ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಡಚಣ: ಶಿರಾಡೋಣಕ್ಕಿಲ್ಲ ಮೂಲ ಸೌಕರ್ಯ

ರಾಜ್ಯದ ಕಟ್ಟ ಕಡೆಯ ಹಳ್ಳಿ ಅಭಿವೃದ್ಧಿ ನಿರ್ಲಕ್ಷ್ಯ
Published 11 ಅಕ್ಟೋಬರ್ 2023, 5:15 IST
Last Updated 11 ಅಕ್ಟೋಬರ್ 2023, 5:15 IST
ಅಕ್ಷರ ಗಾತ್ರ

ಚಡಚಣ: ರಾಜ್ಯದ ಕಟ್ಟ ಕಡೆಯ ಹಳ್ಳಿ, ಹಾಲುಮತ ಸಮಾಜದವರ ಕಾಶಿ, ಬೀರಲಿಂಗೇಶ್ವರ ಐಕ್ಯ ಸ್ಥಳವಾದ ಧಾರ್ಮಿಕ ಕ್ಷೇತ್ರ ಶಿರಾಡೋಣ ಗ್ರಾಮ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ.  

ಗ್ರಾಮದಲ್ಲಿ ಉತ್ತಮ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಪೂರೈಕೆ, ಸಮರ್ಪಕ ವಿದ್ಯುತ್‌ ಪೂರೈಕೆ, ಶೌಚಾಲಯಗಳ ನಿರ್ಮಾಣ ಎಂಬುದು ಇಲ್ಲಿ ಮರೀಚಿಕೆಯಾಗಿದೆ.

ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ರಸ್ತೆಯೆ ಮೇಲೆ ಸರಾಗವಾಗಿ ಹರಿದು ದುರ್ವಾಸನೆ ಹರಡುತ್ತಿದೆ. ಮನೆ, ಮನೆಗೆ ಶೌಚಾಲಯ ನಿರ್ಮಾಣ ಸರ್ಕಾರದ ಕನಸು. ಆದರೆ, ಈ ಗ್ರಾಮದಲ್ಲಿ ಬಹುತೇಕ ಜನರು ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ.

ಗ್ರಾಮದಲ್ಲಿ ಜಲ ಜೀವನ ಮಿಷನ್‌ ಅಡಿಯಲ್ಲಿ ಮನೆ ಮೆನೆಗೆ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವುದರಿಂದ ನೀರು ಹರಿದು, ನಲ್ಲಿಗೆ ಬರುವುದು ಕಾಗದಕ್ಕೆ ಸೀಮಿತವಾಗಿದೆ.

ಗ್ರಾಮದಲ್ಲಿ ನಾಲ್ಕಾರು ವರ್ಷಗಳ ಹಿಂದೆ 2 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಆರಂಭಗೊಂಡ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡು ಬೀಗ ಹಾಕಿದ ಸ್ಥಿತಿಯಲ್ಲಿರುವುದು ಅಲ್ಲಿನ ಗ್ರಾಮ ಪಂಚಾಯ್ತಿಯ ಕಾರ್ಯ ವೈಖರಿಗೆ ಹಿಡಿದ ಕೈ ಕನ್ನಡಿಯಾಗಿದೆ.

ರಾಜ್ಯ ಹೆದ್ದಾರಿ 41 ರ ಮೇಲಿರುವ ಈ ಗ್ರಾಮಕ್ಕೆ ಒಂದು ಬಸ್‌ ತಂಗುದಾಣವೂ ಇಲ್ಲ. ಈ ಗ್ರಾಮದ ಮೂಲಕ ನಿತ್ಯ ಸಾವಿರಾರು ವಾಹನಗಳು ಪುಣ್ಯಕ್ಷೇತ್ರ ಪಂಢರಪುರ, ಪುಣೆ, ಮುಂಬೈಗಳಂತಹ ಮಹಾ ನಗರಗಳಿಗೆ ಸಾಗುತ್ತವೆ. ಪ್ರಯಾಣಿಕರು ರಸ್ತೆಯ ಮೇಲೆ ನಿಂತು, ಬಿಸಿಲು, ಮಳೆ ಲೆಕ್ಕಿಸದೇ ವಾಹನಗಳ ಬರುವಿಕೆಗೆ ಕಾಯುವುದು ಸಾಮಾನ್ಯ. 

ರಾಜ್ಯದ ಗಡಿ ಅಂಚಿನಿಂದ ಚಡಚಣದ ವರೆಗಿನ 10 ಕಿ.ಮೀ. ರಸ್ತೆಯನ್ನು ಒಂದು ದಶಕಗಳ ನಂತರ ಡಾಂಬರೀಕರಣ ಮಾಡುತ್ತಿರುವುದೊಂದೆ ಗ್ರಾಮಸ್ಥರಿಗೆ ಸಮಾಧಾನ ಮೂಡಿಸಿದೆ.

ಇನ್ನಾದರೂ ಈ ಗಡಿ ಗ್ರಾಮವನ್ನು ಸ್ಥಳಿಯ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಯ ಅಧಿಕಾರಿಗಳು ಜನಪ್ರತಿನಿಧಿಗಳು ಅಭಿವೃದ್ಧಿ ಪಡಿಸುವರೇ ಎಂಬುದು ಕಾದು ನೋಡಬೇಕಿದೆ.

ಪ್ರಯಾಣಿಕರಿಗೆ ಬಸ್‌ ತಂಗುದಾಣ ಇಲ್ಲದಿರುವುದರಿಂದ ಬಸ್‌ಗಳು ಹೆದ್ದಾರಿಯಲ್ಲಿಯೆ ನಿಂತು ಪ್ರಯಾಣಿಕರಿನ್ನು ಕರೆದೊಯ್ಯತ್ತಿವೆ.
ಪ್ರಯಾಣಿಕರಿಗೆ ಬಸ್‌ ತಂಗುದಾಣ ಇಲ್ಲದಿರುವುದರಿಂದ ಬಸ್‌ಗಳು ಹೆದ್ದಾರಿಯಲ್ಲಿಯೆ ನಿಂತು ಪ್ರಯಾಣಿಕರಿನ್ನು ಕರೆದೊಯ್ಯತ್ತಿವೆ.
ಶಿರಾಡೋಣ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ
ಶಿರಾಡೋಣ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಾಲಯ

ಹಾಲುಮತ ಸಮಾಜದ ಕಾಶಿ ಶಿರಡೋಣದಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಧಾರ್ಮಿಕ ಕ್ಷೇತ್ರವಾದ ಈ ಗ್ರಾಮದಲ್ಲಿನ ಬೀರಲಿಂಗೇಶ್ವರ ದೇವಾಲಯ ಸರ್ಕಾರ ಅಭಿವೃದ್ಧಿ ಪಡಿಸಬೇಕು

-ಶಿವಣ್ಣ ಪಾಂಡ್ರೆ ರಾಜ್ಯ ಉಪಾಧ್ಯಕ್ಷ ಹಾಲುಮತ ಯುವ ವೇದಿಕೆ 

ರಾಜ್ಯದ ಗಡಿ ಅಂಚಿನಲ್ಲಿರುವ ಶಿರಾಡೋಣ ಗ್ರಾಮವನ್ನು ಸರ್ಕಾರ ಕಡೆಗಣಿಸಿದೆ. ಮೂಲ ಸೌಕರ್ಯ ವಂಚಿತ ಗ್ರಾಮದ ಅಭಿವೃದ್ಧಿಗೆ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು

-ಮಹೇಶ ಕುಂಬಾರ ಗ್ರಾಮಸ್ಥ ಶಿರಾಡೋಣ

ಹಾಲುಮತ ಸಮಾಜದ ಕಾಶಿ

ಚಡಚಣ: ಶಿರಾಡೋಣ ಗ್ರಾಮವು ಹಾಲುಮತ ಸಮಾಜದವರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. ಶತಮಾನಗಳ ಇತಿಹಾಸವಿರುವ ಈ ಗ್ರಾಮದಲ್ಲಿ ಹಾಲುಮತ ಸಮಾಜ ಬಾಂಧವರ ಆರಾಧ್ಯ ದೈವ ಬೀರಲಿಂಗೇಶ್ವರ ದೇವಾಲಯವಿದೆ. ಬೀರಲಿಂಗೇಶ್ವರನು ಐಕ್ಯವಾದ ಸ್ಥಳವಾಗಿರುವುದರಿಂದ ಸಹಸ್ರಾರು ಜನರು ಇಲ್ಲಿಗೆ ವರ್ಷವಿಡಿ ಆಗಮಿಸುತ್ತಾರೆ. ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ಸಂದರ್ಭದಲ್ಲಿ ನಡೆಯುವ ಹುಲಜಂತಿ ಮಾಳಿಂಗರಾಯನ ಜಾತ್ರೆಯ ಮುನ್ನಾದಿನ ಮಾಳಿಂಗರಾಯ ದೇವರ ಗುರು ಬೀರಲಿಂಗೇಶ್ವರನ ಜಾತ್ರೆಯೂ ನಡೆಯುತ್ತದೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ವಿವಿಧ ಜಿಲ್ಲೆ ರಾಜ್ಯಗಳಿಂದ ಆಗಮಿಸಿ ದರ್ಶನ ಪಡೆದು ಪಾವನಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT