ನಾಲತವಾಡ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಬಡ ಹಾಗೂ ಮಧ್ಯಮ ವರ್ಗದ ಕೃಷಿಕರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ’ ಎಂದು ನಾಗಬೇನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮುತ್ತು ಸಾಹುಕಾರ ಅಂಗಡಿ ಹೇಳಿದರು.
ಸಮೀಪದ ನಾಗಬೇನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿ, ‘ಸಂಘವು ₹ 11529145 ಶೇರು ಬಂಡವಾಳದೊಂದಿಗೆ ಅಂದಾಜು ₹9 ಕೋಟಿ ಠೇವಣಿ ಹೊಂದಿದ್ದು, ₹23 ಲಕ್ಷ ಲಾಭ ಹೊಂದಿದೆ. ಕೃಷಿಗಾಗಿ ಶೂನ್ಯ ಬಡ್ಡಿ ದರದಲ್ಲಿ ನೀಡಿರುವ ಸಾಲವನ್ನು ಸಕಾಲದಲ್ಲಿ ರೈತರು ಮರು ಪಾವತಿಮಾಡಬೇಕು’ ಎಂದರು.
ಬ್ಯಾಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ ಅ.ಗೌಡರ ಸಂಘದ ಅಡಾವೆ ಪತ್ರಿಕೆ ಮಂಡಿಸಿದರು. ಗುಳೇದಗುಡ್ಡದ ಶ್ರೀಗಳು ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು.
ಉಪಾಧ್ಯಕ್ಷ ಕೆಂಚಪ್ಪ ಹು.ಗುರಿಕಾರ ಸೇರಿದಂತೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಶೇರುದಾರರು, ನಾಗಬೇನಾಳ, ವೀರೇಶನಗರ, ನಾಗಬೇನಾಳ ತಾಂಡಾ, ಆರೇಶಂಕರ ಗ್ರಾಮದ ಜನರು ಇದ್ದರು. ಶಿಕ್ಷಕ ರಾಜು ಹಾದಿಮನಿ ನಿರೂಪಿಸಿ, ವಂದಿಸಿದರು. ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು.