ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಪಂಪ್‌ಸೆಟ್‌ಗೆ ವಿದ್ಯುಚ್ಛಕ್ತಿ ಸಹಾಯಧನ ಕಡಿತ: ಎಂ.ಬಿ.ಪಾಟೀಲ ಆರೋಪ

ರೈತರಿಗೆ ಅನ್ಯಾಯ ಖಂಡಿಸಿ ಕಾಂಗ್ರೆಸ್‌ನಿಂದ ಹೋರಾಟ ಎಚ್ಚರಿಕೆ
Last Updated 25 ಆಗಸ್ಟ್ 2022, 13:33 IST
ಅಕ್ಷರ ಗಾತ್ರ

ವಿಜಯಪುರ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ₹16 ಸಾವಿರ ಕೋಟಿ ವಿದ್ಯುಚ್ಛಕ್ತಿ ಸಹಾಯಧನ ನೀಡಬೇಕಾದ ರಾಜ್ಯ ಸರ್ಕಾರ ಕೇವಲ ₹12 ಸಾವಿರ ಕೋಟಿ ಮಾತ್ರ ನೀಡಿದೆ. ₹ 4 ಸಾವಿರ ಕೋಟಿ ಸಹಾಯಧನ ಕಡಿತ ಮಾಡಿದ್ದು, ಇದರಿಂದ ರೈತ ಸಮುದಾಯ ವಿದ್ಯುತ್‌ ಸಹಾಯಧನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದುಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರೋಪಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರದಿಂದ ಬರುವ ಸಹಾಯಧನವನ್ನು ಪರಿಗಣಿಸಿ ಫೀಡರ್‌ವಾರು ವಿದ್ಯುಚ್ಛಕ್ತಿ ಹಂಚಿಕೆ ಮಾಡಲಾಗಿದೆ. ಹಂಚಿಕೆ ಪ್ರಮಾಣ ಮೀರದಂತೆ ಕಟ್ಟುನಿಟ್ಟಾಗಿ ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಹಂಚಿಕೆಗಿಂತ ಹೆಚ್ಚುವರಿಯಾದ ಬಳಕೆಯ ಪ್ರಮಾಣ ಸರಿದೂಗಿಸಲು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆಯ ಅವಧಿ ಹಾಗೂ ಪ್ರಮಾಣವನ್ನು ಕಡಿತಗೊಳಿಸಲಾಗುತ್ತಿದ್ದು, ರೈತರು ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ತ್ರಿಫೇಸ್‌ ವಿದ್ಯುತ್‌ ಪೂರೈಕೆಯನ್ನು ಕೂಡ 7 ತಾಸುಗಳ ಬದಲಾಗಿ ಕಡಿಮೆ ಅವಧಿಗೆ ಪೂರೈಸುವ ಸಾಧ್ಯತೆ ಇದ್ದು, ರೈತಾಪಿ ವರ್ಗ ಇನ್ನಷ್ಟು ಸಂಕಷ್ಟಕ್ಕೀಡಾಗಲಿದೆ. ಸಾಲ ಮಾಡಿ ಬೆಳೆದ ಬೆಳೆಗೆ ನೀರು ಪೂರೈಸುವ ಅವಶ್ಯಕತೆ ಇರುವ ಸಂದರ್ಭದಲ್ಲಿ ವಿದ್ಯುತ್‌ ಪೂರೈಕೆಯಾಗದೇ ಹೋದರೆ ಸಂಪೂರ್ಣ ಬೆಳೆ ನಾಶವಾಗುವ ಸಾಧ್ಯತೆ ಇದೆ ಎಂದರು.

ರಾಜ್ಯ ಸರ್ಕಾರ ತಕ್ಷಣ ಇತ್ತ ಗಮನ ಹರಿಸಿ, ಅವಶ್ಯವಿರುವ ಪೂರ್ಣ ಪ್ರಮಾಣದ ಸಹಾಯಧನವನ್ನು ನೀಡುವ ಮೂಲಕ ಕೃಷಿ ಪ‍ಂಪ್‌ಸೆಟ್‌ಗಳಗೆ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.

ಕೃಷಿ ಪಂಪ್‌ಸೆಟ್‌ ಸಹಾಯಧನ ಕಡಿತ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದ್ದು, ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಗಮನಕ್ಕೆ ತಂದು, ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT