ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿ ಅಂಬಾ ಭವಾನಿ ದಸರಾ ಸಂಭ್ರಮ

ಬೀರಪ್ಪನಗರದ ದುರ್ಗಾ ಪರಮೇಶ್ವರಿ ಯುವಕ ಮಂಡಳಿಯಿಂದ ಪ್ರತಿಷ್ಠಾಪನೆ
Last Updated 28 ಸೆಪ್ಟೆಂಬರ್ 2022, 15:34 IST
ಅಕ್ಷರ ಗಾತ್ರ

ಇಂಡಿ: ಪಟ್ಟಣದ ಬೀರಪ್ಪನಗರದ ದುರ್ಗಾ ಪರಮೇಶ್ವರಿ ಯುವಕ ಮಂಡಳಿಯ ಆಶ್ರಯದಲ್ಲಿ ದಸರಾ ಹಬ್ಬದ ನಿಮಿತ್ಯ 12 ವರ್ಷಗಳಿಂದ ಅಂಬಾ ಭವಾನಿ ಮೂರ್ತಿ ಪ್ರತಿಷ್ಠಾಪಿಸಿ, ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಗುತ್ತಿದೆ.

ಪ್ರಸಕ್ತ ವರ್ಷ ನಟ ದಿವಂಗತ ಪುನೀತ್‌ ರಾಜಕುಮಾರ ವೇದಿಕೆಯಲ್ಲಿ ವಿಶೇಷ ವಿದ್ಯುತ್‌ ದೀಪಾಲಂಕಾರದೊಂದಿಗೆ ಸಂಭ್ರಮದಿಂದ ಅಂಬಾ ಭವಾನಿಯನ್ನು ಆರಾಧಿಸಲಾಗುತ್ತಿದೆ.

ಈ ಉತ್ಸವಕ್ಕೆ ಸಾರ್ವಜನಿಕರಿಂದ ಯಾವುದೇ ಚಂದಾ ಸಂಗ್ರಹಿಸುವುದಿಲ್ಲ. ಭಕ್ತರು ತಮ್ಮ ಇಚ್ಛೆಗನುಗುಣವಾಗಿ ನೀಡಿದ ಭಕ್ತಿಯ ಕಾಣಿಕೆಯಿಂದಲೇ ಅಂಬಾ ಭವಾನಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆದರೂ, ಕೂಡಾ ಈ ಉತ್ಸವಕ್ಕೆ ಹಣದ ಕೊರತೆಯಾಗುವುದಿಲ್ಲ ಎಂಬುದು ವಿಶೇಷ.

ದೇವಿಯ ಪ್ರತಿಷ್ಠಾಪನೆಯ ಮುನ್ನಾ ದಿನ ಮಹಾರಾಷ್ಟ್ರದ ತುಳಜಾಪೂರ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಿಂದ ಭಕ್ತಿ, ಶ್ರದ್ಧೆಯಿಂದ ಯುವಕ ಮಂಡಳಿಯ ಸದಸ್ಯರು ದೀಪವನ್ನು ಹೊತ್ತಿಸಿಕೊಂಡು ರಾತ್ರಿ ಎಲ್ಲಾ ದೀಪ ಆರದಂತೆ ಎಚ್ಚರಿಕೆ ವಹಿಸಿ, ಕಾಲ್ನಡಿಗೆಯಿಂದ ಇಂಡಿ ಪಟ್ಟಣಕ್ಕೆ ತರಲಾಗುತ್ತದೆ.

ಈ ವರ್ಷ ವಿಶೇಷ:

ಕಳೆದ 11 ವರ್ಷಗಳ ಹಿಂದೆ ಬೀರಪ್ಪನಗರದಲ್ಲಿ ಪ್ರತಿಷ್ಠಾಪಿಸಲ್ಪಟಿದ್ದ ಅಂಬಾ ಭವಾನಿ ಮೂರ್ತಿ ಭಿನ್ನವಾಗಿದ್ದ ಹಿನ್ನೆಲೆಯಲ್ಲಿ ಈ ವರ್ಷ ಸೋಲಾಪೂರದ ಮಾನೆ ಅವರು ಸಿದ್ದಗೊಳಿಸಿರುವ ಹೊಸ ಅಂಬಾ ಭವಾನಿ ಮೂರ್ತಿ ತಂದು ಪ್ರತಿಷ್ಠಾಪಿಸಲಾಗಿದೆ.

ಈ ನವರಾತ್ರಿ ಉತ್ಸವದಲ್ಲಿ ದೇವಿಗೆ ಪ್ರತಿ ದಿನ ಒಂದೊಂದು ಅವತಾರದಲ್ಲಿರಿಸಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪೂಜೆಯೂ ಕೂಡಾ ಮಾಡಲಾಗುತ್ತಿದೆ.

ಮೊದಲನೇ ದಿನ ದೇವಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ದೇವಿಯ ಮುಂದೆ ಸಿದ್ದಗೊಂಡಿರುವ ಅಗ್ನಿ ಪ್ರವೇಶ ಮಾಡಿ ಭಕ್ತರು ತಮ್ಮ ತಮ್ಮ ಹರಕೆ ತೀರಿಸುವ ಸಂಪ್ರದಾಯವಿದೆ.

ಪ್ರತಿ ದಿನ ಸಂಜೆ 6 ರಿಂದ 9ರ ವರೆಗೆ ದೇವಿಯ ವಿಶೇಷ ಪೂಜೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಜನ ಭಕ್ತರ ಮೈಯಲ್ಲಿ ದೇವಿ ಪ್ರವೇಶ ಮಾಡಿ ಮೈ ಮರೆತು ಕುಣಿಯುವ ದೃಶ್ಯ ಮೈನವಿರೇಳಿಸುತ್ತದೆ. ಇದನ್ನು ನೋಡುವುದಕ್ಕಾಗಿಯೇ ನೂರಾರು ಜನ ಭಕ್ತರು ಬೀರಪ್ಪನಗರದ ಅಂಬಾ ಭವಾನಿ ದೇವಿಯ ಮುಂದೆ ಸೇರುತ್ತಾರೆ.

ಹೆಣ್ಣುಮಕ್ಕಳಿಗಾಗಿ, ಯುವತಿಯರಿಗಾಗಿ, ಮಕ್ಕಳಿಗಾಗಿ, ವಿದ್ಯಾರ್ಥಿಗಳಿಗಾಗಿ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ನೃತ್ಯ ಸ್ಪರ್ಧೆ, ಮ್ಯೂಜಿಕಲ್ ಚೇರ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಕೊನೆಯ ದಿನ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ.

ದಸರಾ ಮಹೋತ್ಸವದ ಅಂಗವಾಗಿ ಅಂಬಾ ಭವಾನಿ ವೇದಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮ, ಪ್ರವಚನ, ದೇವಿಯ ಮಹಾತ್ಮೆ ಕುರಿತು ಉಪನ್ಯಾಸ, ಸಾಧಕರಿಗೆ ದೇವಿಯ ಸಮ್ಮುಖದಲ್ಲಿ ಸನ್ಮಾನ, ಹೆಣ್ಣುಮಕ್ಕಳಿಗೆ ಕುಂಕುಮಾರ್ಚನೆ, ಮುತ್ತೈದೆಯರಿಗೆ ಉಂಡಿ ತುಂಬಿವ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದೆ ಎಂದು ದುರ್ಗಾ ಪರಮೇಶ್ವರಿ ಯುವಕ ಮಂಡಳಿಯ ಸದಸ್ಯರಾದ ಸೋಮಶೇಖರ ದೇವರ, ಜಗದೀಶ ಕುಂಬಾರ, ಸಂಜು ಪವಾರ, ಸಗರ ಮಾನೆ, ಶ್ರೀಶೈಲಗೌಡ ಬಿರಾದಾರ, ಸಂತೋಷ ಕುಂಟೋಜಿ, ದರ್ಶನ ಮಾನೆ, ಸಂತೋಷ ಸುಲಾಖೆ, ಉಮೇಶ ದೇಗಿನಾಳ, ಶಿವಕುಮಾರ ಮಡಿವಾಳ ತಿಳಿಸಿದ್ದಾರೆ.

ಇದೇ ರೀತಿ ಪಟ್ಟಣದ ಕುಂಬಾರ ಓಣಿಯಲ್ಲಿ ಭುವನೇಶ್ವರಿ ಯುವಕ ಮಂಡಳಿ, ಹೂಗಾರ ಓಣಿಯಲ್ಲಿ ಅಂಬಾಭವಾನಿ ನವ ತರುಣ ಮಂಡಳಿ, ಚವಡಿ ಓಣಿಯಲ್ಲಿಅಂಬಾಭವಾನಿ ನವ ತರುಣ ಮಂಡಳಿ ಹಾಗೂ ತಾಲ್ಲೂಕಿನ ಲಚ್ಯಾಣ, ಅಗರಖೇಡ, ಪಡನೂರ, ಭತಗುಣಕಿ ಮುಂತಾದ ಗ್ರಾಮಗಳ ಭಕ್ತರು ಮಹಾರಾಷ್ಟ್ರದ ತುಳಜಾಪೂರ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಿಂದಲೇ ದೀಪ ತಂದು ಘಟಸ್ಥಾಪನೆ ಮಾಡುವುದು ಇಲ್ಲಿಯ ಒಂದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT