ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ಗೆ ನೋಟಿಸ್‌ ನೀಡಿ: ಉಪವಿಭಾಗಾಧಿಕಾರಿಗೆ ಶಾಸಕ ಪಾಟೀಲ ನಡಹಳ್ಳಿ ಸೂಚನೆ

Last Updated 7 ಸೆಪ್ಟೆಂಬರ್ 2020, 1:22 IST
ಅಕ್ಷರ ಗಾತ್ರ

ನಿಡಗುಂದಿ: ತಾಲ್ಲೂಕಿನ ಹೊಳೆಮಸೂತಿ ಗ್ರಾಮದಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಬಂದಿಲ್ಲವೆಂದು ವೃದ್ಧೆಯರು ದೂರಿದ ಹಿನ್ನೆಲೆಯಲ್ಲಿ ಆಹಾರ ಪೂರೈಕೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನಿಡಗುಂದಿ ತಹಶೀಲ್ದಾರ್‌ಗೆ ನೋಟಿಸ್ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಹೊಳೆಮಸೂತಿ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಶಾಸಕರನ್ನು ಭೇಟಿಯಾಗಿ ವೃದ್ಧೆಯರು ದೂರಿತ್ತರು. ತಕ್ಷಣ ದೂರವಾಣಿ ಮೂಲಕ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಅವರೊಂದಿಗೆ ಮಾತನಾಡಿದ ಅವರು, ನಿಡಗುಂದಿ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಅವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ತಕ್ಷಣ ಬಾಕಿ ಇರುವ ಮಾಶಾಸನ ನೀಡುವಂತೆ ಸೂಚಿಸಿದರು.

ಎಚ್ಚರಿಕೆ: ‘ಈ ಹಿಂದೆ ಜನಸಂಪರ್ಕ ಸಭೆ ನಡೆಸಿದಾಗ ಅನೇಕ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಸೂತಿ ಗ್ರಾಮದ ರೈತರಿಗೆ ಪರಿಹಾರ ಬಂದಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಿ ರೈತರಿಗೆ ನೀಡಬೇಕು. ಇಲ್ಲವಾದರೆ ನಿಡಗುಂದಿ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಎಚ್ಚರಿಸಿದರು.

ತಾಲ್ಲೂಕಿನ ಮಸೂತಿ ಗ್ರಾಮದಲ್ಲಿ ಭಾನುವಾರ ₹3.61 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.

‘ಮತಕ್ಷೇತ್ರದ 126 ಹಳ್ಳಿಗಳ ಪೈಕಿ 68 ಹಳ್ಳಿಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅಂದಾಜು ₹66 ಕೋಟಿ ಅನುದಾನ ಮಂಜೂರು ಮಾಡಿಸಿ, ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಹ್ಯಾಟ್ರಿಕ್ ಜಯ ಸಾಧಿಸಿದ್ದರಿಂದ ಸಚಿವ ಸ್ಥಾನ ಸಿಗುವ ನಿರೀಕ್ಷೆ ಮತದಾರರಲ್ಲಿ ಇತ್ತು. ಆದರೆ ಪಕ್ಷದ ನಾಯಕರು ಆಹಾರ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನಿಗಮದಿಂದ ನಿತ್ಯ ₹80 ಕೋಟಿ ಮೊತ್ತದ ಆಹಾರ ಧಾನ್ಯ ಖರೀದಿಸಿ ಸರಬರಾಜು ಮಾಡಲಾಗುತ್ತಿದೆ. ಈ ರೀತಿ ದಾಸೋಹ ಮಾಡುವ ಅವಕಾಶ ಲಭಿಸಿದೆ’ ಎಂದರು.

ಸಮಾಜ ಸೇವಕ ಶಾಂತಗೌಡ ಪಾಟೀಲ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಮುತ್ತಣ್ಣ ಹುಗ್ಗಿ, ಶ್ರೀಶೈಲ ಪಾಟೀಲ, ಸಿಪಿಐ ಆನಂದ ವಾಘಮೋಡೆ, ಗುತ್ತಿಗೆದಾರ ಆಲೂರ, ಪಿಡಿಒ ಮಹಾಂತೇಶ ಹೊಸಗೌಡರ, ಗ್ರಾಮಲೆಕ್ಕಾಧಿಕಾರಿ ಗಂಗಾಧರ ಜೂಲಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT