ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ರಮೇಶ ಭೂಸನೂರ ಆರೋಪ

Published : 20 ಆಗಸ್ಟ್ 2024, 15:45 IST
Last Updated : 20 ಆಗಸ್ಟ್ 2024, 15:45 IST
ಫಾಲೋ ಮಾಡಿ
Comments

ಸಿಂದಗಿ: ‘ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯದ ಜನರನ್ನು ಮತಬ್ಯಾಂಕ್‌ಗಾಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತದೆ. ಕಾಂಗ್ರೆಸ್ ಸರ್ಕಾರದಿಂದ ಈ ಸಮುದಾಯಕ್ಕೆ ಭಾರಿ ಅನ್ಯಾಯವಾಗಿದೆ. ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿದ್ದ ₹187 ಕೋಟಿ ಅನುದಾನ ಚುನಾವಣೆಗೆ ಬಳಕೆ ಮಾಡಿಕೊಂಡಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ₹22 ಸಾವಿರ ಕೋಟಿ ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದೆ. ಕಾಂಗ್ರೆಸ್ ಪರಿಶಿಷ್ಟ ಸಮುದಾಯದ ವಿರೋಧಿಯಾಗಿದೆ’ ಎಂದು ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.

ಇಲ್ಲಿಯ ಬಿಜೆಪಿ ಕಾರ್ಯಾಲಯದ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ಎಸ್‌ಸಿ ಮೋರ್ಚಾ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ವಿವಿಧ ಅಭಿವೃದ್ದಿ ಕಾಮಗಾರಿ ಪೂರ್ಣಗೊಳಿಸಿ 2 -3 ವರ್ಷಗಳಾದರೂ ಗುತ್ತಿಗೆದಾರರ ಬಿಲ್ ಪಾವತಿಸಿಲ್ಲ. ಹಿಂದಿನ ಸರ್ಕಾರದಲ್ಲಿ ಅಂಬೇಡ್ಕರ್ ನಿಗಮದಡಿ ಎಸ್‌ಸಿ, ಎಸ್‌ಟಿ ಅವರಿಗಾಗಿ 80 ರಷ್ಟು ಗುರಿ ಕಾಯ್ದಿರಿಸಲಾಗುತ್ತಿತ್ತು. ಆದರೆ ಪ್ರಸ್ತುತ ಸರ್ಕಾರದಲ್ಲಿ ಈ ನಿಗಮದಡಿ ಕೇವಲ ಒಂದು ಗುರಿ ಮಾತ್ರ ಇರುವುದು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ಈ ಸಮುದಾಯದ ಬಗ್ಗೆ ಎಳ್ಳಷ್ಟೂ ಕಾಳಜಿ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್‌ಗೆ ಕಾಂಗ್ರೆಸ್ ಸರ್ಕಾರ ಅವಮಾನ ಮಾಡುತ್ತಲೇ ಬಂದಿದೆ. ಚುನಾವಣೆಯಲ್ಲಿಯೂ ಅವರನ್ನು ಕಾಂಗ್ರೆಸ್ ಸೋಲಿಸುವ ಕಾರ್ಯ ಮಾಡಿದೆ. ಅವರ ಸಾವಿನ ನಂತರ ಅಂತ್ಯಕ್ರಿಯೆಗೆ ಸ್ಥಳಾವಕಾಶ ನೀಡಲಿಲ್ಲ. ಆದರೆ ಪ್ರಧಾನಿ ಮೋದಿ ಅಂಬೇಡ್ಕರ್ ಬಗ್ಗೆ ಅಪಾರ ಗೌರವ ಹೊಂದಿ ಪಂಚತೀರ್ಥ ಕ್ಷೇತ್ರ ಹೆಸರಿನಲ್ಲಿ ಅಂಬೇಡ್ಕರ್‌ ಬದುಕು -ಬರಹದ ಸ್ಥಳಗಳನ್ನು ಅಭಿವೃದ್ದಿಪಡಿಸಿದ್ದಾರೆ. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಲಿಲ್ಲ ಎಂದು ಭೂಸನೂರ ವಿವರಿಸಿದರು.

ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತ ಪರಿಶಿಷ್ಟ ಜಾತಿ ಮತ ಪಡೆಯುತ್ತ ಹೊರಟಿದೆ. ಬಲಿಷ್ಠವಾಗಿರುವ ಸಂವಿಧಾನವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.

ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಭಿಸೆ ಮಾತನಾಡಿ, ಪರಿಶಿಷ್ಟ ಜಾತಿ ಬಂಧುಗಳು ಕಾಂಗ್ರೆಸ್‌ನ ಆಸೆ -ಆಮಿಷಗಳಿಗೆ ಮೋಸ ಹೋಗದಿರಿ. ಬಿಜೆಪಿ ಪರಿಶಿಷ್ಟ ಜಾತಿ ವಿರೋಧಿಯಲ್ಲ. ಬಿಜೆಪಿಯಿಂದ ಮಾತ್ರ ಪರಿಶಿಷ್ಟ ಸಮುದಾಯದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯಲ್ಲಪ್ಪ ಹಾದಿಮನಿ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಬಿಜೆಪಿ ತಾಲ್ಲೂಕು ಎಸ್‌ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಬಿಜಾಪೂರ, ಬಿಜೆಪಿ ಪ್ರಧಾನಕಾರ್ಯದರ್ಶಿ ಈರಣ್ಣ ರಾವೂರ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಭೀಮೂ ಮೇಲಿನಮನಿ ಮಾತನಾಡಿದರು.

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಕೋಶಾಧ್ಯಕ್ಷ ಸಿದ್ದು ಪೂಜಾರಿ, ಎಸ್‌ಟಿ ಮೋರ್ಚಾದ ಪ್ರಶಾಂತ ಕದ್ದರಕಿ, ಪ್ರಮುಖರಾದ ಬಿ.ಎಚ್.ಬಿರಾದಾರ, ಮಲ್ಲೂ ಸಾವಳಸಂಗ, ಶ್ರೀಶೈಲ ಚಳ್ಳಗಿ, ನಾಗಪ್ಪ ಶಿವೂರ, ಸಂತೋಷ ಮಣಿಗಿರಿ, ನೀಲಮ್ಮ ಯಡ್ರಾಮಿ, ಪ್ರದಾನಿ ಮೂಲಿಮನಿ, ಯಲ್ಲೂ ಇಂಗಳಗಿ, ಸಂತೋಷ ಮಣಿಗಿರಿ ಇದ್ದರು.

ಶಾಸಕ ಮನಗೂಳಿಯಿಂದ ದ್ವೇಷ ರಾಜಕೀಯ...
ಸಿಂದಗಿ: ‘ಮತಕ್ಷೇತ್ರದ ಹಿಂದಿನ ಶಾಸಕ ರಮೇಶ ಭೂಸನೂರ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಸಮುದಾಯದ 80 ಜನರಿಗೆ ಮಂಜೂರುಗೊಳಿಸಿದ ಕೊಳವೆಬಾವಿಗಳನ್ನು ದ್ವೇಷ ರಾಜಕೀಯದಿಂದ ರದ್ದುಗೊಳಿಸಿ ಭಾರಿ ಅನ್ಯಾಯ ಮಾಡಲಾಗಿದೆ’ ಎಂದು  ಆರೋಪ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT