ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ರಸ್ತೆ ತಡೆ, ಪ್ರತಿಭಟನೆ

ರೈತ ವಿರೋಧಿ ಕಾಯ್ದೆ ರದ್ದುಗೊಳಿಸಲು ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಗ್ರಹ
Last Updated 5 ನವೆಂಬರ್ 2020, 10:45 IST
ಅಕ್ಷರ ಗಾತ್ರ

ವಿಜಯಪುರ: ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಯನ್ನು ಹಾಗೂ ಇತರೇ ರೈತ ವಿರೋಧಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಗುರುವಾರ ನಗರದ ಅಂಬೇಡ್ಕರ್‌ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.

ರಸ್ತೆ ತಡೆಗೆ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ಕೊರೊನಾ ಲಾಕ್‍ಡೌನ್‌ನಿಂದ ಕೃಷಿ ರಂಗದ ಸಂಕಷ್ಟಗಳು ಉಲ್ಬಣಗೊಂಡಿವೆ. ಹಸಿವು, ನಿರುದ್ಯೋಗ, ಆರ್ಥಿಕ ದಿವಾಳಿ ತಾಂಡವಾಡುತ್ತಿದೆ. ಇಂತಹ ಸನ್ನಿವೇಶದ ದುರ್ಲಾಭವನ್ನು ಪಡೆದು ಕೇಂದ್ರ ಮತ್ತು ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ ಎಂದು ಆರೋಪಿಸಿದರು.

ಆರ್‌ಕೆಎಸ್ ರಾಜ್ಯ ಉಪಾಧ್ಯಕ್ಷ ಬಿ. ಭಗವಾನರೆಡ್ಡಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್‌ ನಿಯಂತ್ರಿಸಲು ಸಂಪೂರ್ಣವಾಗಿ ವಿಫಲವಾಗಿವೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು, ಕೃಷಿ ಉತ್ಪಾದನೆ ಮತ್ತು ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸಲು ಮುಂದಾಗಿದೆ ಎಂದು ದೂರಿದರು.

ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿರುವ ಸರ್ಕಾರಗಳು ದೇಶದ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರನ್ನು ಈ ಶಕ್ತಿಗಳಿಗೆ ಗುಲಾಮರನ್ನಾಗಿ ಮಾಡಲು ಇಂತಹ ಕಾಯ್ದೆತಿದ್ದುಪಡ್ಡಿಯನ್ನು ಮಾಡುತ್ತಿವೆ ಎಂದರು.

ಯಾವುದೇ ನಿಯಂತ್ರಣವಿಲ್ಲದೆ ಕಾರ್ಪೊರೇಟ್ ಕಂಪನಿಗಳು ಇನ್ನು ಮುಂದೆ ಎಲ್ಲಿ ಬೇಕಾದರೂ, ಎಷ್ಟು ಬೇಕಾದರೂ, ಯಾವ ದರಕ್ಕೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲು ಸಜ್ಜಾಗಿವೆ ಎಂದು ಹೇಳಿದರು.

ಬಂಡವಾಳಗಾರರು ಸುಲಭವಾಗಿ ಕೃಷಿ ಭೂಮಿಯನ್ನು ಪಡೆಯಲು ಅನುಕೂಲವಾಗುವಂತೆ ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ತಂದಿದೆ. ಇದರಿಂದ ಕಾಸಿರುವವನೇ ಹೊಲದೊಡೆಯ ಎನ್ನುವಂತಾಗಿದೆ ಎಂದು ಆರೋಪಿಸಿದರು.

ಅಣ್ಣಾರಾಯ ಈಳಗೆರಿ ಮಾತನಾಡಿ, ಬೀಜೋದ್ದಿಮೆಯನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಉದ್ದೇಶದಿಂದ ಬೀಜ ಕಾಯ್ದೆ-2019 ಜಾರಿಗೆ ತಂದಿದೆ ಎಂದು ಆರೋಪಿಸಿದರು.

ರೈತ ಮುಖಂಡರಾದ ಪ್ರಕಾಶ ಹಿಟ್ನಳ್ಳಿ, ಬಾಳೂ ಜೇವೂರ, ಸುರೇಖಾ ರಜಪೂತ, ತಿಪ್ಪರಾಯ ಹತ್ತರಕಿ, ಪ್ರಕಾಶ ಕಿಲಾರೆ, ವಿಶ್ವನಾಥ ನರಳೆ, ಆಕಾಶ ರಾಮತೀರ್ಥ, ಸಿದ್ರಾಮ ಬಂಗಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT