ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕೆಟ್ ವಂಚನೆ: ಚುನಾವಣಾ ಅಖಾಡಕ್ಕೆ ಸಿದ್ಧ

ಬಂಜಾರಾ ಸಮುದಾಯದ ಸ್ವಾಭಿಮಾನ ಕೆಣಕಿದ್ದು ಸರಿಯಲ್ಲ: ಡಾ.ಬಾಬು ರಾಜೇಂದ್ರ ನಾಯಿಕ
Published 13 ಏಪ್ರಿಲ್ 2024, 14:25 IST
Last Updated 13 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ವಿಜಯಪುರ: ಬರುವ ಮಂಗಳವಾರ ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವುದಾಗಿ ಡಾ.ಬಾಬು ರಾಜೇಂದ್ರ ನಾಯಿಕ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಬಿಜೆಪಿ ಹಾಗೂ ಸಂಘ ಪರಿವಾರದಲ್ಲಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ಇತ್ತು. ಆದರೆ, ಕೆಲವರ ಬ್ಲ್ಯಾಕ್ ಮೇಲ್ ಕುತಂತ್ರದಿಂದ ಟಿಕೆಟ್ ಕೈತಪ್ಪಿದ್ದು, ಈಗಲೂ ಬಿಜೆಪಿಯಿಂದ ನನಗೆ ಬಿ–ಫಾರ್ಮ್‌ ಸಿಗುವ ಆಶಾಭಾವ ಇದೆ ಎಂದರು.

ಕಳೆದ ಮೂರು ವರ್ಷಗಳಿಂದ ಬಿಜೆಪಿ ವೈದ್ಯಕೀಯ ಪ್ರಕೋಷ್ಠಕದ ಸಂಚಾಲಕನಾಗಿ ಸೇವೆ ಸಲ್ಲಿಸಿದ್ದೇನೆ. ಕೊರೊನಾ ಸಂಕಷ್ಠದಲ್ಲಿ ಜನರಿಗೆ ನೆರವಾಗಿದ್ದೇನೆ. ಮತಾಂತರಕ್ಕೆ ಸೆಡ್ಡು ಹೊಡೆದು ಸಾವಿರಾರೂ ಸಂಖ್ಯೆ ಜನರನ್ನು ಮರಳಿ ಸ್ವಧರ್ಮಕ್ಕೆ ಕರೆತರುವ ಕೆಲಸ ಮಾಡಿದ್ದೇನೆ ಎಂದರು.

ವಿಜಯಪುರ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ಈಗಾಗಲೇ ತೀರ್ಮಾನಿಸಿದ್ದೇನೆ. ಟಿಕೆಟ್ ನೀಡುವ ಭರವಸೆಯಿಂದ ಸಾಕಷ್ಟು ಪರಿಶ್ರಮ ಹಾಕಿ ಸಂಘಟಿಸಿದ್ದೇನೆ. ಬೆಂಬಲಿಗರು, ಕಾರ್ಯಕರ್ತರು, ಮಠಾಧೀಶರು, ಸಂತರು ನನ್ನ ಬೆಂಬಲಕ್ಕಿದ್ದಾರೆ. ಕೆಲವರ ಕುತಂತ್ರದಿಂದ ಟಿಕೆಟ್‌ ಕೈತಪ್ಪಿದ್ದು, ಇನ್ನೂ ಕಾಲ ಮಿಂಚಿಲ್ಲ. ಅಭ್ಯರ್ಥಿ ಬದಲಾವಣೆ ಆದ ಅನೇಕ ಉದಾಹಣೆಗಳಿವೆ ಎಂದರು.

ನಾನು ಅವಿಭಜಿತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಗಣಿ ತಾಂಡಾದಲ್ಲಿ ಹುಟ್ಟಿದವನು. ಆದರೆ, ಒಬ್ಬ ಮಹಾನುಭಾವರು, 50 ವರ್ಷ ರಾಜಕೀಯ ಲಾಭ ಪಡೆದವರು, ಕೇಂದ್ರ ಮತ್ತು ರಾಜ್ಯದ ಸಚಿವರಾಗಿ ಕೆಲಸ ಮಾಡಿದವರು, 6 ಬಾರಿ ಸಂಸದರಾದವರು, ಹೊಂದಾಣಿಕೆ ರಾಜಕಾರಣದ ಭೀಷ್ಮ ಪಿತಾಮಹ ಎನ್ನಿಸಿಕೊಂಡವರು ನನ್ನ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಜಿಗಜಿಣಗಿ ಹೆಸರು ಉಲ್ಲೇಖಿಸದೆ ಕುಟುಕಿದರು.

ಅವರು ನನ್ನ ಬಗ್ಗೆ ‘ಅವನು ಬಾಗಲಕೋಟೆಯಿಂದ ಜನರನ್ನು ಕರೆಯಿಸಿ ಪ್ರತಿಭಟನೆ ಮಾಡಿಸುತ್ತಾನೆ’ ಎಂದು ಟೀಕಿಸುತ್ತಾರೆ. ಅಭಿಮಾನಿಗಳು ಸಮಾಜಕ್ಕೆ ಆದ ಅನ್ಯಾಯದ ಬಗ್ಗೆ ಪಕ್ಷದ ಕಚೇರಿಗೆ ಹೋಗಿ ಪ್ರಶ್ನೆ ಕೇಳಿದ್ದಾರೆ, ಆದರೇ ಸಮಾಜದ ಬಗ್ಗೆ ತುಚ್ಛವಾಗಿ ಮಾತನಾಡಿದ್ದು ಸರಿಯಲ್ಲ ಎಂದರು.  

ಬಂಜಾರಾ ಸಮುದಾಯದ ಸ್ವಾಭಿಮಾನ ಕೆಣಕಿದ್ದಾರೆ. ಕಾಡು ಮೇಡು ಅಲೆದು ಮೇಲ್ವರ್ಗದ ಜನರ ಸಹಕಾರದೊಂದಿಗೆ ಹೋಗುತ್ತಿರುವುದು ಈ ಮಹಾನುಭವಾರಿಗೆ ಸಹನೆಯಾಗುತ್ತಿಲ್ಲ ಎಂದು ಕಾಣುತ್ತದೆ ಎಂದು ಕಿಡಿಕಾರಿದರು.  

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಆಗುವವರೆಗೆ ನನ್ನ ಹೋರಾಟ ನಿರಂತರ, ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ, ಬೃಹತ್ ಕೈಗಾರಿಕೆಗಳ ಸ್ಥಾಪನೆ, ಕೃಷಿ ಮತ್ತು ತೋಟಗಾರಿಕೆ ಬೆಳೆಗಾರ ಅಭಿವೃದ್ಧಿ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ, ವಿಕಸಿತ ವಿಜಯಪುರಕ್ಕಾಗಿ ನಾನು ಚುನಾವಣೆಯಲ್ಲಿ ಮುಂದುವರೆಯುತ್ತೇನೆ ಎಂದು ತಿಳಿಸಿದರು.

ಮುಖಂಡರಾದ ಮೋಹನ ಚವ್ಹಾಣ, ಅಪ್ಪು ರಾಠೋಡ, ರಾಕೇಶ ರಜಪೂತ, ರವಿ ರಾಠೋಡ, ಸುನೀಲ ಪವಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT