ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬಹಿರ್ದೆಸೆಗೆ ಹೊರಟವರ ಕೊರಳಿಗೆ ಹಾರ!

ಇಟ್ಟಂಗಿಹಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಜಾಗೃತಿ
Last Updated 5 ಸೆಪ್ಟೆಂಬರ್ 2020, 12:59 IST
ಅಕ್ಷರ ಗಾತ್ರ

ವಿಜಯಪುರ: ಇಟ್ಟಂಗಿಗಾಳ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಎಂದಿನಂತೆ ತಂಬಿಗೆ ಹಿಡಿದು ರಸ್ತೆ ಆಜುಬಾಜು ಮತ್ತು ಹೊಲಗಳತ್ತ ಬಯಲು ಶೌಚಕ್ಕೆ ಹೊರಟವರಿಗೆ ಅಚ್ಚರಿ ಕಾದಿತ್ತು.

ಬಯಲು ಶೌಚಕ್ಕೆ ಹೊರಟವರ ಕೊರಳಿಗೆ ಹೂವಿನ ಹಾರ ಹಾಕಿ, ಬಹಿರ್ದೆಸೆಗೆ ಹೋಗದಂತೆಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಮನವಿ ಮಾಡಿದರು. ಇದರಿಂದ ಅಚ್ಚರಿ ಜೊತೆಗೆ ನಾಚಿಕೆಯಿಂದ ತಲೆ ತಗ್ಗಿಸಿದ ಅನೇಕರು ಅಲ್ಲಿಂದ ಹೇಳದೇ, ಕೇಳದೇ ಕಾಲ್ಕಿತ್ತರು!

ಇಟ್ಟಂಗಿಹಾಳ ಗ್ರಾಮದ ಅಡವಿ ದೊಡ್ಡಿಯಲ್ಲಿ ಅಲೆಮಾರು ಕುರಿಗಾಹಿಗಳ ಟೆಂಟ್‌ನಲ್ಲಿ ವಾಸ್ತವ್ಯ ಮಾಡಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶನಿವಾರ ಬೆಳಿಗ್ಗೆ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಬಹಿರ್ದೆಸೆ ಬಗ್ಗೆ ಜಾಗೃತಿ ಮೂಡಿಸಿದರು.

‘ಬಯಲು ಶೌಚಕ್ಕೆ ಹೋಗ ಬೇಡಿ, ಮನೆಯಲ್ಲೇ ಶೌಚಾಲಯವನ್ನು ಕಟ್ಟಿಸಿಕೊಳ್ಳಿ, ಸರ್ಕಾರದಿಂದ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ’ ಎಂದು ವಿನಂತಿ ಮಾಡಿದರು.

ಗ್ರಾಮದ ಬೀದಿಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಜನರಿಗೆ ತಿಳಿವಳಿಕೆ ಮೂಡಿಸಿದರು. ಗ್ರಾಮಕ್ಕೆ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.

ಕುರಿಗಾಹಿಗಳ ಮನವಿ:

ಶನಿವಾರ ರಾತ್ರಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕುರಿಗಾಹಿಗಳು,ಅಲೆಮಾರಿ ಕುರಿಗಾಹಿಗಳಿಗೆ ಆತ್ಮ ರಕ್ಷಣೆಗೆ ಹಾಗೂ ಕುರಿಗಳನ್ನು ರಕ್ಷಿಸಿಸುವ ಸಲುವಾಗಿ ಬಂದೂಕು ಪರವಾನಗಿ ಕೊಡಿಸಿ ಎಂದು ಮನವಿ ಮಾಡಿದರು.

ಕುರಿಗಾಹಿಗಳು ಹಾಗೂ ಕುರಿ, ಆಡುಗಳನ್ನು ವಿಮಾ ವ್ಯಾಪ್ತಿಗೆ ಸೇರಿಸಬೇಕು, ಆಲೆಮಾರಿ ಕುರಿಗಾಹಿಗಳಿಗೆ ತಾವು ಹೋದ ಸ್ಥಳಗಳಲ್ಲಿ ಪಡಿತರ ನೀಡಬೇಕು, ಜಿಲ್ಲೆಯಲ್ಲಿ ಉಣ್ಣೆ ಕಂಬಳಿ ಉದ್ಯಮ ಸ್ಥಾಪಿಸಬೇಕು ಎಂದು ಅಧ್ಯಕ್ಷೆ ಬಳಿ ಕುರಿಗಾಹಿಗಳು ಮನವಿ ಮಾಡಿಕೊಂಡರು.

ಕುರಿ ಮೇಯಲು ಇರುವ ಸರ್ಕಾರಿ ಜಮೀನನ್ನು ಕೆಲವರು ಒತ್ತುವರಿ ಮಾಡಿದ್ದು, ಅದನ್ನು ತೆರವುಗೊಳಿಸಬೇಕು. ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡಬೇಕು, ಕುರಿಗಳ ಅನಾರೋಗ್ಯಕ್ಕೆ ಸರ್ಕಾರದಿಂದ ಔಷಧ ಸಿಗುವಂತೆ ಮಾಡಬೇಕು ಎಂದು ಕೋರಿದರು.

ಮನವಿ ಆಲಿಸಿದ ಅಧ್ಯಕ್ಷೆ, ಅಲೆಮಾರಿ ಕುರಿಗಾಹಿಗಳ ಬೇಡಿಕೆಗಳಿಗೆಅಧಿಕಾರಿಗಳು ಬೇಗನೆ ಸ್ಪಂದನೆ ನೀಡಬೇಕು. ಒಂದು ವೇಳೆ ಕುರಿಗಾಹಿಗಳಿಗೆ ಸವಲತ್ತು ಸಿಗದೆ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೋಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹುಲಜಂತಿ ಮಾಳಿಂಗರಾಯ ಅಜ್ಜ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅಹಿಂದ ಮುಖಂಡ ಸೋಮನಾಳ ಕಳ್ಳಿಮನಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ನಾಟಿಕರ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲ್ಲಪ್ಪ ಮಟ್ಟಿ, ಡಾ ಬಸವರಾಜ ಅಸ್ಕಿ, ಮುಖಂಡರಾದ ಗುರುಲಿಂಗಪ್ಪ ಅಂಗಡಿ, ಪುಂಡಲಿಕ ಕಾಳೆ, ಬಾಬು ಗುಲಗಂಜಿ, ಶಂಕರ ಕಾಳೆ, ಬೀರಪ್ಪ ಜುಮನಾಳ, ಮಲ್ಲು ಬಿದರಿ, ದೇವಕಾಂತ ಬಿಜ್ಜರಗಿ, ಬಾಜಿರಾವ್‌ ಕರಾತ್, ಬೀರಪ್ಪ ಕರಾತ್, ಮಹಾದೇವ ಹೀರೆಕುರಬರ, ಬಿವಾ ಮಾನೆ, ಕೆಪಿಸಿಸಿ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ, ವಿನೋದ ವ್ಯಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT