ಮಂಗಳವಾರ, ಸೆಪ್ಟೆಂಬರ್ 27, 2022
27 °C
ತಾಳಿಕೋಟೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕೆ ಶಾಸಕ ನಡಹಳ್ಳಿ ಸಿದ್ಧತೆ

ಯುವಜನ ಸಂಕಲ್ಪ ನಡಿಗೆ ಸಮಾರೋಪ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಲತವಾಡ: ಆಲಮಟ್ಟಿಯಿಂದ ಆರಂಭವಾಗಿರುವ ‘ಬಲಿಷ್ಠ ಭಾರತಕ್ಕಾಗಿ ಯುವಜನ ಸಂಕಲ್ಪ
ನಡಿಗೆ’ಯು ವಿಜಯನಗರ ಸಾಮ್ರಾಜ್ಯದ ಕೊನೆಯ ಕದನ ನಡೆದಿರುವ ಇತಿಹಾಸ ಪ್ರಸಿದ್ದ
ತಾಳಿಕೋಟೆಯಲ್ಲಿ ಶುಕ್ರವಾರ ಸಮಾರೋಪಗೊಳ್ಳಲಿದೆ.

ಅಡವಿಸೋಮನಾಳದಿಂದ ಮಿಣಜಗಿ ವರೆಗಿನ 16 ಕಿ.ಮೀ. ಅಂತರದ ನಡಿಗೆಗೆ ಗುರುವಾರ ಚಾಲನೆ
ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ,  ತಾಳಿಕೋಟೆಯಲ್ಲಿ ನಡೆಯುವ ಸಮಾರೋಪದಲ್ಲಿ ನನ್ನ ಅಭಿಮಾನಿಗಳು, ದೇಶಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.

ಸ್ವಾತಂತ್ರ್ಯಕ್ಕಾಗಿ ನಡೆದ ಸಂಗ್ರಾಮದ ಜಾಥಾಗಳ ನೆನಪು ತಾಳಿಕೋಟೆ ಕಾರ್ಯಕ್ರಮದಲ್ಲಿ ಮರುಕಳಿಸಲಿದೆ. ದೇಶಭಕ್ತ ಯುವ ಸಮೂಹ ಜಾತ್ಯತೀತವಾಗಿ, ಧರ್ಮಾತೀತವಾಗಿ, ಪಕ್ಷಾತೀತವಾಗಿ ಸಮವಸ್ತ್ರಧಾರಿಗಳಾಗಿ, ತಲೆ ಮೇಲೆ ತಿರಂಗಾ ಪೇಟಾ ಧರಿಸಿ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ನಡೆಯುವುದು ಒಂದು ಅದ್ಭುತ ಅನುಭೂತಿ ನೀಡುವಂತಿರಲಿದೆ. ಇಡೀ ದೇಶವೇ ಸಾಮಾಜಿಕ ಜಾಲತಾಣದ ಮೂಲಕ ತಾಳಿಕೋಟೆಯತ್ತ ತಿರುಗಿ ನೋಡುವಂತಾಗಲಿದೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ತಾಳಿಕೋಟೆಯಲ್ಲಿ ಆಗಸ್ಟ್‌ 12ರಂದು ಸಂಜೆ, ನಾಲತವಾಡ ಪಟ್ಟಣದಲ್ಲಿ ಆಗಸ್ಟ್‌ 13 ರಂದು ಸಂಜೆ, ಮುದ್ದೇಬಿಹಾಳದಲ್ಲಿ ಆಗಸ್ಟ್‌ 14ರಂದು ಸಂಜೆ ಪ್ರಸಿದ್ಧ ಕಲಾತಂಡಗಳಿಂದ ದೇಶಭಕ್ತಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಮತ್ತು ಸ್ವಾತಂತ್ರ ಸಂಗ್ರಾಮಕ್ಕೆ ವಿಜಯಪುರ ಜಿಲ್ಲೆಯ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನಡೆಯಲಿವೆ ಎಂದರು.

70 ಕಿ.ಮೀ ಪೂರೈಸಿದ ನಡಿಗೆ:

ಆಲಮಟ್ಟಿಯಿಂದ ಪ್ರಾರಂಭಗೊಂಡಿದ್ದ ನಡಿಗೆಯು ಗುರುವಾರ 70 ಕಿ.ಮೀ ಪೂರೈಸಿ, ತಾಳಿಕೋಟೆ ತಾಲ್ಲೂಕಿನ ಮಿಣಜಗಿಯಲ್ಲಿ ವಾಸ್ತವ್ಯ ಹೂಡಿದೆ. ಶುಕ್ರವಾರ ಬೆಳಿಗ್ಗೆ ಮಿಣಜಗಿಯಿಂದ 5 ಕಿ.ಮೀ ಅಂತರದಲ್ಲಿರುವ ತಾಳಿಕೋಟೆ ಪಟ್ಟಣ ಪ್ರವೇಶಿಸಲಿದೆ.

ಸ್ವಾತಂತ್ರ ಹೋರಾಟಗಾರರ ಪ್ರತಿಕೃತಿಗಳಿರುವ ಭಾರತಾಂಬೆಯ ಟ್ಯಾಬ್ಲೋ ಜೊತೆಗೆ ಡೊಳ್ಳು ಕುಣಿತ, ಹೆಜ್ಜೆ ಕುಣಿತದ ಜೊತೆಗೆ ದೇಶಭಕ್ತಿಯ ಗೀತೆಗಳಿಗೆ ಹೆಜ್ಜೆ ಹಾಕಿದರು.

ಶಾಲಾ ಮಕ್ಕಳು ದೇಶಭಕ್ತರು, ಮಹಾನ್ ನಾಯಕರು, ಸ್ವಾತಂತ್ರ್ಯ ಸೇನಾನಿಗಳ ವೇಷಭೂಷಣ ಧರಿಸಿ
ನಡಿಗೆಯನ್ನು ಸ್ವಾಗತಿಸಿದರು.

ಶಾಸಕರ ಜೊತೆ ಪುತ್ರರಾದ ಭರತಗೌಡ, ಶರತಗೌಡ ಅವರು ದೇಶಭಕ್ತಿಯ ಗೀತೆಗಳಿಗೆ ಹೆಜ್ಜೆ ಹಾಕಿ ಎಲ್ಲರಲ್ಲೂ ಹುರುಪು ಮೂಡಿಸುತ್ತ ಮುನ್ನಡೆದದ್ದು ವಿಶೇಷವಾಗಿತ್ತು.

ಶಾಸಕರ ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ, ಪುತ್ರಿ ಸುಶ್ಮಿತಾ, ಪ್ರಮುಖರಾದ ನಿಖಿಲ್‌ಗೌಡ,  ಸಂಗಮ್ಮ ದೇವರಳ್ಳಿ,  ನಿಂಗಪ್ಪಗೌಡ ಬಪ್ಪರಗಿ, ಸಹನಾ ಬಡಿಗೇರ, ಸುನೀಲ್ ಹಡಲಗೇರಿ, ಸರಸ್ವತಿ ಪೀರಾಪೂರ, ಬಸಮ್ಮ ಸಿದರಡ್ಡಿ, ಚಿಂದೋಡಿ ಬಂಗಾರೇಶ, ಸೋಮನಗೌಡ ಬಿರಾದಾರ, ಬಸವರಾಜ ಗುಳಬಾಳ, ಲಕ್ಷ್ಮಣ ಬಿಜ್ಜೂರ, ಚವನಭಾವಿ, ಅಡವಿಸೋಮನಾಳ, ಶಿವಪೂರ ಹಾಗೂ ಸುತ್ತಲಿನ ಹಳ್ಳಿಗಳ ಅಭಿಮಾನಿಗಳು ಪಾಲ್ಗೊಂಡಿದ್ದರು.

ರೈತರಿಗೂ ರಾಷ್ಟ್ರಧ್ವಜ: ನಡಿಗೆಯುದ್ದಕ್ಕೂ ರಸ್ತೆಯ ಅಕ್ಕಪಕ್ಕ ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರು ಹಾಗೂ ಕುರಿ ಕಾಯಲು ಹೊರಟ ಕುರಿಗಾಯಿಗಳ ಬಳಿ ತೆರಳಿದ ಶಾಸಕ ನಡಹಳ್ಳಿ ಮತ್ತು ಭರತಗೌಡರು ಅವರ ಕೈಗೆ ರಾಷ್ಟ್ರ ಧ್ವಜ ನೀಡಿ, ಆ.13ರಿಂದ 15ರ ವರೆಗೆ ಸ್ವಾತಂತ್ರ ಅಮೃತ ಮಹೋತ್ಸವ ನಿಮಿತ್ಯ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವಂತೆ ಮನವಿ ಮಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.