ನಾಲತವಾಡ: ಪಟ್ಟಣದ ಸಂತೆ ಮಾರುಕಟ್ಟೆ, ಬಜಾರ, ಕಿರಾಣಿ ಅಂಗಡಿ, ಬಸ್ ಟಿಕೆಟ್ ಪಡೆಯುವ ವೇಳೆ ಚಿಲ್ಲರೆ ನಾಣ್ಯಗಳ ಸಮಸ್ಯೆ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ₹10ರ ಮುಖ ಬೆಲೆಯ ನೋಟುಗಳ ಸಮಸ್ಯೆ ತೀವ್ರವಾಗಿದೆ.
ಬೆಂಗಳೂರು ಸೇರಿದಂತೆ ಬಹುತೇಕ ನಗರ, ಪಟ್ಟಣಗಳಲ್ಲಿ₹10 ರ ನಾಣ್ಯಗಳು ಚಲಾವಣೆಯಲ್ಲಿ ಇವೆ. ಆದರೆ, ನಾಲತವಾಡ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ₹10ರ ನಾಣ್ಯಗಳ ಚಲಾವಣೆ ಅಷ್ಟಾಗಿಲ್ಲ. ಬ್ಯಾಂಕುಗಳಲ್ಲಿ, ರೈಲು ನಿಲ್ದಾಣ,ಅಂಚೆ ಕಚೇರಿಯಲ್ಲಿ ಮಾತ್ರ ಸ್ವೀಕಾರವಾಗುವ ನಾಣ್ಯಗಳನ್ನು ಗ್ರಾಹಕರು ಪಡೆಯುತ್ತಿಲ್ಲ. ಇದರಿಂದ ವ್ಯಾಪಾರ, ವಹಿವಾಟಿನಲ್ಲಿ ಚಿಲ್ಲದರೆ ಸಮಸ್ಯೆ ತಲೆದೋರಿದೆ.
₹ 10 ನೋಟು ಅಲ್ಲೋ, ಇಲ್ಲೋ ಸಿಗುತ್ತಿವೆ. ಸಿಕ್ಕ ನೋಟುಗಳು ತೀರಾ ಹರಿದು, ಮಾಸಿ ಹೋಗಿದ್ದು, ಚಲಾವಣೆಗೆ ಯೋಗ್ಯವಿಲ್ಲದಂತಾಗಿವೆ. ಹಾಗಾಗಿ ಈ ಹರಕು, ಹಾಳಾದ, ಮಾಸಿದ ನೋಟುಗಳನ್ನು ಬಜಾರದಲ್ಲಿ, ಸಂತೆಯಲ್ಲಿ ಸ್ವೀಕರಿಸುತ್ತಿಲ್ಲ. ಹಾಗಾಗಿ ಎಲ್ಲೆಡೆ ಈ ₹10ರ ನೋಟಿನ ಅಭಾವ ತಲೆ ದೋರಿದ್ದು, ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ ಚಿಲ್ಲರೆ ಮಾರಾಟಗಾರರು ಪರದಾಡುವಂತಾಗಿದೆ.
ಈ ಸಂಬಂಧ ಗ್ರಾಹಕರು ಮತ್ತು ಅಂಗಡಿಗಳವರ ಮಧ್ಯೆ, ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಮಾತಿನ ಚಕಮಕಿಗಳು ನಡೆಯುತ್ತಿವೆ.
₹10ರ ನೋಟು ಇಲ್ಲ ಎಂಬ ಕಾರಣಕ್ಕೆ ಅಂಗಡಿಯವರು ನೋಟಿನ ಬದಲಾಗಿ ಕೊಡುವ ಕೋಪನ್‌ಗಳು, ಪೇಪರ್ ಮೆಂಟ್, ಬಿಸ್ಕತ್, ಚಾಕೋಲೆಟ್, ಸುಪಾರಿ, ಗುಟ್ಕಾ ಇತ್ಯಾದಿ ವಸ್ತುಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳುವ ಕರ್ಮ ಗ್ರಾಹಕರದ್ದಾಗಿದೆ.
ಯಾವುದೇ ಹಿಂಜರಿಕೆ ಇಲ್ಲದೇ ₹10ರ ನಾಣ್ಯಗಳನ್ನು ಎಂದಿನಂತೆಯೇ ಶಾಸನಬದ್ದ ಚಲಾವಣೆಯಾಗಿ ಸ್ವೀಕರಿಸುವುದನ್ನು ಮುಂದುವರೆಸುವಂತೆ ಈಗಾಗಲೇ ರಿಸರ್ವ್ ಬ್ಯಾಂಕ್ ಕೂಡಾ ಸೂಚನೆ ನೀಡಿದೆ. ₹ 10ರ ನಾಣ್ಯಗಳನ್ನು ಚಲಾವಣೆಯಿಂದ ವಾಪಾಸ್ಸು ಪಡೆದಿರುವುದಿಲ್ಲ ಎಂದು ಹಲವಾರು ಬಾರಿ ರಿಜರ್ವ್ ಬ್ಯಾಂಕ್ ತಿಳಿಸಿದೆ. ಅಲ್ಲದೇ, ಬ್ಯಾಂಕುಗಳು ಈ ನಾಣ್ಯಗಳನ್ನು ತಿರಸ್ಕರಿಸುವಂತಿಲ್ಲ ಎಂಬ ಸೂಚನೆ ನೀಡಿದೆ. ಆದರೂ ನಾಣ್ಯಗಳು ಚಲಾವಣೆ ಆಗುತ್ತಿಲ್ಲ.
ಸಾರ್ವಜನಿಕರು ತಮ್ಮ ಬಳಿ ಇದ್ದ ₹10ರ ನಾಣ್ಯಗಳನ್ನು ಈಗಾಗಲೇ ಬ್ಯಾಂಕುಗಳಿಗೆ ಜಮಾ ಮಾಡಿ ಬಿಟ್ಟಿದ್ದಾರೆ. ಬ್ಯಾಂಕುಗಳಿಗೆ ₹ 10ರ ನಾಣ್ಯಗಳ ಒಳ ಹರಿವಿದೆ. ಆದರೆ, ಅದನ್ನು ಹೊರ ಹರಿವು ಮಾಡಿ ಚಲಾವಣೆಗೆ ಮುಂದಾದರೆ, ಈಗಿರುವ ₹10ರ ನೋಟಿನ ಸಮಸ್ಯೆ ಬಗೆ ಹರಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.v 'ಚಿಲ್ಲರೆಗಾಗಿ
₹ 10ಕ್ಕೆ ಕೊಳ್ಳಬಹುದಾದ ವಸ್ತುಗಳನ್ನು ₹10ರ ನೋಟುಗಳ ಸಮಸ್ಯೆಯಿಂದ ₹20 ಕೊಟ್ಟು ದುಪ್ಪಟ್ಟು ವಸ್ತುಗಳನ್ನು ಕೊಳ್ಳಬೇಕಿದೆ.ಮಹಾಂತೇಶ ಹಿರೇಮಠ, ನಾಲತವಾಡ
ಪೋನ್ ಪೇ ಗೂಗಲ್ ಪೇ ಸೌಲಭ್ಯವಿರುವವರು ಹಣ ವರ್ಗಾವಣೆ ಮಾಡುವುದರಿಂದಾಗಿ ಚಿಲ್ಲರೆ ಸಮಸ್ಯೆ ತುಸು ಕಡಿಮೆ ಎನಿಸಿದರೂ ಸಂಪೂರ್ಣ ಸಮಸ್ಯೆ ನೀಗಿಸಲು ಸಾಧ್ಯವಿಲ್ಲ. ₹10ರ ನಾಣ್ಯಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು.ಬಸವರಾಜ ಹೂಗಾರ, ನಾಲತವಾಡ
ನಮ್ಮ ಬಸ್‌ಗಳ ನಿರ್ವಾಹಕರು ನಿತ್ಯ ₹10 ನೋಟಿನ ಕೊರತೆಯಿಂದ ಪ್ರಯಾಣಿಕರ ಜೊತೆಗೆ ಮಾತಿನ ಚಕಮಕಿ ನಡೆಯುತ್ತಿದೆ.ಆದಪ್ಪ ಗಂಗನಗೌಡರ, ನಿಯಂತ್ರಕ ನಾಲತವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.