ಶನಿವಾರ, ಸೆಪ್ಟೆಂಬರ್ 25, 2021
25 °C
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಎನ್.ನಾಯಕ್

ಲೋಕ ಅದಾಲತ್‍ ಆ.14ಕ್ಕೆ: ಪ್ರಕರಣ ರಾಜಿ ಇತ್ಯರ್ಥಕ್ಕೆ ಸುವರ್ಣಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಾದ್ಯಂತ ಆಗಸ್ಟ್ 14 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದ್ದು, ಕಕ್ಷಿದಾರರಿಗೆ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿರುತ್ತದೆ ಎಂದು ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್. ನಾಯಕ್ ಹೇಳಿದರು.

ನಗರದ ಕೋರ್ಟ್ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಕ್ಷಿದಾರರು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕು ಎಂದರು.

ರಾಷ್ಟ್ರೀಯ ಲೋಕ ಅದಾಲತ್‍ನಿಂದ ಕಕ್ಷಿದಾರರಿಗೆ ಬಹಳ ಅನುಕೂಲವಾಗಲಿದ್ದು, ಇದರಿಂದ ಕಕ್ಷಿದಾರರ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಅಲ್ಲದೇ, ನ್ಯಾಯಾಲಯಕ್ಕೆ ಹಾಗೂ ವಕೀಲರಿಗೆ ಯಾವುದೇ ಶುಲ್ಕ ನೀಡಬೇಕಾಗಿಲ್ಲ ಎಂದು ಅವರು ಹೇಳಿದರು.

ಲೋಕ ಅದಾಲತ್‍ನಲ್ಲಿ ರಾಜಿ ಮೂಲಕ ಪರಿಹರಿಸಲಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಯಾವುದೇ ಅವಕಾಶವಿರುವುದಿಲ್ಲ. ವಿಚ್ಛೇದನ ಹೊರತುಪಡಿಸಿ ಜೀವನಾಂಶ ಹಾಗೂ ವಿವಾಹ ಪ್ರಕರಣಗಳನ್ನು ಕಕ್ಷಿದಾರರಿಗೆ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು.

ಮೋಟರ್ ವೆಹಿಕಲ್ ಪ್ರಕರಣ, ಬ್ಯಾಂಕ್ ಚೆಕ್ ಬೌನ್ಸ್, ವಿದ್ಯುತ್ ಕಳ್ಳತನದಂತಹ ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸಲಾಗುತ್ತದೆ. ಕೆಲವು ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನೂ ಇತ್ಯರ್ಥಪಡಿಸಲಾಗುತ್ತದೆ. ಕಕ್ಷಿದಾರರಲ್ಲದಿದ್ದರೂ ಕೂಡ ಯಾವುದಾದರೂ ವ್ಯಾಜ್ಯವಿದ್ದರೂ ಪರಿಹರಿಸಿಕೊಳ್ಳಬಹುದು. ಇದೆಲ್ಲದರಿಂದಾಗಿ ಸಮಾಜದಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕಲು ಅವಕಾಶವಾಗುತ್ತದೆ ಎಂದು ಅವರು ಹೇಳಿದರು.

ಅಗಸ್ಟ್ 14ರ ಲೋಕ ಅದಾಲತ್ ದೇಶಾದ್ಯಂತ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಒಂದೇ ದಿನ ನಡೆಯುತ್ತಿದೆ. ಎರಡನೇ ಶನಿವಾರ ಸರ್ಕಾರಿ ರಜೆ ಇದ್ದರೂ ಇದು ನಡೆಯುತ್ತಿರುವುದು ಬಹಳ ವಿಶೇಷವಾಗಿದೆ. ಕಾರಣ ಕಕ್ಷಿದಾರರು ರಜೆ ಎಂಬಿತ್ಯಾದಿ ಗೊಂದಲಗಳಿಗೆ ಒಳಗಾಗಬಾರದು ಎಂದರು.

ಈಗಾಗಲೇ ಕಳೆದ ಮಾರ್ಚ್‍ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ 28,801 ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿ ₹ 23,46,2,718 ಪರಿಹಾರ ಒದಗಿಸಲಾಗಿದೆ. ನ್ಯಾಯಾಲಯದಲ್ಲಿ 68,100 ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು