ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ವಂದೇ ಭಾರತ ರೈಲು ಪ್ರಾರಂಭಿಸಿ; ಸಂಸದರಿಗೆ ಪತ್ರ

Published 22 ಜೂನ್ 2024, 15:48 IST
Last Updated 22 ಜೂನ್ 2024, 15:48 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಮತ್ತು ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ.  

ಸತತ 7ನೇ ಬಾರಿಗೆ ಸಂಸದರಾಗಿರುವ ರಮೇಶ ಜಿಗಜಿಣಗಿ ಅವರಿಗೆ 2023 ನವೆಂಬರ್‌ 24ರಂದು ಪತ್ರ ಬರೆದು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಆದರೂ, ಜಿಲ್ಲೆಯ ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದ್ದಾರೆ. ತಮ್ಮ ಪರ ಮತ ಹಾಕಿರುವ ಮತದಾರರ ಋಣ ತೀರಿಸುವ ಸಲುವಾಗಿಯಾದರೂ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸಬೇಕು ಎಂದು ತಿಳಿಸಿದ್ದಾರೆ. 

ನೆರೆಯ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಈ ರೈಲು ಸೇವೆ ಲಭ್ಯವಿದೆ. ಆದರೆ, ಅಖಂಡ ವಿಜಯಪುರ ಜಿಲ್ಲೆಯಿಂದ ಇನ್ನೂ ವಂದೇ ಭಾರತ ರೈಲು ಪ್ರಾರಂಭವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉಭಯ ಜಿಲ್ಲೆಗಳ ಜನರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದರೂ ನೀವು ಕಣ್ಮುಚ್ಚಿ ಕುಳಿತಿರುವಂತಿದೆ. ಸಂಸತ್ತಿನಲ್ಲಿ ಒಂದೂ ಪ್ರಶ್ನೆಯನ್ನು ಕೇಳದ ತಾವುಗಳು ಈ ರೈಲು ಸೇವೆ ಪ್ರಾರಂಭಿಸಲು ಕ್ರಮ ಕೈಗೊಂಡರೆ ಉಭಯ ಜಿಲ್ಲೆಗಳಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಈ ರೈಲು ಸೇವೆ ಪ್ರಾರಂಭವಾದ ತಕ್ಷಣ ಸಂಸದರಾದ ರಮೇಶ ಜಿಗಜಿಣಗಿ ಅವರನ್ನು ವಿಜಯಪುರ ಜಿಲ್ಲೆಯ ಜನರ ಪರವಾಗಿ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಧ್ಯ ವಿಜಯಪುರದಿಂದ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪಲಾಗುತ್ತಿಲ್ಲ. ಬೆಂಗಳೂರಿಗೆ ಜಿಲ್ಲೆಯ ಜನರು ದಿನನಿತ್ಯದ ವ್ಯವಹಾರ ಮತ್ತು ಸರ್ಕಾರಿ ಕಚೇರಿ ಕೆಲಸಕ್ಕೆ ಬೆಂಗಳೂರಿಗೆ ಹೋಗಿ ಬರುವ ತೊಂದರೆಯಾಗಿದೆ. ಜೊತೆಗೆ ಸಮಯವೂ ಸಹ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯಿಂದ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ನೆಲಸಿರುವ ಜನರು ಹಬ್ಬಗಳಿಗೆ ಜಿಲ್ಲೆಗೆ ಬರುವಾಗ ಖಾಸಗಿ ಸಾರಿಗೆ ಪ್ರಯಾಣ ದರ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ಮಹಾರಾಷ್ಟ್ರದ ಮುಂಬೈನಿಂದ ಸೋಲಾಪುರ ವರೆಗೆ ಸಂಚರಿಸುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರ ವರೆಗೆ ವಿಸ್ತರಿಸಬೇಕು. ಇದರಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ಸೋಲಾಪುರ, ಪುಣೆ ಮತ್ತು ಮುಂಬೈಗೆ ಸಂಚರಿಸುವ ಜಿಲ್ಲೆಯ ಜನರಿಗೆ ಅನಕೂಲವಾಗಲಿದೆ.

ಈ ರೈಲು ಸೇವೆ ಪ್ರಾರಂಭಕ್ಕೆ ಕ್ರಮ ಕೈಗೊಂಡರೆ, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವ್ಯಾಪಾರ ವಹಿವಾಟಿಗೂ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಅಲ್ಲದೇ, ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಈಗಲಾದರೂ ತಾವು ಎಚ್ಚೆತ್ತುಕೊಂಡು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ, ತಮಗೆ ಮತಹಾಕಿ ಮತ್ತೆ ಅಧಿಕಾರ ನೀಡಿರುವ ಮತದಾರರನ್ನು ಕೇವಲ ಮತಗಳಿಕೆಗಷ್ಟೇ ಸೀಮಿತಗೊಳಿಸಿದಂತಾಗುತ್ತದೆ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT