ಶುಕ್ರವಾರ, ಅಕ್ಟೋಬರ್ 7, 2022
23 °C
ಸನ್ಮಾನ ಸಮಾರಂಭದಲ್ಲಿ ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ಹೇಳಿಕೆ

ಜವಳಿ ಪಾರ್ಕ್‌ ಸ್ಥಾಪಿಸಲು ರಾಯಚೂರು ಸೂಕ್ತ: ಎ.ಪಾಪಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಏಷ್ಯಾದಲ್ಲೇ ಎರಡನೇ ಅತಿಹೆಚ್ಚು ಹತ್ತಿ ವಹಿವಾಟು ನಡೆಯುವ ರಾಯಚೂರು ಜಿಲ್ಲೆಯಲ್ಲಿ ಜವಳಿ ಪಾರ್ಕ್‌ ಸ್ಥಾಪಿಸುವುದು ಸೂಕ್ತ. ಸರ್ಕಾರವು ಜವಳಿ ಪಾರ್ಕ್‌ ಸ್ಥಾಪಿಸಬೇಕು ಎಂದು ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ಹೇಳಿದರು.

ನಗರದ ಗಂಜ್‌ ಕಲ್ಯಾಣಮಂಟಪದಲ್ಲಿ ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಒಕ್ಕೂಟದ ಪದಾಧಿಕಾರಿಗಳಿಂದ ಬೇಡಿಕೆ ಪತ್ರ ಪಡೆದು ಮಾತನಾಡಿದರು.

ಜವಳಿ ಪಾರ್ಕ್‌ ಮಂಜೂರಿಗಾಗಿ ಸಾಕಷ್ಟು ಮನವಿ ಸಲ್ಲಿಸುತ್ತಾ ಬರಲಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಸ್ಪಂದಿಸಿ ಕ್ರಮ ಕೈಗೊಳ್ಳಬೇಕು. ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿನಲ್ಲಿ 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲು ಈ ಉದ್ಯಮದಿಂದ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪಕ್ಕದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ರೈತರು ಹತ್ತಿ ಮಾರಾಟ ಮಾಡುವುದಕ್ಕೆ ರಾಯಚೂರು ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ. ಹತ್ತಿ ಬೆಳೆಗಾರರಿಗೆ ಅನುಕೂಲ ಹಾಗೂ ಹತ್ತಿ ಮೌಲ್ಯವರ್ಧನೆಯನ್ನು ಇದೇ ಜಿಲ್ಲೆಯಲ್ಲಿ ಮಾಡುವುದರಿಂದ ವ್ಯಾಪಕವಾಗಿ ಜನರು ಇದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜವಳಿ ಪಾರ್ಕ್‌ ಸೇರಿದಂತೆ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಬೇಕಾಗುವ ಭೂಮಿ, ನೀರು ಮತ್ತು ವಿದ್ಯುತ್‌ ಅನುಕೂಲಗಳು ರಾಯಚೂರು ಜಿಲ್ಲೆಯಲ್ಲಿವೆ. ಈ ಬಗ್ಗೆ ಸರ್ಕಾರವು ಅಂಕಿಅಂಶಗಳನ್ನು ಸಂಗ್ರಹಿಸಿಕೊಂಡು ಈ ಭಾಗದ ರೈತರು, ಹತ್ತಿ ಕಾರ್ಖಾನೆಗಳ ಮಾಲೀಕರು, ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದಿಂದ ಸಲ್ಲಿಸುವ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪದಾಧಿಕಾರಿಗಳಿಗೆ ಯಾರೂ ಸಹಕಾರ ನೀಡದಿರುವುದು ಸರಿಯಲ್ಲ ಎಂದರು.

ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀರೆಡ್ಡಿ ಮಾತನಾಡಿ, ಇತ್ತೀಚೆಗೆ ರಾಯಚೂರಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಿನಿ ಜವಳಿ ಪಾರ್ಕ್‌ವೊಂದನ್ನು ರಾಯಚೂರಿನಲ್ಲಿ ಸ್ಥಾಪಿಸುವುದಾಗಿ ಹೇಳಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.

ರಾಯಚೂರು ಹತ್ತಿ ಕಾರ್ಖಾನೆಗಳ ಮಾಲೀಕರ ಒಕ್ಕೂಟದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಪತ್ರವನ್ನು ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ಅವರಿಗೆ ಸಲ್ಲಿಸಿದರು.

ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಮಾತನಾಡಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಡಗೋಲ, ಉಪಾಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಉಪಾಧ್ಯಕ್ಷ ಶ್ರೀನಿಕ್‌ರಾಜ್‌ ಮೋಥಾ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು