ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕೂಲಿ ಕಾರ್ಮಿಕರ ಪಗಾರ ಕಡಿತ..!

ಮಳೆ ಕೊರತೆ ನಡುವೆಯೂ ತೊಗರಿ ಕೃಷಿಯಲ್ಲಿ ಕಸ ಆಯುವಿಕೆ
Last Updated 30 ಜುಲೈ 2018, 16:30 IST
ಅಕ್ಷರ ಗಾತ್ರ

ವಿಜಯಪುರ:ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ. ಹದ ಮಳೆ ಸುರಿದು ಹದಿನೈದು ದಿನ ಕಳೆದಿದೆ. ನಿತ್ಯವೂ ಬಾನಂಗಳದಲ್ಲಿ ಕಾರ್ಮೋಡ ಕವಿದಿದ್ದರೂ; ಮೇಘರಾಜನ ಕೃಪೆಯಾಗದಿರುವುದು ರೈತ ಸಮೂಹವನ್ನು ಕಂಗಾಲಾಗಿಸಿದೆ.

ಮಳೆಯಾಶ್ರಿತ ಹೊಲಗಳಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸಿದೆ. ಬೆಳೆಗಳು ಬೆಳವಣಿಗೆಯ ಹಂತದಲ್ಲಿದ್ದು, ಎರಡ್ಮೂರು ದಿನಗಳಲ್ಲಿ ವರುಣ ದೇವನ ಕೃಪೆಯಾಗದಿದ್ದರೇ ಬಾಡಲಾರಂಭಿಸಲಿವೆ.

ಕೊಳವೆಬಾವಿ, ತೆರೆದ ಬಾವಿ, ಕಾಲುವೆ ಆಶ್ರಿತ ನೀರಾವರಿ ಹೊಂದಿರುವ ರೈತರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದಾರೆ. ಕೃಷಿ ಕೆಲಸ ಇದ್ದಕ್ಕಿದ್ದಂತೆ ಕ್ಷೀಣಿಸಿದ್ದರಿಂದ ಕೃಷಿ ಕೂಲಿ ಕಾರ್ಮಿಕರ ಪಗಾರವೂ ಕಡಿಮೆಯಾಗಿದೆ.

ಮಳೆಯಾದ್ರೇ ಮಾತ್ರ ದುಡಿಮೆ..!

‘ಬರೋಬ್ಬರಿ ಯಾಡ್‌ ತಿಂಗಳಾಗ್ತ ಬಂತು. ಮಳೆ ಹನಿದಿಲ್ಲ. ಇದರಿಂದ ಕೂಲಿ ಕೆಲಸವೂ ಸಿಗ್ತಿಲ್ಲ. ಮಳೆ ಸುರಿದರೇ ದಿನದ ಪಗಾರ ₹ 200 ಸಿಗುತ್ತೆ. ಇದೀಗ ಕೆಲಸಕ್ಕೆ ಕರೆಯೋರೇ ಇಲ್ಲ. ನೀರಾವರಿ ಹೊಂದಿದವರು ಆಗಾಗ್ಗೆ ಕಸ ತೆಗೆಯಲು ಕರೆಯುತ್ತಾರೆ. ₹ 50 ಕಡಿಮೆ ಕೊಡ್ತಾರೆ. ನಮ್ಗೂ ವಿಧಿಯಿಲ್ಲದೇ ₹ 150ಕ್ಕೆ ಕೆಲಸಕ್ಕೆ ಬರ್ತೀವಿ’ ಎಂದು ಇಂಡಿ ತಾಲ್ಲೂಕು ಹಳಗುಣಕಿ ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಕಸ ತೆಗೆಯುತ್ತಿದ್ದ ಶಶಿಕಲಾ ಹೆಗಡಿಹಾಳ ತಿಳಿಸಿದರು.

‘ಮುಂಜಾನೆ ಒಂಭತ್ತಕ್ಕೆ ಹೊಲಕ್ಕೆ ಬರ್ತೀವಿ. ಮುಸ್ಸಂಜೆಯವರೆಗೂ ಮೈಮುರಿದು ದುಡಿತೀವಿ. ಆದರೆ ಈಚೆಗೆ ಮಳೆಯಿಲ್ಲ. ಬೇರೆ ಕೆಲಸವೂ ಸಿಕ್ತಿಲ್ಲ. ದ್ರಾಕ್ಷಿ ಪಡದ ಕೆಲಸ ಆರಂಭಗೊಂಡರೇ ನಮಗೆ ಡಿಮ್ಯಾಂಡ್‌. ಇಲ್ಲದಿದ್ದರೇ ಮಳೆಯಾಗಬೇಕು. ಇದೀಗ ಎರಡೂ ಇಲ್ಲದಿದ್ದರಿಂದ ಕೆಲಸಕ್ಕೆ ನಿತ್ಯವೂ ಕಾದು ಕೂರುತ್ತೇವೆ’ ಎಂದು ದಾನಮ್ಮ ಮಾದರ ಹೇಳಿದರು.

ಮಳೆಯ ನಿರೀಕ್ಷೆಯಲ್ಲಿ..!

‘ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಯಾಡ್‌ ಎಕ್ರೇ ಹೊಲದಲ್ಲಿ ₹ 20000 ಖರ್ಚ್‌ ಮಾಡಿ ತೊಗರಿ ಬಿತ್ತಿದ್ದೆವು. ಆರಂಭದಿಂದ ಮಳೆ ಸುರಿಯಲಿಲ್ಲ. ಜೂನ್‌ ಸಾಥ್‌ ಆರಂಭವಾಗಿ ಯಾಡ್‌ ತಿಂಗಳು ಸಮೀಪಿಸಿದರೂ ನಮ್ಮ ಭಾಗಕ್ಕೆ ಮಳೆ ಸುರಿದಿಲ್ಲ.

ವಿಧಿಯಿಲ್ಲದೆ ಬಾವಿ ನೀರ್‌ ಬಿಟ್‌್ ಬೆಳೆ ಬೆಳಿತಿದ್ದೀವಿ. ಮಳೆಯಾಗದಿದ್ರೇ ಬಾವಿ ನೀರು ಸಿಗಲ್ಲ. ಈಗ ನೀರ್ ಬಿಟ್ಟಿದ್ದಕ್ಕೆ ಸಿಕ್ಕಾಪಟ್ಟೆ ಕಸ ಬಂದೈತಿ. ಎತ್ತುಗಳಿಂದ ಹರಗಿಸಿದರೂ ಪ್ರಯೋಜನವಾಗಿಲ್ಲ. ಹೆಣ್ಮಕ್ಕಳನ್ನು ಕೂಲಿ ಕರ್ಕೊಂಡ್‌ ಕಳೆ ತೆಗಿಸ್ತೀವಿ. ಒಮ್ಮೆ ಕಸ ಸ್ವಚ್ಛಗೊಳಿಸಲು ಕನಿಷ್ಠ ₹ 6000 ಬೇಕಾಗುತ್ತೆ’ ಎಂದು ಹೊಲದ ಒಡತಿ ಹಳಗುಣಕಿಯ ಗೌರಾಬಾಯಿ ಬಸಪ್ಪ ಹೆಗಡಿಹಾಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ತೊಗರಿ ಗಿಡ ಮೂರ್ ಅಡಿ ಎತ್ತ್ರ ಆಗೋ ತನ್ಕ ಕಸ ಸ್ವಚ್ಛಗೊಳಿಸಬೇಕು. ಇನ್ನೂ ಒಂದಪಾ ಕಸ ತೆಗಿಸಬೇಕು. ಹೋದ ವರ್ಸ ಸಹ ತೊಗರಿ ಹಾಕಿ ಕೈಸುಟ್ಟುಕೊಂಡಿದ್ದೆವು. ಈ ಬಾರಿಯಾದ್ರೂ ಕೈ ಹಿಡಿಯಲಿದೆ ಎಂಬ ಆಶಾಭಾವ ನಮ್ಮದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT