ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಶಾಂತಿ ತತ್ವದ ಮೇಲೆ ನಿಂತಿದೆ ಭಾರತ: ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ

ಗಾಂಧೀಜಿ , ಶಾಸ್ತ್ರೀಜಿ  ಜಯಂತಿ; ಸರ್ವಧರ್ಮ ಪ್ರಾರ್ಥನೆ 
Last Updated 2 ಅಕ್ಟೋಬರ್ 2022, 12:36 IST
ಅಕ್ಷರ ಗಾತ್ರ

ವಿಜಯಪುರ:ಮಹಾತ್ಮ ಗಾಂಧಿ ಪ್ರತಿಪಾದಿಸಿದ ಅಹಿಂಸೆ, ಶಾಂತಿ ತತ್ವದ ಮೇಲೆ ಭಾರತ ನಿಂತಿದೆ ಎಂದುಜಿಲ್ಲಾಧಿಕಾರಿ ವಿಜಯಮಹಾಂತೇಶ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗಾಂಧಿ ಹಾಗೂ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ಅವರು ಮಾತನಾಡಿದರು.

ಗಾಂಧೀಜಿಯ ಶಾಂತಿ, ಅಹಿಂಸಾ ತತ್ವಗಳಿಂದ ಪ್ರೇರಿತವಾದ ವಿಶ್ವ ಸಂಸ್ಥೆಯ ಕರೆಯ ಮೇರೆಗೆ 2007 ಅಕ್ಟೋಬರ್ 2 ರಿಂದ ವಿಶ್ವದ ಎಲ್ಲೆಡೆ ಅಹಿಂಸಾ ದಿನವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದರು.

ಮಹಾತ್ಮ ಗಾಂಧಿ ಅಸ್ಪೃಶ್ಯತೆ ನಿವಾರಣೆಗಾಗಿ ಬಹಳಷ್ಟು ಹೋರಾಟ ಮಾಡಿದ್ದರು. ಆ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಸರ್ಕಾರಗಳು ಇಂದಿಗೂ ವಿಶೇಷ ಕಾರ್ಯಕ್ರಮ ಹಾಗೂ ಯೊಜನೆಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೂ ಅದು ಇಂದಿಗೂ ಜೀವಂತವಾಗಿರುವುದು ಅತ್ಯಂತ ನೋವಿನ ಸಂಗತಿ. ನಾವೆಲ್ಲರೂ ಅದನ್ನು ತೊಡೆದು ಹಾಕಿ ಸ್ವಚ್ಚ ಹಾಗೂ ಸುಂದರ ಸಮಾಜವನ್ನು ರೂಪಿಸಬೇಕು ಎಂದರು.

ಖಾದಿ ಬಟ್ಟೆ ತಯಾರಿಸಲು ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ. ಕೈಯಿಂದಲೇ ನೇಯುವುದರಿಂದ ಪರಿಸರ ಮಾಲಿನ್ಯವಾಗುವುದಿಲ್ಲ. ಅಲ್ಲದೇ, ದುಡಿಯುವ ಕೈಗಳಿಗೆ ಸಾಕಷ್ಟು ಉದ್ಯೋಗವನ್ನು ಸೃಷ್ಠಿ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಮನಗಂಡಿದ್ದ ಗಾಂಧೀಜಿ ಅವರು ಖಾದಿಯನ್ನು ಪ್ರೋತ್ಸಾಹಿಸಿದ್ದರು ಎಂದರು.

ಲಾಲ್ ಬಹದ್ದೂರ್ ಶಾಸ್ತ್ರಿ ದೇಶ ಕಂಡ ಅಪ್ರತಿಮ ಪ್ರಧಾನಿ. ದೇಶ ಸಂಕಷ್ಟದಲ್ಲಿದ್ದಾಗ `ಜೈ ಜವಾನ್, ಜೈ ಕಿಸಾನ್' ಘೋಷಣೆ ಕೊಟ್ಟು ದೇಶದ ಆಹಾರ, ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಮಾಡುವಂತೆ ಪ್ರೇರಣೆ ನೀಡಿದರು ಎಂದರು.

ವಿಜಯಪುರದಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನ ಶಾಂತಿ ಹಾಗೂ ಅಹಿಂಸೆಯ ಸಂಕೇತವಾಗಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರದಲ್ಲಿ ಅಹಮದಾಬಾದ್‌ಗಿಂತಲೂ ಸುಂದರವಾಗಿ ಗಾಂಧಿ ಭವನ ನಿರ್ಮಾಣವಾಗಿದೆ. ಇದು ಅತ್ಯಂತ ಸಂತೋಷದ ಸಂಗತಿ. ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿ ಮತ್ತು ತೀವ್ರಗಾಮಿಗಳೆಂಬ ಎರಡು ಬಣಗಳಿದ್ದವು. ಈ ಎರಡೂ ಬಣಗಳ ಉದ್ದೇಶ ಒಂದೇ ಭಾರತ ಸ್ವತಂತ್ರಗೊಳಿಸುವುದು. ನಾವು ಇಂದು ನೆಮ್ಮದಿ ಜೀವನ ನಡೆಸುತ್ತಿರುವುದಕ್ಕೆ ಆ ಹೋರಾಟಗಾರರ ಶ್ರಮ ಕಾರಣ ಎಂದರು.

ಬ್ರಿಟಿಷರಿಂದ ಭಾರತ ಸ್ವತಂತ್ರವಾಗಬೇಕಾದರೆ ಕೋಟ್ಯಂತರ ಭಾರತೀಯರ ಬಲಿದಾನವಾಗಿದೆ. ನಾವು ಆ ಹೋರಾಟಗಾರರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದೇಶದ ಸ್ವಾತಂತ್ರ್ಯ ನಮಗೆ ದೊರಕಬೇಕಾದರೆ ಶಾಂತಿ ಹಾಗೂ ಕ್ರಾಂತಿ ಎರಡೂ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಯನ್ನು ನಾವು ಇಂದು ಸ್ಮರಿಸಲೇಬೇಕು. ದೇಶವಾಸಿಗಳಿಗೆ ಆಹಾರದ ಕೊರತೆಯಾಗದಂತೆ ನೋಡಿಕೊಂಡದ್ದು ಶಾಸ್ತ್ರಿ ಅವರ ದೊಡ್ಡ ಕೊಡುಗೆಯಾಗಿದೆ ಎಂದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಿಂಧೆ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಇದ್ದರು.

ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್‌ ಧರ್ಮೀಯರಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು.

***

ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಂತ ಗಾಂಧೀಜಿಯ ತತ್ವ,ಆದರ್ಶ ಹಾಗೂ ವಿಚಾರ ಧಾರೆಗಳನ್ನು ಯುವಜನರು ಅಳವಡಿಸಿಕೊಳ್ಳಬೇಕು

–ವಿಜಯಮಹಾಂತೇಶ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT