ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಬ್ಯಾಂಕ್‌: ಬಾಗಲಕೋಟೆ, ಬೆಳಗಾವಿಗೆ ವಿಸ್ತರಣೆ

ಬ್ಯಾಂಕಿನ ನೂತನ ಅಧ್ಯಕ್ಷ ಪ್ರಕಾಶ ಬಗಲಿ ಘೋಷಣೆ
Last Updated 21 ನವೆಂಬರ್ 2020, 12:00 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಜಿಲ್ಲೆಗೆ ಸೀಮಿತವಾಗಿರುವ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿನ ಶಾಖೆಗಳನ್ನು ನೆರೆಯ ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಆರಂಭಿಸುವ ಉದ್ದೇಶವಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಪ್ರಕಾಶ ಬಗಲಿ ಘೋಷಿಸಿದರು.

ವಿಜಯಪುರ ನಗರದಲ್ಲಿ 10 ಮತ್ತು ಇಂಡಿಯಲ್ಲಿ ಒಂದು ಸೇರಿದಂತೆ ಸದ್ಯ ಒಟ್ಟು 11 ಶಾಖೆಗಳು ಇದ್ದು, ಇವುಗಳನ್ನು ನೆರೆಯ ಜಿಲ್ಲೆಗಳಿಗೂ ವಿಸ್ತರಿಸಿ, ಆ ಜಿಲ್ಲೆಯ ಗ್ರಾಹಕರಿಗೂ ಗುಣಮಟ್ಟದ ಆರ್ಥಿಕ ಸೇವೆಯನ್ನು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶ್ರೀಸಿದ್ಧೇಶ್ವರ ಸಹಕಾರ ಬ್ಯಾಂಕ್ ಅನ್ನು‌ ಮಲ್ಟಿಸ್ಟೇಟ್‌ ಶೆಡ್ಯುಲ್‌ ಬ್ಯಾಂಕ್‌ ಆಗಿ ರೂಪಿಸುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಿನಲ್ಲಿ ನಿಲ್ಲಿಸಬೇಕು ಎಂಬ ಮಹತ್ತರ ಗುರಿಇದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಬ್ಯಾಂಕಿನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡುವ ಯೋಜನೆಯನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.

‘ವಚನ ಪಿತಾಮಹ’ ಫ.ಗು.ಹಳಕಟ್ಟಿ ಅವರಿಂದ ಆರಂಭವಾದ ಸಿದ್ಧೇಶ್ವರ ಸಹಕಾರ ಬ್ಯಾಂಕಿಗೆಶತಮಾನದ ಇತಿಹಾಸ ಮತ್ತು ಹೆಸರು ಇದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಹಾಗೂ ಆಧುನಿಕ ತಂತ್ರಜ್ಞಾನವನ್ನು ಇನ್ನಷ್ಟು ಅಳವಡಿಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದರು.

ಶ್ರೀ ಸಿದ್ಧೇಶ್ವರ ಬ್ಯಾಂಕ್‌ ಜಿಲ್ಲೆಯ ಜನರ ಜೀವನಾಡಿಯಾಗಿ, ವ್ಯಾಪಾರಸ್ಥರು ಮತ್ತು ರೈತರ ಬಾಳಿಗೆ ಬೆಳಕಾಗಿ, ಖಾತೆದಾರರ ಕುಂದು ಕೊರತೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಬ್ಯಾಂಕಿನ ಸಿಬ್ಬಂದಿ ಕಾರ್ಯವೈಕರಿ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಬ್ಯಾಂಕಿನ ಮುಂದಿನ ಕಾರ್ಯ ಯೋಜನೆಗಳೆಲ್ಲಾ ಕ್ರಿಯಾತ್ಮಕ ಮತ್ತು ಜನೋಪಕಾರಿಯಾಗಿ ಹೊರಹೊಮ್ಮಿ ಸರ್ವರಿಗೂ ಅನುಕೂಲವಾಗಲಿದೆ. ಇತರರ ಏಳಿಗೆಯಲ್ಲಿ ಬ್ಯಾಂಕಿನ ಏಳಿಗೆ ಇದೆ ಎಂಬ ಭಾವನೆ ಮತ್ತು ಧ್ಯೇಯದೊಂದಿಗೆ ಸಿದ್ಧೇಶ್ವರ ಬ್ಯಾಂಕ್‌ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಬ್ಯಾಂಕಿನ 19 ನಿರ್ದೇಶಕ ಸ್ಥಾನಗಳಿಗೆ ನ.8ರಂದು ನಡೆದ ಚುನಾವಣೆಯಲ್ಲಿ ಹಳೇ ಪೆನಾಲ್‌ನ 18 ಜನ ಪುನರಾಯ್ಕೆಯಾಗಿದ್ದಾರೆ. ಬಳಿಕ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪ್ರಕಾಶ ಬಗಲಿ ಅಧ್ಯಕ್ಷರಾಗಿ ಹಾಗೂ ಬ್ಯಾಂಕಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು(ಬೋರಮ್ಮ ಗೊಬ್ಬೂರ) ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಲ್ಕನೇ ಬಾರಿಗೆ ನಿರ್ದೇಶಕ

ವಿಜಯಪುರ: ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಪ್ರಕಾಶ ಬಗಲಿ ಅವರು ಸತತ ನಾಲ್ಕನೇ ಬಾರಿಗೆ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿರುವುದು ವಿಶೇಷ.

ಈ ಮೊದಲು ಸಿದ್ಧೇಶ್ವರ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುವ ಬಗಲಿ ಅವರು ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಬಿಜೆಪಿಯ ಹಿರಿಯ ಮುಖಂಡರಾಗಿರುವಪ್ರಕಾಶ ಬಗಲಿ ಅವರುವಿಜಯಪುರ ನಗರಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವ ಅನುಭವವಿದೆ. ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷರಾಗಿಯೂ ಪಕ್ಷ ಸಂಘಟನೆ ಮಾಡಿದ್ದಾರೆ.

****

ಬ್ಯಾಂಕಿನ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲ ನಿರ್ದೇಶಕರಿಗೆ ಹಾಗೂ ಬ್ಯಾಂಕಿನ ಸದಸ್ಯರಿಗೆ, ಗ್ರಾಹಕರಿಗೆ ಧನ್ಯವಾದ ಸಲ್ಲಿಸುತ್ತೇನೆ
–ಪ್ರಕಾಶ ಬಗಲಿ, ಅಧ್ಯಕ್ಷ, ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT