ವಿಜಯಪುರ: ಹಿರಿಯ ರೈತ ಮುಖಂಡ, ಸಿಪಿಎಂ ಮುಖಂಡ, ‘ಬರಿಗಾಲ ಗಾಂಧಿ’ ಎಂದೇ ಪ್ರಸಿದ್ಧವಾಗಿದ್ದ ಭೀಮಶಿ ಕಲಾದಗಿ(86) ಸೋಮವಾರ ರಾತ್ರಿ ನಿಧನರಾದರು.
ವಿಜಯಪುರ ನಗರದ ಹಿರಿಯ ಪತ್ರಿಕಾ ಏಜೆಂಟರಾದ ಸುರೇಶ ಕಲಾದಗಿ ಮತ್ತು ಮಾಳಪ್ಪ ಕಲಾದಗಿ ಸೇರಿದಂತೆ ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಪತ್ನಿ ಇದ್ದಾರೆ.
ಮಂಗಳವಾರ(ಆಗಸ್ಟ್ 6) ಮಧ್ಯಾಹ್ನ 2ಕ್ಕೆ ವಿಜಯಪುರದ ಕಾಳಿಕಾ ನಗರದಲ್ಲಿರುವ ಅವರ ಮನೆಯಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು, ಬಳಿಕ ಇಂಡಿ ತಾಲ್ಲೂಕಿನ ನಿಂಬಾಳದ ಅವರ ತೋಟದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಪ್ರಗತಿಪರ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಸಿಪಿಎಂ ಜಿಲ್ಲಾ ಮುಖಂಡರಾಗಿದ್ದ ಅವರು ಜಿಲ್ಲೆಯಲ್ಲಿ ರೈತಪರ, ಕಾರ್ಮಿಕ ಪರ, ಮಹಿಳಾಪರ, ನೀರಾವರಿ ಯೋಜನೆಗಳ ಅನುಷ್ಠಾನ ಸಂಬಂಧಿ ಹೋರಾಟ ಸೇರಿದಂತೆ ಜನಪರವಾದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು.
ಭೀಮಶಿ ಕಲಾದಗಿ ಅವರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗೌರವ ನೀಡಿ, ತಕ್ಷಣ ಸ್ಪಂದಿಸುತ್ತಿದ್ದರು.
ಕಳೆದ ಒಂದು ವರ್ಷದಿಂದ ಹೋರಾಟದಿಂದ ದೂರವಾಗಿದ್ದ ಅವರು, ಎರಡು ತಿಂಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲಿದ್ದರು.