ದೇವರಹಿಪ್ಪರಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಭೂತಪೂರ್ವ ಜಯದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿವೆ.
ಮೈತ್ರಿ ಅಭ್ಯರ್ಥಿ ಜೆಡಿಎಸ್ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ರಮೇಶ ಮಸಬಿನಾಳ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಬಶೀರಹಮ್ಮದ ಕಸಾಬ, ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಗುರುರಾಜ ಗಡೇದ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ 4, ಬಿಜೆಪಿಯ 4 ಹಾಗೂ ಒಬ್ಬರು ಪಕ್ಷೇತರ ಜೆಡಿಎಸ್ ಶಾಸಕ ಹಾಗೂ ಬಿಜೆಪಿಯ ಸಂಸದರ ಮತ ಪಡೆದು ಜಯಶ್ರೀ ದೇವಣಗಾಂವ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ರಮೇಶ ಮಸಬಿನಾಳ ತಲಾ 11 ಮತಗಳನ್ನು ಪಡೆದು ವಿಜಯಶಾಲಿಯಾದರು.
ಕಾಂಗ್ರೆಸ್‍ನಿಂದ ನಾಮಪತ್ರ ಸಲ್ಲಿಸಿದ ಅಧ್ಯಕ್ಷ ಸ್ಥಾನಕ್ಕೆ ಬಶೀರಹಮ್ಮದ ಕಸಾಬ, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಡಾ. ಗುರುರಾಜ ಗಡೇದ ತಲಾ 8 ಮತಗಳನ್ನು ಪಡೆದು ಪರಾಭವಗೊಂಡರು.
ವಿಜಯೋತ್ಸವ:
ಪ.ಪಂ. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮೈತ್ರಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭರ್ಜರಿ ವಿಜಯೋತ್ಸವ ನಡೆಸಿದರು.ಪಟಾಕಿ ಸಿಡಿಸಿ, ಗುಲಾಲು ಎರಚಿ, ಸಂಭ್ರಮ ಆಚರಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಸ್ಥಳಿಯವಾಗಿ ಇಲ್ಲಿಯೂ ಒಪ್ಪಂದ ಮೂಲಕ ಗೆಲುವು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪಟ್ಟಣವನ್ನು ಮಾದರಿ ಕೇಂದ್ರವನ್ನಾಗಿ ಮಾಡುವಲ್ಲಿ ಶ್ರಮ ವಹಿಸಬೇಕು ಎಂದರು.
ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಪ.ಪಂ ಆದಾಗಿನಿಂದ ಮೂರು ಸಲ ನಮ್ಮ ಜೆಡಿಎಸ್ ಪಕ್ಷದವರೇ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಚುನಾವಣೆ ಮುಗಿದ ನಂತರ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು. ಗ್ಯಾರಂಟಿಗಳ ಮದ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಆದಾಗ್ಯೂ ಸಹಿತ ಮಾನ್ಯ ಸಂಸದರ ನೆರವಿನಿಂದ ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಬಾಳ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ, ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ ಅಸ್ಕಿ, ಸಾಯಬಣ್ಣ ಬಾಗೇವಾಡಿ, ಅವ್ವಣ್ಣ ಗ್ವಾತಗಿ, ಮುನ್ನಾ ಮಳಖೇಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.