ಚಡಚಣ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಹಾದು ಹೋಗಿರುವ ಭೀಮಾ ನದಿ ಭೊರ್ಗರೆಯುತ್ತಿದ್ದು, ಪ್ರವಾಹ ಭೀತಿ ಏದುರಾಗಿದೆ.
ಮಹಾರಾಷ್ಟ್ರದ ಉಜನಿ ಜಲಾಶಯಕ್ಕೆ ನೀರಿನ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಅಪಾರ ಪ್ರಮಾಣ ನೀರು ಹೊರ ಬಿಡಲಾಗುತ್ತಿದೆ.
ಉಜನಿ ಜಲಾಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚಾಗುತ್ತಿರುವುದರಿಂದ ಭೀಮಾ ನದಿಗೆ ನಿರ್ಮಿಸಲಾದ ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯಗಳು ಭರ್ತಿಯಾಗಿವೆ. ಇವೆರಡೂ ಜಲಾಶಗಳಿಂದ ನಿತ್ಯ 1.20 ಲಕ್ಷ ಕ್ಯುಸೆಕ್ ನೀರು ಹರಿ ಬಿಡಲಾಗುತ್ತಿದೆ. ಇದರಿಂದ ನೀರಿನ ಪ್ರವಾಹ ಮಟ್ಟ ದಿನದಿಂದ ದಿನಕ್ಕೆ ಏರುತ್ತಿದೆ.
ಧೂಳಖೇಡ ಹಾಗೂ ಟಾಕಳಿ ಗ್ರಾಮಗಳ ಮಧ್ಯದ ಸೇತುವೆ ಕೆಳಗೆ 10.5 ಮೀಟರ್ ನೀರು ಹರಿಯುತ್ತಿದ್ದು, ಇದು 12 ಮೀಟರ್ ತಲುಪಿದರೆ ನದಿ ತೀರದ ಹೊಲ ಗದ್ದೆಗಳಲ್ಲಿ ನೀರು ಹರಿಯಲು ಆರಂಭಿಸುತ್ತದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಧ್ಯ ಭೀಮಾ ನದಿಗೆ ನಿರ್ಮಿಸಲಾದ 8 ಬಾಂದಾರ ಕಮ್ ಬ್ರಿಜ್‌ಗಳು ಜಲಾವೃತಗೊಂಡಿವೆ. ಇದರಿಂದಾಗಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಸ್ಥಗಿತಗೊಂಡಿವೆ.
ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ಜನರು ಸುರಕ್ಷಿತ ತಾಣಗಳತ್ತ ತಮ್ಮ ಸಾಮಾನು ಸರಂಜಾಮು ಹಾಗೂ ಜಾನವಾರುಗಳೊಂದಿಗೆ ತೆರಳುವಂತೆ ತಹಶೀಲ್ದಾರ್ ನೇತೃತ್ವದ ತಂಡ ಡಂಗೂರ ಸಾರಿದೆ.
ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಅನುಮತಿ ಇಲ್ಲದೇ ತೆರಳದೆ, ಸ್ಥಾನಿಕವಾಗಿ ಇರುವಂತೆ ತಹಶೀಲ್ದಾರ್ ಸಂಜಯ ಇಂಗಳೆ ಸೂಚಿಸಿದ್ದಾರೆ.
ಧೂಳಖೇಡ, ಟಾಕಳಿ ಗ್ರಾಮಗಳ ಮಧ್ಯದ ಸೇತುವೆ ಕೆಳಗೆ 10.5 ಮೀಟರ್ ನೀರು ಭೀಮಾ ನದಿಗೆ ನಿರ್ಮಿಸಲಾದ 8 ಬಾಂದಾರ ಕಮ್ ಬ್ರಿಜ್‌ಗಳು ಜಲಾವೃತ ಅಧಿಕಾರಿಗಳು ಅನುಮತಿ ಇಲ್ಲದೇ ತೆರಳುವಂತಿಲ್ಲ