ಗುರುವಾರ , ಮಾರ್ಚ್ 23, 2023
30 °C
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ

ವಿಜಯಪುರ: ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಎಲ್ ಪಿ ಜಿ ಸಿಲಿಂಡರ್ ದರ ಹೆಚ್ಚಳ ವಿರೋಧಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಶನಿವಾರ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಎಲ್‌ಪಿಜಿ ದರ ಹರಚ್ಚಿಸಿರುವ ಮೋದಿ ಸರ್ಕಾರಕ್ಕೆ ಧಿಕ್ಕಾರ, ಬೆಲೆ ಏರಿಕೆಯ ದಿನಗಳೇ ಅಚ್ಚೇದಿನಗಳೆ? ಉತ್ತರಿಸಿ! ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಮುಂತಾದ ಘೋಷಣೆಗಳನ್ನು ಕೂಗಿದರು.

ಎಸ್.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮಾತನಾಡಿ, ಕೋವಿಡ್‌ ರೊಗ ಮತ್ತು ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರ ಬದುಕು ಭಾರವಾಗಿರುವ ಈ ಸಂದರ್ಭದಲ್ಲಿ ಸರ್ಕಾರ ಈಗಿರುವ ಎಲ್ ಪಿ ಜಿ ಸಿಲಿಂಡರ್ ದರ  ಕಡಿಮೆ ಮಾಡಬೇಕಿತ್ತು. ಆದರೆ, ಇದ್ದ ಬೆಲೆಯನ್ನೇ ಏರಿಸಿ ಜನಸಾಮಾನ್ಯರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈಗಾಗಲೇ ಬೇಳೆ ಕಾಳು, ಎಣ್ಣಿ, ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಇದೀಗ ಸರ್ಕಾರ ಅಡುಗೆ ಅನಿಲದ ದರವನ್ನು ₹ 25 ಹೆಚ್ಚಳ ಮಾಡುವುದರ ಮೂಲಕ ಬಡವರ ಗಾಯದ ಮೇಲೆ ಬರೆ ಎಳೆದಿದೆದೆ ಎಂದರು.

ಕಾಂಗ್ರೆಸ್‌ ಸರ್ಕಾರದಿಂದ ಈ ದೇಶದ ಜನಗಳ ಆಶೋತ್ತರಗಳನ್ನು ಇಡೇರಿಸಲು ಸಾಧ್ಯವಾಗಿಲ್ಲ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಿದೆ ಎಂದು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಸರ್ಕಾರ ಎಲ್ಲ ವಿಧದಲ್ಲೂ ವಿಫಲವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಎಚ್.ಟಿ. ಮಾತನಾಡಿ, ಸರ್ಕಾರಗಳು ಜನತೆಯ ತೆರಿಗೆಯಲ್ಲಿ ನಡೆಯುತ್ತಿವೆ. ಈ ತೆರಿಗೆಯಿಂದ ಜನರಿಗೆ ಸೇವಾವಲಯಗಳ ಮೂಲಕ ಕೆಲವೊಂದು ಸೌಲಭ್ಯಗಳನ್ನು ಒದಗಿಸಬೇಕಿತ್ತು. ಅದರ ಬದಲು ಸರ್ಕಾರಗಳು ತೆರಿಗೆ ಮತ್ತು ದರ ಹೆಚ್ಚಳದ ಮೂಲಕ ಜನತೆಯನ್ನೇ ದೋಚುತ್ತಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಹೋರಾಟ ಬೆಂಬಲಿಸಿ ಮಾತನಾಡಿದ ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶಾಳಕರ ಮತ್ತು ಸಾಮಾಜಿಕ ಹೋರಾಟಗಾರ ಸದಾನಂದ ಮೋದಿ, ಬಿಜೆಪಿ ಸರ್ಕಾರಕ್ಕೆ ಜನಸಾಮಾನ್ಯರ ಅಭಿವೃದ್ಧಿಗಿಂತಲೂ ಅಂಬಾನಿ, ಅದಾನಿಗಳ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದ್ದಾರೆ. ಹಾಗಾಗಿ ಒಂದೆಡೆ ದೇಶದ ಜನರ ಸಂಪತ್ತು ಕರಗುತ್ತಿದ್ದರೆ, ಬಂಡವಾಳಿಗರ ಸಂಪತ್ತು ವಿಪರೀತ ಹೆಚ್ಚಳವಾಗುತ್ತಿದೆ ಎಂದು ಹೇಳಿದರು.

ಎಸ್.ಯು.ಸಿ.ಐ ನ ಜಿಲ್ಲಾ ಸಮಿತಿ ಸದಸ್ಯರಾದ ಎಚ್.ಟಿ.ಭರತಕುಮಾರ್‌, ಬಾಳು ಜೇವೂರ, ಕಾವೇರಿ, ಕಾಶಿಬಾಯಿ, ಗೀತಾ ಎಚ್, ಸುನೀಲ ಸಿದ್ರಾಮಶೆಟ್ಟಿ, ಮಹಾದೇವಿ ಧರ್ಮಶೆಟ್ಟಿ, ಕಾಶಿಬಾಯಿ ಜನಗೊಂಡ, ಶಿವಬಾಳಮ್ಮ ಕೊಂಡಗೂಳಿ, ರೇಣುಕಾ ಕಲಕುಟಗೇರಿ, ಅಕಲಾಕಬಾನು ನಗರಜಿ, ಸುಲೋಚನಾ ಹಜೇರಿ, ಸುವರ್ಣಾ ಉಕ್ಕಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

*
ವಿದೇಶದಿಂದ ಕಪ್ಪುಹಣ ತಂದು ಜನರಿಗೆ ಹಂಚುತ್ತೇನೆ, ಎಲ್ಲ ರೀತಿಯ ಬೆಲೆ ಏರಿಕೆ ನಿಯಂತ್ರಿಸುವೆ ಎಂದಿದ್ದರು. ಆದರೆ, ಆಶ್ವಾಸನೆಗಳನ್ನು ಇಡೇರಿಸಲಾಗದ ದಯನೀಯ ಸನ್ನಿವೇಶದಲ್ಲಿದ್ದಾರೆ.
-ಸಿದ್ದಲಿಂಗ ಬಾಗೇವಾಡಿ, ಜಿಲ್ಲಾ ಸಮಿತಿ ಸದಸ್ಯ, ಎಸ್.ಯು.ಸಿ.ಐ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು