ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ವ್ಯವಹಾರ ಆಗದಿರಲಿ; ಪಾವಿತ್ರ್ಯ ಉಳಿಯಲಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್‌ ಸೂಚನೆ
Last Updated 7 ಏಪ್ರಿಲ್ 2021, 14:55 IST
ಅಕ್ಷರ ಗಾತ್ರ

ವಿಜಯಪುರ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ನಕಲಿಗೆ ಅವಕಾಶ ಬೇಡ, ಪರೀಕ್ಷಾ ಪಾವಿತ್ರ್ಯ ಉಳಿಯಬೇಕು, ಪರೀಕ್ಷೆ ವ್ಯವಹಾರ ಆಗಬಾರದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್‌ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಶೈಕ್ಷಣಿಕ ಜಿಲ್ಲೆಗಳ 2021ರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಸಿದ್ಧತೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು 74 ದಿನ ಹಾಗೂ ಪಿಯುಸಿ ಪರೀಕ್ಷೆಗೆ 46 ದಿನ ಬಾಕಿ ಇದೆ. ಮಕ್ಕಳು ಶ್ರದ್ಧೆಯಿಂದ ಓದುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ತರಗತಿಗಳು ಅಸ್ತವ್ಯಸ್ತವಾಗಿರುವುದರಿಂದ ಶೇ 30ರಷ್ಟು ಪಠ್ಯ ಕಡಿತ ಮಾಡಿದ್ದೇವೆ ಎಂದರು.

ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಹೋದ ವರ್ಷ ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಿದ್ದೇವೆ. ಈ ವರ್ಷ ಇನ್ನಷ್ಟು ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕು. ‍ಪರೀಕ್ಷಾ ಕೇಂದ್ರಗಳು ಸುರಕ್ಷಾ ಕೇಂದ್ರಗಳಾಗಬೇಕು. ಶೌಚಾಲಯ, ಕುಡಿಯುವ ನೀರು ಸೇರಿದಂತೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಆತಂಕ ರಹಿತ ಪರೀಕ್ಷೆ ಕೇಂದ್ರಗಳನ್ನು ನಿರ್ಮಿಸಬೇಕು ಎಂದು ಅವರು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಅಗತ್ಯ ವಾಹನ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಷ್ಟು ಮಕ್ಕಳು ಖಾಸಗಿ ಬಸ್‌, ಸರ್ಕಾರಿ ಬಸ್‌, ವೈಯಕ್ತಿಕ ವಾಹನಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಶಾಲೆ, ಕಾಲೇಜಿಗೆ ಬಂದು ಹೋಗುತ್ತಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಹೇಳಿದರು.

ಪರೀಕ್ಷಾ ಸಂದರ್ಭದಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ರೆಡ್‌ ಕ್ರಾಸ್‌ ಸಂಸ್ಥೆಗಳ ಪ್ರತಿನಿಧಿಗಳು ಮುಂದೆ ಬಂದಿದ್ದು, ಅವರ ಸಹಕಾರ ಪಡೆದುಕೊಳ್ಳಬೇಕು ಎಂದರು.

ರಾಜ್ಯದ 500ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ್ದೇನೆ. ಪರೀಕ್ಷೆ ನಡೆಸಬೇಕೇ? ಬೇಡವೇ? ಎಂಬ ಪ್ರಶ್ನೆಗೆ ಎಲ್ಲರೂ ಪರೀಕ್ಷೆ ಬೇಕು ಎಂದಿದ್ದಾರೆ. ಪರೀಕ್ಷೆ ನಡೆಸದೇ ಪಾಸ್‌ ಮಾಡಿದರೆ ಜೀವನ ಪೂರ್ತಿ ಕೊರೊನಾ ಪಾಸ್‌ ಎಂಬ ಹಣೆಪಟ್ಟಿ ಬರುತ್ತದೆ. ನಮ್ಮ ಪ್ರತಿಭೆಗೆ ಅಡ್ಡಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಶೈಕ್ಷಣಿಕ ಜಿಲ್ಲೆಗಳಲ್ಲಿ 1,14,302 ಎಸ್‌ಎಸ್‌ಎಲ್‌ಸಿ ಮತ್ತು 79,619 ವಿದ್ಯಾರ್ಥಿಗಳು ಈ ವರ್ಷ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 363 ಪರೀಕ್ಷಾ ಕೇಂದ್ರ(ಬಾಗಲಕೋಟೆ 104, ಚಿಕ್ಕೋಡಿ 138, ವಿಜಯಪುರ 121) ಗಳನ್ನು ತೆರೆಯಲಾಗುವುದು ಎಂದರು.

ಪರೀಕ್ಷೆ ಸಂಬಂಧ ಪೋಷಕರು ತಮ್ಮ ಮಕ್ಕಳಿಗೆ ಒತ್ತಡ ಹೇರದೇ ಲವಲವಿಕೆಯಿಂದ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಕೋವಿಡ್‌ ಪರಿಣಾಮ ಶಾಲೆ, ಕಾಲೇಜುಗಳು ಸರಿಯಾಗಿ ನಡೆಯದ ಕಾರಣ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸೇರಿಕೊಂಡು ಅಂತಹ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಮಾತನಾಡಿ, ಹೋದ ವರ್ಷ ತರಗತಿ ನಡೆಸಿ ಪರೀಕ್ಷೆ ಬರೆಸುವುದು ಸವಾಲಾಗಿತ್ತು. ಆದರೆ, ಈ ವರ್ಷ ತರಗತಿ ನಡೆಸದೇ ಪರೀಕ್ಷೆ ಬರೆಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಡಯಟ್‌ಗಳ ಸುಧಾರಣೆಗೆ ಆದ್ಯತೆ ನೀಡಬೇಕು. ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದರು.

ಪರೀಕ್ಷಾ ಕೇಂದ್ರಗಳನ್ನು ಮುಚ್ಚುವುದಾಗಲಿ ಅಥವಾ ಹೊಸ ಪರೀಕ್ಷಾ ಕೇಂದ್ರಗಳನ್ನು ಆರಂಭಿಸುವ ಸಂದರ್ಭದಲ್ಲಿ ಯಾವುದೇ ರಾಜಕೀಯ ಶಿಫಾರಸುಗಳಿಗೆ ಅವಕಾಶ ನೀಡಬಾರದು ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸರಿಗೆ ಸರಿಯಾಗಿ ವೇತನ ಆಗುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸಾರ್ಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ನಿರ್ದೇಶಕಿ ಮಮತಾ ನಾಯ್ಕ ಹಾಗೂ ಮೂರು ಜಿಲ್ಲೆಗಳ ಶಿಕ್ಷಣ ಇಲಾಖೆ ಉಪನಿರ್ದೇಶಕು, ಎಲ್ಲ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

****

ಒಂದರಿಂದ ಒಂಭತ್ತನೇ ತರಗತಿ ವರೆಗೆ ಪರೀಕ್ಷೆ ನಡೆಸಬೇಕೇ? ಬೇಡವೇ? ಎಂಬ ಬಗ್ಗೆ ಗುರುವಾರ ನಡೆಯುವ ಶಿಕ್ಷಣ ತಜ್ಞರು, ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು
–ಸುರೇಶಕುಮಾರ್,ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

****

‘ಪ್ರಜಾವಾಣಿ’ ಸಂಪಾದಕೀಯ ಪ್ರಸ್ತಾಪ

ಹೋದ ವರ್ಷ ಕೋವಿಡ್‌ ಮಾರ್ಗಸೂಚಿಗಳ ಅನ್ವಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಿದ ಶಿಕ್ಷಣ ಇಲಾಖೆ ಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಸಂಪಾದಕೀಯ ಬರೆಯಲಾಗಿತ್ತು ಎಂದು ಸಚಿವ ಸುರೇಶ ಕುಮಾರ್‌ ಸಭೆಯಲ್ಲಿ ಪ್ರಸ್ತಾಪಿಸಿದರು.

ಕೋವಿಡ್‌ ಸಂದರ್ಭದಲ್ಲಿ ಮಕ್ಕಳು ನಡೆದುಕೊಂಡ ರೀತಿ ರಾಜ್ಯದ ಹಿರಿಯರಿಗೆ ಮಾದರಿಯಾಗುವಂತಿತ್ತು ಎಂದು ಪ್ರಜಾವಾಣಿ ಸಂಪಾದಕೀಯದಲ್ಲಿ ಶ್ಲಾಘಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಕೋವಿಡ್‌ ಮಾರ್ಗಸೂಚಿ ಅನ್ವಯ ಪರೀಕ್ಷೆ ಆಯೋಜಿಸೋಣ ಎಂದು ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT