ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಉನ್ನತಿಯಲ್ಲಿ ಜಗತ್ತಿನ ಹಿತ

Last Updated 9 ಡಿಸೆಂಬರ್ 2022, 6:56 IST
ಅಕ್ಷರ ಗಾತ್ರ

ಯುವಕರು ತಮ್ಮನ್ನು ತಾವು ಪಡೆಯುವುದರ ಜೊತೆಗೆ ಸಮಾಜದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಬೇಕು, ಸಮಾಜದೊಡನೆ ಒಂದು ಅರ್ಥಪೂರ್ಣ ಸಂಬಂಧವನ್ನು ಹೊಂದಿರಬೇಕು. ಇಂತಹ ಸಂಬಂಧ ಸಾಧ್ಯವಾಗುವುದು ಯುವಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂತಾದಾಗ. ಇಲ್ಲದಿದ್ದರೆ ಯುವಕರು ಕೇವಲ ಇಂದ್ರಿಯ ಸುಖಾನ್ವೇಷಣೆಯಲ್ಲಿ ತಮ್ಮನ್ನೂ ತಾವು ಕಳೆದುಕೊಂಡು ಸಮಾಜಕ್ಕೂ ಕಂಟಕರಾಗುತ್ತಾರೆ.

ಈ ದೃಷ್ಟಿಯಿಂದಲೇ ಸ್ವಾಮಿ ವಿವೇಕಾನಂದರು ಸೇವೆಯ ಆದರ್ಶವನ್ನು ಎತ್ತಿ ಹಿಡಿದರು. ಯುವಕರು ಇತರರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ತಮ್ಮ ಜೀವನಕ್ಕೆ ಒಂದು ಅರ್ಥವನ್ನು ಕಾಣುತ್ತಾರೆ. ಈ ಮೂಲಕ ಯುವಕರ ಎಷ್ಟೋ ಸಮಸ್ಯೆಗಳೂ ಪರಿಹಾರವಾಗುತ್ತವೆ.

ಸಮಾಜಸೇವೆ ಎಂದರೆ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ಮುಂತಾದವನ್ನು ಪ್ರಾರಂಭಿಸಿ ನಡೆಸುವುದು ಮಾತ್ರ ಎಂದಲ್ಲ. ಅದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ನಮ್ಮ ಸುತ್ತಮುತ್ತಲ ಸ್ನೇಹಿತರು, ಬಂಧು ಬಾಂಧವರು, ನೆರೆಹೊರೆಯವರು ಮುಂತಾದವರಿಗೆ ಸೇವೆ ಸಲ್ಲಿಸಬಹುದಾದ ಎಷ್ಟೋ ಅವಕಾಶಗಳಿರುತ್ತವೆ.

ಸಾಂತ್ವನದ ನುಡಿಗಳಿಂದ, ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ಪಾಲನೆಯಿಂದ, ಶುದ್ಧ ನೈತಿಕ ಜೀವನ ನಡೆಸುವುದರಿಂದ, ನಿಷ್ಠೆಯಿಂದ ಮಾಡಿದ ಆಧ್ಯಾತ್ಮಿಕ ಸಾಧನೆಯ ಮೂಲಕವೇ ಇತರರಿಗೆ ಮತ್ತು ಸಮಾಜಕ್ಕೆ ನಾವು ಅಪಾರ ಸೇವೆ ಸಲ್ಲಿಸುವುದು ಸಾಧ್ಯವಾಗುತ್ತದೆ.

ಹೀಗೆ ತಮ್ಮನ್ನು ಕಡೆಗಣಿಸದೆ ಸಮಾಜದ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಆದರ್ಶ ಜೀವನವನ್ನು ನಡೆಸಲು ಯುವಕರು ಸ್ವಾಮಿ ವಿವೇಕಾನಂದರಿಂದ ಬಹಳಷ್ಟು ಕಲಿಯುವುದಿದೆ. 'ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ' (ವ್ಯಕ್ತಿಯ ಉನ್ನತಿ ಮತ್ತು ಜಗತ್ತಿನ ಹಿತ) ಎಂಬ ವಿವೇಕ ವಾಣಿ ಆಧುನಿಕ ಮಹಾಮಂತ್ರವೂ, ಯುವಕರಿಗೆ ತಾರಕ ಮಂತ್ರವೂ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT