ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಿದ್ಯಾರ್ಥಿಗಳ ಹುಮ್ಮಸ್ಸು; ಮೊದಲ ದಿನ ಯಶಸ್ಸು

ಎಸ್‌ಎಸ್‌ಎಲ್‌ಸಿ ಪರೀಕ್ಷೆ; 320 ಪರೀಕ್ಷಾರ್ಥಿಗಳು ಗೈರು
Last Updated 19 ಜುಲೈ 2021, 13:39 IST
ಅಕ್ಷರ ಗಾತ್ರ

ವಿಜಯಪುರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜಿಲ್ಲೆಯ ವಿದ್ಯಾರ್ಥಿಗಳು ಸೋಮವಾರ ಅತ್ಯುತ್ಸಾಹದಿಂದ ಬರೆದರು.

ಜಿಲ್ಲೆಯ 188 ಕೇಂದ್ರಗಳಲ್ಲಿಯಾವುದೇ ಗೊಂದಲ, ಗದ್ದಲಗಳಿಗೆ ಅವಕಾಶವಿಲ್ಲದೇ, ಕೋವಿಡ್‌ ಆತಂಕವಿಲ್ಲದೇ ಯಶಸ್ವಿಯಾಗಿ ಪರೀಕ್ಷೆ ಜರುಗಿತು.

ನಗರ, ಪಟ್ಟಣ ಪ್ರದೇಶದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 9 ರಿಂದಲೇ ವಾಹನದಲ್ಲಿ ಕರೆದುಕೊಂಡು ಬಿಟ್ಟು ಹೋದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳ ಮೂಲಕ ಕೇಂದ್ರಕ್ಕೆ ತೆರಳಿಪರೀಕ್ಷೆ ಬರೆದರು.

320 ವಿದ್ಯಾರ್ಥಿಗಳು ಗೈರು:21,806 ಬಾಲಕರು, 16,205 ಬಾಲಕಿಯರು ಸೇರಿದಂತೆ ಒಟ್ಟು 38,101 ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 21,607 ಬಾಲಕರು, 16,187 ಬಾಲಕಿಯರು ಸೇರಿದಂತೆ 37,781 ಅಂದರೆ, ಶೇ 99.20ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 199 ಬಾಲಕರು, 108 ಬಾಲಕಿಯರು ಸೇರಿದಂತೆ ಒಟ್ಟು 320 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಗೈರಾಗಿದ್ದರು.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮ:ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಹ್ಯಾಂಡ್‌ ಸ್ಯಾನಿಟೈಜ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ ಹಾಗೂ ಅಗತ್ಯವಿರುವವರಿಗೆ ಮಾಸ್ಕ್‌ ನೀಡಿ ಪರೀಕ್ಷಾ ಕೊಠಡಿಯೊಳಗೆ ಕಳುಹಿಸಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ತಾಲ್ಲೂಕಿನಲ್ಲಿ ಹೋಬಳಿಗೆ ಒಂದರಂತೆ ಕೋವಿಡ್‌ ಆರೈಕೆ ಕೇಂದ್ರ ಹಾಗೂ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಎರಡು ಪ್ರತ್ಯೇಕ ಕೊಠಡಿಗಳ್ನು ಕೋವಿಡ್‌ ಲಕ್ಷಣ ಇರುವ ವಿದ್ಯಾರ್ಥಿಗಳಿಗಾಗಿ ಕಾಯ್ದಿರಿಸಲಾಗಿತ್ತು. ಆದರೆ, ಯಾವೊಬ್ಬ ವಿದ್ಯಾರ್ಥಿಗಳಿಗೂ ಕೋವಿಡ್‌ ಸಂಬಂಧಿ ಲಕ್ಷಣ ಕಂಡು ಬರದ ಕಾರಣ ಬಳಕೆಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದಶಕ ಎನ್‌.ಬಿ. ಹೊಸೂರ ತಿಳಿಸಿದ್ದಾರೆ.

ಒಂದು ಕೊಠಡಿಯೊಳಗೆ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.ಬಹಳಷ್ಟು ವಿದ್ಯಾರ್ಥಿಗಳು ತಮ್ಮೊಂದಿಗೆ ತಂದಿದ್ದ ಮೊಬೈಲ್‌ಗಳನ್ನು ಪರೀಕ್ಷಾ ಸಿಬ್ಬಂದಿ ವಶಕ್ಕೆ ಪಡೆದು, ಪರೀಕ್ಷೆ ಮುಗಿದ ಬಳಿಕ ಮರಳಿಸಿದರು. ನಕಲು ನಡೆಯದಂತೆ ತಡೆಯಲು ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

ಉಚಿತ ಪಯಣ:ವಿದ್ಯಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಸುಸೂತ್ರವಾಗಿ ಹೋಗಿ ಬರಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಉಚಿತ ಪಯಣಕ್ಕೆ ಅವಕಾಶಕಲ್ಪಿಸಲಾಗಿತ್ತು.

ಅಲ್ಲದೇ, ಜಿಲ್ಲೆಯ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸಹ ತಮ್ಮ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ 165 ಬಸ್‌ಗಳನ್ನು ವಿಶೇಷವಾಗಿ ವ್ಯವಸ್ಥೆ ಮಾಡಲಾಗಿತ್ತು ಎಂದು ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದರು.

ವಿದ್ಯಾರ್ಥಿಗಳ ಸಂತಸ:ಪರೀಕ್ಷಾ ಕೇಂದ್ರದಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ನಿರಾತಂಕವಾಗಿ ಪರೀಕ್ಷೆ ಬರೆದಿದ್ದೇವೆ. ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರ ಬರೆಯುವುದು ಬಹಳ ಸುಲಭ ಎನಿಸಿತು. ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅನುಭವವಾಯಿತು. ಯಾವುದೇ ಗೊಂದಲವಾಗಿಲ್ಲ. ಈ ಮಾದರಿಯಲ್ಲೇ ಪ್ರತಿ ವರ್ಷ ಪರೀಕ್ಷೆ ನಡೆಸುವುದು ಉತ್ತಮ ಎಂದು ವಿಜಯಪುರ ನಗರದ ಪಿಡಿಜೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಮೃದ್ಧಿ ಆಲಮೇಲಕರ, ಲೋಹಿತ್‌ ಮಹೇಂದ್ರಕರ, ಮಹಮ್ಮದ್‌ ತನ್ವೀರ್ ಶೇಖ್‌, ಸುನೀಲ್‌ ಚವ್ಹಾಣ, ವಿಜಯಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಕಾಜಲ್‌ ರಾಠೋಡ, ಅಕ್ಷತಾ ರಾಠೋಡ, ದಾನೇಶ್ವರಿ ಕಬಾಡೆ, ಅರ್ಚನಾ ಜುಮನಾಳ ಅವರು ‘ಪ್ರಜಾವಾಣಿ’ಜೊತೆ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT