ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ರೌಡಿಶೀಟರ್‌ಗಳ ಚಳಿ ಬಿಡಿಸಿದ ಐಜಿಪಿ..!

ಗಣೇಶ ಚೌತಿ, ಮೊಹರಂ ನಿಮಿತ್ತ ವಿಜಯಪುರದಲ್ಲಿ ರೌಡಿಶೀಟರ್ ಪರೇಡ್‌
Last Updated 29 ಆಗಸ್ಟ್ 2018, 13:50 IST
ಅಕ್ಷರ ಗಾತ್ರ

ವಿಜಯಪುರ:‘ರೊಕ್ಕ ಐತಿ ಅಂಥ ಸೊಕ್ಕ ಬಂದೈತಿ. ನಿಮ್ಮ ಆಟ ಹಿಂಗೆ ಮುಂದ್‌ವರಿಸಿದ್ರ ಸುಮ್ನೆ ಬಿಡಲ್ಲ. ಹಬ್ಬದ ವೇಳೆ ಗಲಾಟೆ ಮಾಡಿದ್ರೆ ಹುಷಾರ್. ಜಿಲ್ಲೆಯಿಂದಲೇ ಹೊರಗಾಕ್ತೀನಿ, ಕುದ್ಲಾ ಕಟ್‌ ಮಾಡ್ಕೋ... ಇಲ್ಲಿಗೆ ಡ್ಯಾನ್ಸ್‌ ಮಾಡಕ್‌ ಬಂದಿರಾ..!’

ನಗರದ ಚಿಂತನ ಹಾಲ್‌ನ ಆವರಣದಲ್ಲಿ ಬುಧವಾರ ಗಣೇಶ ಹಬ್ಬ ಹಾಗೂ ಮೊಹರಂ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿಗಳ ಪರೇಡ್‌ ನಡೆಸಿದ ಐಜಿಪಿ ಅಲೋಕ್‌ಕುಮಾರ್‌, ಅಪರಾಧಿಗಳ ಹಿನ್ನೆಲೆ, ಪ್ರಸ್ತುತ ಅವರ ಚಲನ-ವಲನ ಕುರಿತು ಚರ್ಚಿಸುವ ವೇಳೆ, ಇಂದಿಗೂ ಸಕ್ರಿಯವಾಗಿರುವ ರೌಡಿಶೀಟರ್‌ಗಳಿಗೆ ತರಾಟೆ ತೆಗೆದುಕೊಂಡ ಪರಿಯಿದು.

ನಗರದ ಹರಿಣಶಿಕಾರಿ ಗಲ್ಲಿಯಲ್ಲಿ ಪಟಾಕಿ ಬಾಂಬ್ ತಯಾರಿಕೆ ಮಾಡುತ್ತಿರುವ ಬಗ್ಗೆ ಪರೇಡ್ ವೇಳೆ ಮಾಹಿತಿ ಪಡೆದ ಐಜಿಪಿ, ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಗರಂ ಆದರು. ‘ನಿಮಗೆ ಸೊಕ್ಕು ಬಂದಿದೆ, ಹಣ ಐತಿ ಅಂತ್‌ ಧಿಮಾಕು ನಿಮ್ಗೆ. ನಿಮ್ಮ ಜನ್ಮ ಜಾಲಾಡಿಸುತ್ತೇನೆ’ ಎಂದು ಖಡಕ್‌ ಎಚ್ಚರಿಕೆ ನೀಡಿದ ಅವರು, ‘ಕಚ್ಚಾ ಬಾಂಬ್ ತಯಾರಿಸಿದವರ ಮನೆ ಹಾಗೂ ಅಂಗಡಿಗಳ ಮೇಲೆ ಕೂಡಲೇ ರೈಡ್ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಡೋಣಿ ಗ್ರಾಮದಲ್ಲಿ ಎಪಿಎಂಸಿ ಚುನಾವಣೆ ಸಂದರ್ಭ ಬಸವೇಶ್ವರ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಆರೋಪಿಗಳನ್ನು ವಿಚಾರಣೆ ನಡೆಸಿದ ಐಜಿಪಿ, ‘ಅದೇ ಸಮಾಜದವರಾಗಿ ಬಸವೇಶ್ವರರ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದು ಸರಿಯಾ ?’ ಎಂದು ಪ್ರಶ್ನಿಸಿದರು. ಇದಕ್ಕೆ ಆರೋಪಿಗಳು ಎಂಪಿಎಂಸಿ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಆರೋಪ ಬರಲಿ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಹೇಳಿದರು. ಇದಕ್ಕೆ ಗರಂ ಆದ ಅಲೋಕ್‌ಕುಮಾರ್, ‘ನಿಮ್ಮ ರಾಜಕೀಯಕ್ಕಾಗಿ ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತೀರಾ’ ಎಂದು ಗದರಿದರು.

ರೌಡಿಶೀಟರ್‌ನೊಬ್ಬನನ್ನು ಏನಪ್ಪ ನಿನ್ನ ಕತೆ ಎಂದಾಗ, ‘ಸರ್ ನಾನು ಎಲ್ಲಾ ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದ. ಇದಕ್ಕೆ ಐಜಿಪಿ ಸರಿ ನಿನ್ನ ಕೈ ತೋರಿಸು, ನೀನು ಸುಳ್ಳು ಹೇಳುತ್ತಿದ್ದೀಯಾ ? ಬರಿ ಷಟಲ್ ರಾಕೆಟ್ ಹಿಡಿದು ಆಟವಾಡಿದರೆ ಸಾಕು ಕೈಗೆ ಗುಳ್ಳೆಯಾಗುತ್ತವೆ. ನೀನು ಹೊಲದಲ್ಲಿ ಕೆಲಸ ಮಾಡುವುದಾಗಿ ಸುಳ್ಳು ಹೇಳುತ್ತಿಯಾ ?’ ಎಂದು ಗದರಿಸಿದರು.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರ ಚಳಿ ಬಿಡಿಸಿದ ಐಜಿಪಿ ಈಗಲಾದರೂ ಸುಧಾರಣೆಯಾಗಿದ್ದೀಯಾ, ಮದುವೆಯಾಗಿದ್ದೀಯಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆತ ನಾಲ್ಕು ಮದುವೆಯಾಗಿದ್ದೇನೆ ಎಂದು ಹೇಳಿದ. ಈಗಲಾದರೂ ನಿನ್ನ ವರ್ತನೆ ಬದಲಿಸಿಕೊ ಎಂದು ತಿಳಿ ಹೇಳಿದರು.

ಬಿಎಲ್‌ಡಿಈ ವಿದ್ಯಾರ್ಥಿಗಳು ಗಾಂಜಾ ಬಳಸುತ್ತಿಲ್ವಾ ಎಂದು ಐಜಿಪಿ ಕೇಳಿದ ಪ್ರಶ್ನೆಗೆ, ಇವಾಗ ಇಲ್ಲ ಸರ್‌ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಉತ್ತರಿಸಿದರು. ಅದಕ್ಕೆ ಸುಮ್ಮನಾಗದ ಅಲೋಕ್‌ಕುಮಾರ ಶಾಲಾ–ಕಾಲೇಜುಗಳಲ್ಲಿ ವಿಶೇಷವಾಗಿ ಮೆಡಿಕಲ್‌ ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸಿ, ಗಾಂಜಾ ಆರೋಗ್ಯಕ್ಕೆ ಮಾರಕ ಎಂಬ ಸಂದೇಶ ತಿಳಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT