ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಹಿಂದೂ ಯುವತಿಯಿಂದ ರಂಜಾನ್‌ ರೋಜಾ

ಸೌಹಾರ್ದ ಸಾರುತ್ತಿರುವ ಶಾಸಕ ಶಿವಾನಂದ ಪಾಟೀಲರ ಪುತ್ರಿ ಸಂಯುಕ್ತಾ ಪಾಟೀಲ
Last Updated 23 ಮೇ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಹಿಂದುವಾಗಿದ್ದರೂ ರಂಜಾನ್‌ ರೋಜಾ ಆಚರಿಸುವ ಮೂಲಕ ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರ ಪುತ್ರಿ ಸಂಯುಕ್ತಾ ಪಾಟೀಲ ಧಾರ್ಮಿಕ ಸೌಹಾರ್ದ ಸಾರುತ್ತಿದ್ದಾರೆ.

ರಂಜಾನ್‌ ರೋಜಾ ಆಚರಿಸುತ್ತಿರುವುದರ ಹಿಂದಿನ ಉದ್ದೇಶ ಕುರಿತು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ‘ರೋಜಾ ಮಾಡುತ್ತಿರುವುದು ನಾನು ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ ಅಥವಾ ಯಾರನ್ನೋ ಮೆಚ್ಚಿಸುವುದಕ್ಕಾಗಿ, ತೋರಿಕೆಗಾಗಿಯೂ ಅಲ್ಲ. ಉಪವಾಸ ಇರುವುದರಿಂದ ಏನೆಲ್ಲ ಪ್ರಯೋಜನವಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಅರಿತು ಮನಸ್ಸಿನ ನೆಮ್ಮದಿ, ಶಾಂತಿಗಾಗಿ ಆಚರಿಸುತ್ತಿದ್ದೇನೆ’ ಎಂದರು.

‘ಎಂಟು ವರ್ಷಗಳಿಂದ ರೋಜಾ ಆಚರಿಸಿಕೊಂಡು ಬರುತ್ತಿದ್ದೇನೆ. ಆರಂಭದ ವರ್ಷಗಳಲ್ಲಿ ಮೂರು ದಿನ, ಐದು ದಿನಗಳಿಗೆ ಸೀಮಿತವಾಗಿ ಉಪವಾಸ (ರೋಜಾ) ಇರುತ್ತಿದ್ದೆ. ಈ ವರ್ಷ 16 ದಿನ ಉಪವಾಸ ಇದ್ದೇನೆ’ ಎಂದು ತಿಳಿಸಿದರು.

‘ಮುಂಜಾನೆ ಸಹರಿಯಿಂದ ಸಂಜೆ ಇಫ್ತಾರ್‌ ವರೆಗೂನಿಯಮಾನುಸಾರವಾಗಿಯೇ ರೋಜಾ ಆಚರಿಸುತ್ತೇನೆ. ಪ್ರಾರ್ಥನೆ ಮಾಡಲು ಬರುವುದಿಲ್ಲ. ಆದರೆ, ಅದರ ಅರ್ಥವನ್ನು ಸ್ನೇಹಿತರಿಂದ ತಿಳಿದುಕೊಂಡಿದ್ದೇನೆ. ರೋಜಾ ಆರಂಭ ಮತ್ತು ಅಂತ್ಯದ ಸಂದರ್ಭದಲ್ಲಿ ನಾಲ್ಕೈದು ನಿಮಿಷ ಮನಸ್ಸಿನಲ್ಲೇ ಪಠಿಸುತ್ತೇನೆ’ ಎಂದರು.

‘ರೋಜಾ ಮುಗಿಸಿದ ಬಳಿಕ ಹಣ್ಣಿನ ಜ್ಯೂಸ್‌ ಕುಡಿಯುತ್ತೇನೆ. ಬಳಿಕ ಮನೆಯಲ್ಲಿ ಅಮ್ಮ ಮಾಡಿರುವ ಅಡುಗೆಯನ್ನೇ ಸೇವಿಸುತ್ತೇನೆ’ ಎಂದು ಹೇಳಿದರು.

‘ಈ ಬಾರಿ ರೋಜಾ ಆಚರಣೆ ಸಂದರ್ಭದಲ್ಲಿ ನಾನು ಮನೆಯಲ್ಲಿ ಸುಮ್ಮನೇ ಕೂತಿಲ್ಲ. ಬಸವನ ಬಾಗೇವಾಡಿಯ ವಿವಿಧ ಹಳ್ಳಿಗಳಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಬಡವರಿಗೆ, ವಲಸೆ ಕಾರ್ಮಿಕರಿಗೆ ಆಹಾರ್‌ ಕಿಟ್‌ ಒದಗಿಸುವ ಶಾಸಕರ ಕಾರ್ಯದಲ್ಲಿ ಪಾಲ್ಗೊಂಡಿದ್ದೆ’ ಎಂದರು.

‘ರೋಜಾ ಇರುವುದರಿಂದ ಹಸಿವು, ನೀರಾಡಿಕೆ, ಆಹಾರದ ಮಹತ್ವ ಅರಿವಿಗೆ ಬರುತ್ತದೆ. ಅಲ್ಲದೇ, ಬಡವರ ಸಂಕಷ್ಟಗಳು ಅರಿವಾಗುತ್ತವೆ’ ಇದೆ ಎಂದು ಹೇಳಿದರು.

‘ನನ್ನ ದೊಡ್ಡಪ್ಪ ಶಿವಶರಣ ಪಾಟೀಲ 20 ವರ್ಷಗಳಿಂದ ರೋಜಾ ಆಚರಿಸಿಕೊಂಡು ಬರುತ್ತಿದ್ದಾರೆ. ಅವರು ತಿಂಗಳು ಪೂರ್ತಿ ಉಪವಾಸ ಇರುತ್ತಾರೆ. ಈಗ ವಯಸ್ಸಾಗಿರುವುದರಿಂದ ಮೂರ್ನಾಲ್ಕು ದಿನ ಮಾತ್ರ ರೋಜಾ ಇರುತ್ತಾರೆ. ಈ ಹಿನ್ನೆಲೆಯಲ್ಲಿ ನಾನು ಆಚರಿಸುವುದನ್ನು ರೂಢಿಸಿಕೊಂಡಿದ್ದೇನೆ’ ಎಂದು ಹೇಳಿದರು.

‘ರಂಜಾನ್‌ ಈದ್‌ ಉಲ್‌ ಫಿತರ್‌ ಹಬ್ಬವನ್ನು ಮನೆಯಲ್ಲಿ ಆಚರಿಸುವುದಿಲ್ಲ. ಅನೇಕ ಜನ ಸ್ನೇಹಿತೆಯರಿದ್ದಾರೆ. ಮನೆಗೆ ಕರೆಯುತ್ತಾರೆ. ಸುರಕುರಮವನ್ನು ಮನೆಗೆ ಕಳುಹಿಸಿಕೊಡುತ್ತಾರೆ’ ಎಂದರು.

‘ದಯವೇ ಧರ್ಮದ ಮೂಲವಯ್ಯ, ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’ ಎಂಬ ಬಸವಣ್ಣನ ತತ್ವದಲ್ಲಿ ನಂಬಿಕೆ ಇರುವವಳು ನಾನು. ಹೀಗಾಗಿ ಒಳ್ಳೆಯ ವಿಚಾರಗಳು ಯಾವುದೇ ಧರ್ಮದಿದ್ದರೂ ಪಾಲಿಸುವುದರಿಂದ ತೊಂದರೆಯಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸ್ತ್ರೀ ಸಬಲೀಕರಣಕ್ಕೆ ಆದ್ಯತೆ
ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಲಾದಿಂದ ಎಲ್‌ಎಲ್‌ಬಿ ಪದವಿ ಪಡೆದುಕೊಂಡಿರುವ ಸಂಯುಕ್ತಾ ಪಾಟೀಲ ‘ಸ್ಪರ್ಶ’ ಫೌಂಡೇಷನ್‌ನ ಅಧ್ಯಕ್ಷೆ ಕೂಡ. ಈ ಫೌಂಡೇಷನ್‌ ಮೂಲಕ ಜಿಲ್ಲೆಯ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಭಾಗದ 1.5 ಲಕ್ಷ ಮಹಿಳೆಯರು ಈ ಸಂಘಟನೆಯ ಸದಸ್ಯರಾಗಿದ್ದಾರೆ. ಶೂನ್ಯ ಬಡ್ಡಿ ದರದಲ್ಲಿ 1.16 ಲಕ್ಷ ಮಹಿಳೆಯರಿಗೆ ಸಾಲ ಒದಗಿಸುವ ಮೂಲಕ ಮತ್ತು ಕೌಶಲ ತರಬೇತಿ ನೀಡುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಅಲ್ಲದೇ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕಿಯಾಗಿಯೂ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT