ಗುರುವಾರ , ಮೇ 19, 2022
24 °C
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೂಚನೆ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿ: ಲಕ್ಷ್ಮಿಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆಯ ಅಂಗವಾಗಿ ಎಲ್ಲ ವಿದ್ಯಾರ್ಥಿಗಳು ಶಾಲೆಗಳಿಗೆ ಫೆ. 12 ರೊಳಗಾಗಿ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೂಚನೆ ನೀಡಿದರು.

ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಸಭಾಂಗಣದಲ್ಲಿ ಸೋಮವಾರ ಶಿಕ್ಷಣ ಇಲಾಖೆ ಅಧಿಕಾರಿಗಳು, ಬಿಆರ್‌ಪಿ ಮತ್ತು ಸಿಆರ್‌ಪಿಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬಿಆರ್‌ಪಿ ಮತ್ತು ಸಿಆರ್‌ಪಿಗಳ ಸಹಕಾರದೊಂದಿಗೆ ಜಿಲ್ಲೆಯ ಎಲ್ಲ ನಗರ ಮತ್ತು ಪಟ್ಟಣಗಳ ಮತ್ತು ತಾಲ್ಲೂಕುಗಳ ಶಾಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. 

ವಿದ್ಯಾರ್ಥಿಗಳಲ್ಲಿ ಬರಹ ಸಾಮಾರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಹಂಚಿಕೆ ಮಾಡಿದ ತಾಲ್ಲೂಕುಗಳ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಏಪ್ರಿಲ್ 1ರಿಂದ ಮೇ 15 ರೊಳಗೆ ವಾರಕ್ಕೊಮ್ಮೆ 6 ವಾರಗಳ ಪ್ರಶ್ನೆ ಪತ್ರಿಕೆ ಸಹಿತ, ಉತ್ತರ ಪತ್ರಿಕೆಗಳನ್ನು ವಿಷಯವಾರು ತಯಾರಿಸಿ ಮಕ್ಕಳಿಂದ ಪ್ರತಿವಾರಕ್ಕೊಮ್ಮೆ ಪರೀಕ್ಷೆ ನಡೆಸಿ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ಮಾಡುವಂತೆ ಅವರು ಸೂಚಿಸಿದರು.

ಈ ಪ್ರಯೋಗವನ್ನು ಈಗಾಗಲೇ ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಯಚೂರು ಜಿಲ್ಲೆಯ ಶಾಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಶೇ 8 ರಷ್ಟು ಆ ಜಿಲ್ಲೆಯ ಫಲಿತಾಂಶ ಹೆಚ್ಚಿಸಿರುವುದು ನಮ್ಮ ಮುಂದೆ ಉದಾಹರಣೆ ಇದ್ದು, ಜಿಲ್ಲೆಯಲ್ಲಿಯೂ ಕೂಡ ಶೇ 100 ರಷ್ಟು ಫಲಿತಾಂಶ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕ ಎಂ.ಎ ಗುಳೇದಗುಡ್ಡ ಪ್ರಾಸ್ತವಿಕವಾಗಿ ಮಾತನಾಡಿ, ಜಿಲ್ಲೆಯ ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ವಿಶ್ಲೇಷಿಸಿ ಈ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು ಎಂದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕರ ಕಾರ್ಯಾಲಯದ ಸಹಯೋಗದೊಂದಿಗೆ 100 ದಿನಗಳ ಪಠ್ಯಕ್ರಮ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಎಂದರು.

ತಾಲ್ಲೂಕಿಗೆ ಒಂದೊಂದು ವಿಷಯವನ್ನು ಹಂಚಿಕೆ ಮಾಡಿ ಸಂಪನ್ಮೂಲ ಶಿಕ್ಷಕರ ಸಹಾಯದೊಂದಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಫೆ.1 ರಿಂದ ಮೇ 15ರೊಳಗೆ ಎಲ್ಲ ವಿಷಯಗಳ ಪಠ್ಯಕ್ರಮ ಬೋಧನೆಯನ್ನು ಪೂರ್ಣಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಹಾಗೂ ಸರ್ಕಾರ ನಿಗದಿಪಡಿಸಿದ ಮೌಲ್ಯಮಾಪನ ಪರೀಕ್ಷೆಗಳನ್ನು ಜಿಲ್ಲಾ ಹಂತದಲ್ಲಿ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ವಿ.ಹೊಸೂರು,  ಶಿಕ್ಷಣಾಧಿಕಾರಿ ಎಸ್.ಎ ಮುಜಾವರ್, ಆರ್.ಎಲ್. ಯಲ್ಲಡಗಿ, ಪ್ರಾಂಶುಪಾಲರು ಆರ್.ವೈ ಕೊಣ್ಣೂರ, ಜಿಲ್ಲಾ ಹಂತದ ಎಲ್ಲಾ ಶಿಕ್ಷಣ ಅಧಿಕಾರಿಗಳು ಹಾಗೂ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯಾಧಿಕಾರಿಗಳು, ಶಿಕ್ಷಣ ಸಂಯೋಜಕರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು