ಬುಧವಾರ, ಜುಲೈ 28, 2021
29 °C
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಆದೇಶ

ಮದುವೆ, ಸಮಾರಂಭ 15 ದಿನ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮುಂದಿನ 15 ದಿನಗಳ ಕಾಲ ಮದುವೆ, ಸಮಾರಂಭ ಆಯೋಜಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಆದೇಶ ಹೊರಡಿಸಿದ್ದಾರೆ.

ಹೋಂ ಕ್ವಾರಂಟೈನ್‍ ಕಡ್ಡಾಯ:

ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರು, ಕೋವಿಡ್ ಸೋಂಕಿತರು ಮತ್ತು ಪ್ರಥಮ ಸಂಪರ್ಕಿತರು ಕಡ್ಡಾಯವಾಗಿ ಹೋಂ ಕ್ವಾರಂಟೈನ್‍ಗೆ ಒಳಪಡಬೇಕು, ತಪ್ಪಿದಲ್ಲಿ ಅಂತವರ ವಿರುದ್ಧ  ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಡಿಯೊ ಸಂವಾದ:

ಕೋವಿಡ್‌ ಕುರಿತು ಸೂಕ್ತ ಮುನ್ನೆಚ್ಚರಿಕೆ ಮತ್ತು ಅರಿವು ಮೂಡಿಸಲು ಶುಕ್ರವಾರ ಏಕಕಾಲಕ್ಕೆ 2500ಕ್ಕೂ ಹೆಚ್ಚು ಗ್ರಾಮ ಮಟ್ಟದ ಕಾರ್ಯಪಡೆ ಸಮಿತಿ ಸದಸ್ಯರೊಂದಿಗೆ ತಜ್ಞ ವೈದ್ಯರು, ಅಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಅರಿವು ಮೂಡಿಸಿದರು.

ಪ್ರತಿ ಗ್ರಾಮ ಮಟ್ಟದಲ್ಲಿ 10 ಸದಸ್ಯರನ್ನು ಒಳಗೊಂಡ ಯುವಕರ ಸಂಘಗಳನ್ನು ರಚಿಸಿ ಕೋವಿಡ್‌ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಬೇಕು. ಈ ರೋಗ ಲಕ್ಷಣ ಕಂಡುಬಂದವರನ್ನು ತಕ್ಷಣ ಪತ್ತೆ ಹಚ್ಚಿ ಆಯಾ ಆರ್‌ಎಂಪಿ ವೈದ್ಯರೊಂದಿಗೆ ಸಂಪರ್ಕ ಸಾಧಿಸುವಂತೆ ನಿರ್ದೇಶನ ನೀಡಲಾಯಿತು.

ಗರ್ಭಿಣಿಯರಿಗೆ ಸಲಹೆ

ಗರ್ಭಿಣಿಯರು ಕಡ್ಡಾಯವಾಗಿ ಲಿಂಬೆರಸ, ವಿಟಮಿನ್ ಸಿ ಮಾತ್ರೆ, ಜಿಂಕ್ ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಕೋವಿಡ್ ಲಕ್ಷಣ ಕಂಡುಬಂದ ತಕ್ಷಣ ವೈದ್ಯರಿಗೆ ಸಂಪರ್ಕಿಸಬೇಕು ತಜ್ಞರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಶರಣಪ್ಪ ಕಟ್ಟಿ, ಡಾ.ಪ್ರಶಾಂತ ಕಟಕೋಳ, ಡಾ. ಲಕ್ಕಣ್ಣನವರ್, ಡಬ್ಲ್ಯುಎಚ್‍ಒ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಡಾ. ಮರಗುದ್ದಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ ಉಪಸ್ಥಿತರಿದ್ದರು.

ಕ್ವಾರಂಟೈನ್ ಜೈಲ್ ಆಗಿ ಪರಿವರ್ತನೆ

ವಿಜಯಪುರ: ಇಲ್ಲಿನ ಕಾರಾಗೃಹದ ಮುಂಭಾಗದಲ್ಲಿರುವ ಗಾರ್ಡ್ ರೂಂ ಅನ್ನು ಕ್ವಾರಂಟೈನ್ ಜೈಲ್ ಆಗಿ ಪರಿವರ್ತಿಸಲಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಐ.ಜೆ ಮ್ಯಾಗೇರಿ ಅವರು ತಿಳಿಸಿದ್ದಾರೆ.

ಗಾರ್ಡ್ ರೂಂ ಅನ್ನು ₹ 4.5 ಲಕ್ಷ ಅನುದಾನದಲ್ಲಿ ಕ್ವಾರಂಟೈನ್ ಜೈಲ್ ನಿರ್ಮಿಸಲಾಗಿದೆ. ಹೊಸದಾಗಿ ಕಾರಾಗೃಹಕ್ಕೆ ಬರುವವರನ್ನು ಕೋವಿಡ್‌ ಸೋಂಕು ಪರೀಕ್ಷೆಯ ನಂತರ ಅವರ ಆರೋಗ್ಯದ ಹಿತದೃಷ್ಟಿಯಿಂದ 14 ದಿನ ಕ್ವಾರಂಟೈನ್‍ನಲ್ಲಿ ಇಡಲು ಈ ಕ್ವಾರಂಟೈನ್ ಜೈಲನ್ನು ನಿರ್ಮಿಸಿ ಆರಂಭಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು