ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಸಾಮಾಜಿಕ ಕಳಕಳಿ ಮುಖ್ಯ: ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಅಭಿಮತ

Last Updated 29 ಜುಲೈ 2021, 13:01 IST
ಅಕ್ಷರ ಗಾತ್ರ

ವಿಜಯಪುರ:ಪತ್ರಕರ್ತರು ಸಾಮಾಜಿಕ ಕಳಕಳಿಯೊಂದಿಗೆ ವಸ್ತುನಿಷ್ಠ ಹಾಗೂ ಸಮಾಜಕ್ಕೆ ಉಪಯುಕ್ತವಾಗುವಂತಹ ವರದಿಗಳನ್ನು ಮಾಡಬೇಕು. ಇದರಿಂದ ಪತ್ರಕರ್ತರ ಹಾಗೂ ಪತ್ರಿಕೆಗಳ ಘನತೆ ಹೆಚ್ಚುತ್ತದೆ ಎಂದುಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೊರೊನಾ ವಾರಿಯರ್‌ಗಳಾಗಿ ಸಲ್ಲಿಸಿದ ಸೇವೆ ಸರಣೀಯ ಎಂದರು.

ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಕಾರ್ಡ್‌ ವಿತರಿಸಿ ಮಾತನಾಡಿದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ್ ನದಾಫ್, ಪ್ರತಿನಿತ್ಯ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುವ ಕುಂದುಕೊರತೆಗಳ ಕುರಿತುವಾರ್ತಾ ಇಲಾಖೆಯು ಜಿಲ್ಲಾಧಿಕಾರಿಗಳ ಮೂಲಕ ಸಂಬಂಧಿಸಿದ ಇಲಾಖೆಯ ಗಮನ ಸೆಳೆಯಲಾಗುತ್ತಿದೆ. ಇದಕ್ಕೆ ಆಯಾ ಇಲಾಖೆಯವರು ಕೂಡ ಸ್ಪಂದಿಸಿ ಕುಂದುಕೊರತೆ ಪರಿಹರಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು ಎಂದರು.

ಪತ್ರಕರ್ತ ಈರಣ್ಣ ಗೌಡರ ಮಾತನಾಡಿ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚು ಹರಿದಾಡುತ್ತಿದೆ. ಸುಳ್ಳು ಸುದ್ದಿಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಜೊತೆಗೆ ಜನರಲ್ಲಿ ಭಯವೂ ಹುಟ್ಟುತ್ತಿದೆ.ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ ಎಂದರು.

ಪತ್ರಕರ್ತರು ನೈಜತೆಗೆ ಮಹತ್ವ ನೀಡಬೇಕು. ಸ್ವಯಂ ನೀತಿಸಂಹಿತೆಗೊಳಪಟ್ಟು ಕಾರ್ಯನಿರ್ವಹಿಸಬೇಕು. ಓದಿಸಿಕೊಂಡು ಹೋಗುವಂಥ ಉತ್ತಮ ವರದಿಗಳನ್ನು ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಹೇಳುವ ಪತ್ರಿಕಾರಂಗಕ್ಕೆ ಯಾವುದೇ ರೀತಿಯ ಪ್ರಾಧಾನ್ಯತೆ ಇಲ್ಲ. ಹೀಗಾಗಿ ಇಂದು ಪತ್ರಕರ್ತರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಪತ್ರಕರ್ತರ ಸ್ಥಿತಿ ಇಂದು ತುಂಬಾ ಶೋಚನೀಯವಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದರು.

ಹಿರಿಯ ಪತ್ರಕರ್ತ ರಫೀ ಭಂಡಾರಿ ಮಾತನಾಡಿ, ಪತ್ರಕರ್ತರು ಪ್ರತಿನಿತ್ಯ ಸಮಾಜದ ಒಳಿತಿಗಾಗಿ ಯೋಚಿಸುತ್ತಾರೆ. ಆದರೆ, ಪತ್ರಕರ್ತರ ಒಳಿತಿಗಾಗಿ ಸರ್ಕಾರ, ಸಮಾಜದ ಯಾರೊಬ್ಬರೂ ವಿಚಾರ ಮಾಡದಿರುವುದು ಒಂದು ದುರಂತ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದೇವೇಂದ್ರ ಹೆಳವರ ಮಾತನಾಡಿ, ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟ 40ಕ್ಕೂ ಹೆಚ್ಚು ಪತ್ರಕರ್ತರ ಕುಟುಂಬಗಳಿಗೆ ಸರ್ಕಾರದಿಂದ ತಲಾ ₹ 5 ಲಕ್ಷ ಪರಿಹಾರ ಮಂಜೂರಾಗಿದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿಯೂ ನಾಲ್ವರು ಪತ್ರಕರ್ತರು ಕೋವಿಡ್‌ನಿಂದ ಮೃತಪಟ್ಟಿದ್ದು, ಜಿಲ್ಲಾ ಕಾನಿಪ ಘಟಕವು ಸರ್ಕಾರದಿಂದ ಪರಿಹಾರ ಮಂಜೂರು ಮಾಡಿಸಲು ರಾಜ್ಯ ಸಂಘಕ್ಕೆ ಮನವಿ ಸಲ್ಲಿಸಿದೆ. ಇದರಲ್ಲಿ ಈಗಾಗಲೇ ಇಬ್ಬರು ಪತ್ರಕರ್ತರ ಕುಟುಂಬದವರಿಗೆ ತಲಾ ₹5 ಲಕ್ಷ ಪರಿಹಾರ ಮಂಜೂರಾಗಿದೆ. ಇನ್ನಿಬ್ಬರು ಪತ್ರಕರ್ತರ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಚೇಂದ್ರ ಲಂಬು,ಪತ್ರಕರ್ತರಾದ ಬಾಬುರಾವ್ ಕುಲಕರ್ಣಿ, ಸಂಗಮೇಶ ಚೂರಿ, ರಾಜು ಕೊಂಡಗೂಳಿ, ಫಿರೋಜ್ ರೋಜಿನದಾರ, ಇಂದುಶೇಖರ ಮಣೂರ, ವಿನಾಯಕ ಸೊಂಡೂರ ಇದ್ದರು.

****

ಬಡವರು, ದೀನದಲಿತರು, ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುವ ಮೂಲಕಲಅವರಿಗೆ ನ್ಯಾಯ ಒದಗಿಸಲು ಆದ್ಯತೆ ನೀಡಬೇಕು

ವೆಂಕಣ್ಣ ಬಿ.ಹೊಸಮನಿ

ಹಿರಿಯ ಸಿವಿಲ್ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT