ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಅಕಾಲಿಕ ಮಳೆ, ತುಂಬುವತ್ತ ಆಲಮಟ್ಟಿ ಜಲಾಶಯ

17 ಟಿಎಂಸಿ ಅಡಿ ಹೆಚ್ಚುವರಿ ನೀರು: ಹಿಂಗಾರಿಗೆ ಕಾಲುವೆಗೆ ನೀರು ಹರಿಯಲು ಆರಂಭ
Last Updated 10 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಸ್ಥಗಿತಗೊಂಡಿದ್ದ ಒಳಹರಿವು ನ 20 ರಿಂದ ಆರಂಭಗೊಂಡಿದ್ದು, ಜಲಾಶಯಕ್ಕೆ 20 ದಿನದಲ್ಲಿ 17 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿದು ಬಂದಿದೆ.

ಪ್ರತಿ ಬಾರಿ ನವೆಂಬರ್ ಮೊದಲ ವಾರದಲ್ಲಿ ಒಳಹರಿವು ಸ್ಥಗಿತಗೊಂಡರೇ ಮತ್ತೇ ಆರಂಭಗೊಳ್ಳುವುದು ಮುಂದಿನ ಮುಂಗಾರು ಹಂಗಾಮಿಗೆ. ಆದರೆ, ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಒಳಹರಿವು ಮತ್ತೇ ಆರಂಭಗೊಂಡಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ಹೇಳಿದರು.

ನೀರು ಹರಿಸಿ: ನ.23 ರಂದು ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯುವಾಗ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯ ಸೇರಿ ಕಳೆದ ವರ್ಷಕ್ಕಿಂತ 12 ಟಿಎಂಸಿ ಅಡಿ ನೀರಿನ ಕೊರತೆಯಿತ್ತು. ಈ ಕಾರಣದಿಂದ ಹಿಂಗಾರು ಹಂಗಾಮಿಗೆ ವಾರಾಬಂಧಿಯಲ್ಲಿನ 2022 ರ ಮಾರ್ಚ್ 17 ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಆದರೆ, ಅಕಾಲಿಕ ಮಳೆಯಿಂದಾಗಿ ಹಿಂಗಾರಿ ಬಿತ್ತನೆಗೂ ನೀರಿನ ಅವಶ್ಯಕತೆ ಕಡಿಮೆಯಾಗಿದೆ. ಜತೆಗೆ ಪ್ರತಿ ವರ್ಷ ಡಿ.1 ರಿಂದ ಹಿಂಗಾರು ಹಂಗಾಮಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ಡಿ 8 ರಿಂದ ಆರಂಭಗೊಂಡಿದೆ. ಜತೆಗೆ ಕಾಲುವೆಗೆ ನೀರು ಹರಿಸುವ ವಾರಾಬಂಧಿಯಲ್ಲಿ ಸ್ಥಗಿತದ ಅವಧಿಯನ್ನು 8 ದಿನದ ಬದಲಾಗಿ 10 ದಿನಕ್ಕೆ ಹೆಚ್ಚಿಸಲಾಗಿದೆ.

ಹೀಗಾಗಿ ಕಾಲುವೆಗೆ ನೀರು ಹರಿಸುವ ಅವಧಿಯನ್ನು ಏಪ್ರಿಲ್ 15 ಕ್ಕೆ ವಿಸ್ತರಿಸಿ, ವಾರಾಬಂದಿಯಲ್ಲಿ ಸ್ಥಗಿತದ ಅವಧಿಯನ್ನು 10 ದಿನದ ಬದಲಾಗಿ 8 ದಿನಕ್ಕೆ ಇಳಿಸಬೇಕು ಎಂಬ ರೈತರ ಬೇಡಿಕೆ ಮತ್ತೇ ಮುನ್ನೆಲೆಗೆ ಬಂದಿದೆ.ಕಳೆದ ವರ್ಷ ಮಾರ್ಚ್ ಏ.4 ರವರೆಗೆ ಕಾಲುವೆಗೆ ನೀರು ಹರಿಸಲಾಗಿತ್ತು.

ಹೆಚ್ಚು ನೀರು ಸಂಗ್ರಹ: ಶುಕ್ರವಾರ ಆಲಮಟ್ಟಿ ಜಲಾಶಯದಲ್ಲಿ 519.29 ಮೀ. ಮಟ್ಟದಲ್ಲಿ 117.714 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ದಿನದಂದು (10-12-2020) ಜಲಾಶಯದಲ್ಲಿ 110 ಟಿಎಂಸಿ ಅಡಿ ನೀರಿತ್ತು. ಕಳೆದ ವರ್ಷಕ್ಕಿಂತ 7.7 ಟಿಎಂಸಿ ಅಡಿ ಹೆಚ್ಚು ನೀರು ಸಂಗ್ರಹಗೊಂಡಿದೆ.

ಸ್ಥಗಿತ ಅವಧಿ ಕಡಿಮೆಗೊಳಿಸಿ: ಕಳೆದ ವರ್ಷ ಇದ್ದಂತೆ ವಾರಾಬಂಧಿಯಲ್ಲಿ ನೀರು ಸ್ಥಗಿತದ ಅವಧಿಯನ್ನು 8 ದಿನಕ್ಕೆ ಇಳಿಸಿ, ಏಪ್ರಿಲ್ 15 ರವರೆಗೆ ನೀರು ಹರಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರೈತ ಮುಖಂಡ ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.

ಅಕಾಲಿಕ ಮಳೆ ಪರಿಣಾಮ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಿದೆ. ಹೆಚ್ಚುವರಿ ನೀರು ಸಂಗ್ರಹದ ಬಗ್ಗೆ ಐಸಿಸಿ ಗಮನಕ್ಕೆ ತರಲಾಗುವುದು, ಐಸಿಸಿ ತೀರ್ಮಾನದಂತೆ ಡಿ.8 ರಿಂದ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT