಿ ಅಳವಡಿಸುವ ಜೊತೆಗೆ ಕೃಷಿ ಹೊಂಡ ನಿರ್ಮಿಸಿ ಕೊಡಲಾಗುವುದು. ಮೇವು ಉತ್ಪಾದನೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

ಪಶುಸಂಗೋಪನೆ ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಾಣೇಶ್ ಜಹಗೀರದಾರ್ ಮಾತನಾಡಿ, ಗೋ ಸಂರಕ್ಷಣೆಗಾಗಿ ಸರ್ಕಾರದ ಯೋಜನೆಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು, ಗೋ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಗೋ ಸಂರಕ್ಷಣೆ ಮೂಲಕ ಗೋ ಆಧಾರಿತ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದರು.

ಗೋ ಶಾಲೆಗೆ ಈಗಾಗಲೇ ಸರ್ಕಾರವು ₹ 36 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, ಆ ಅನುದಾನದಲ್ಲಿ ನಿರ್ಮಿತಿ ಕೇಂದ್ರದ ಮುಖಾಂತರ ಮೊದಲ ಹಂತದಲ್ಲಿ 100 ಗೋವುಗಳಿಗಾಗಿ ಹಾಗೂ ಇನ್ನೀತರ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಸಾಕಲು ಸಾಧ್ಯವಾಗದ, ಅಪಘಾತಕ್ಕೊಳಗಾದ, ಬಿಡಾಡಿ ಗೋವುಗಳನ್ನು ಗೋಶಾಲೆಗೆ ಸೇರಿಸಿ ಸಂರಕ್ಷಿಸಲಾಗುತ್ತದೆ ಎಂದರು.

ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ತಹಶೀಲ್ದಾರ್‌ ಸಿದ್ದರಾಯ ಭೋಸಗಿ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಎಸ್.ಪಿ ಕುಂಬಾರ, ಐನಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಜಾಧವ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ .ಎಂ.ಸಿ.ಅರಕೇರಿ, ಮುಖ್ಯ ಪಶುವೈಧ್ಯಾಧಿಕಾರಿ ಡಾ.ಉಮೇಶ ನಾಲಾ, ಡಾ ಆನಂದ ದೇವರನಾವದಗಿ, ನಿರ್ಮಿತಿ ಕೇಂದ್ರದ ಅಧಿಕಾರಿ ಮಲಜಿ, ನೆಹರು ಪೂಜಾರಿ ಇದ್ದರು.

ಗೋಶಾಲೆಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ವಿಳಂಬ ಮಾಡದೇ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು

- ಬಸನಗೌಡ ಪಾಟೀಲ ಯತ್ನಾಳ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT