ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾ.ಪಂ.ಚುನಾವಣೆ

ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಪ್ರಸ್ತಾವ
Last Updated 28 ನವೆಂಬರ್ 2020, 15:54 IST
ಅಕ್ಷರ ಗಾತ್ರ

ವಿಜಯಪುರ: ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ಕೈಗೊಂಡಿರುವ ಸಿದ್ಧತಾ ಕ್ರಮಗಳ ಕುರಿತು ಅವರು ಮಾಹಿತಿ ನೀಡಿದ್ದಾರೆ.

201 ಗ್ರಾ.ಪಂ.ಗೆ ಚುನಾವಣೆ:ಜಿಲ್ಲೆಯಲ್ಲಿರುವ ಒಟ್ಟು 212 ಗ್ರಾಮ ಪಂಚಾಯ್ತಿಗಳ ಪೈಕಿ ವಿಜಯಪುರ ತಾಲ್ಲೂಕಿನ 17, ಬಬಲೇಶ್ವರ 15, ತಿಕೋಟಾ 14, ಬಸವನ ಬಾಗೇವಾಡಿ 15, ಕೊಲ್ಹಾರ 8, ನಿಡಗುಂದಿ 8, ಮುದ್ದೇಬಿಹಾಳ 20, ತಾಳಿಕೋಟೆ 14, ಇಂಡಿ 38, ಚಡಚಣ 13, ಸಿಂದಗಿ 25, ದೇವರ ಹಿಪ್ಪರಗಿ 14 ಸೇರಿದಂತೆ ಒಟ್ಟು 201 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

11 ಗ್ರಾ.ಪಂ.ಗೆ ಚುನಾವಣೆ ಇಲ್ಲ:ವಿವಿಧ ಕಾರಣಗಳಿಗಾಗಿ ಬಬಲೇಶ್ವರ, ಗಣಿ ಆರ್‌.ಸಿ., ಯಲಗೂರ, ಬಳಬಟ್ಟಿ, ಅರಸಿಣಗಿ, ಸಿದ್ದನಾಥ ಆರ್.ಸಿ., ಚಾಂದಕವಟೆ, ಯರಗಲ್‌ ಬಿ.ಕೆ., ಗುತ್ತರಗಿ, ಬಳಗಾನೂರ ಮತ್ತು ಇಂಗಳಗೇರಿ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯುವುದಿಲ್ಲ ಎಂದು ಅವರು ಹೇಳಿದರು.

1811 ಮತಗಟ್ಟೆ:ಜಿಲ್ಲೆಯ 201 ಗ್ರಾಮ ಪಂಚಾಯ್ತಿಗಳಿಗೆ ನಡೆಸಲು ಉದ್ದೇಶೀಸಿರುವ ಚುನಾವಣೆಗೆ ಸಂಬಂಧಿಸಿದಂತೆ 1811 ಮತಗಟ್ಟೆಗಳನ್ನು ಸ್ಥಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

12,39,467 ಮತದಾರರು:

6,39,109 ಪುರುಷ ಮತ್ತು 6,00,250 ಮಹಿಳಾ ಮತ್ತು 108 ಇತರೆ ಮತದಾರರು ಸೇರಿದಂತೆ ಒಟ್ಟು 12,39,467 ಮತದಾರರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹಕ್ಕು ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ.

224 ಚುನಾವಣಾಧಿಕಾರಿಗಳು 224 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ, ಈಗಾಗಲೇ ತರಬೇತಿಯನ್ನು ಸಹ ನೀಡಲಾಗಿದೆ ಎಂದು ಅವರು ಹೇಳಿದರು.

ಆಯಾ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನಗಳಲ್ಲಿ ನಾಮಪತ್ರ ಸ್ವೀಕಾರ, ಪರಿಶೀಲನೆ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಮತ ಪತ್ರಗಳ ಮೂಲಕ ಮತ ಚಲಾವಣೆ ಕಾರ್ಯ ನಡೆಯಲಿದೆ. ಈ ಚುನಾವಣೆಯಲ್ಲಿ ಮತಪೆಟ್ಟಿಗೆಗಳನ್ನು ಬಳಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವ ಗ್ರಾಮ ಪಂಚಾಯ್ತಿ ಚುನಾವಣಾ ಕಾರ್ಯಕ್ಕೆ 12,336 ಸಿಬ್ಬಂದಿಯನ್ನು ನಿಯೋಜಿಸಲು ಉದ್ದೇಶಿಸಲಾಗಿದ್ದು, ಪ್ರಸ್ತುತ 7668 ಸಿಬ್ಬಂದಿಗಳನ್ನು ಮತದಾನದ ದಿನದ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಇನ್ನುಳಿದ ಸಿಬ್ಬಂದಿಯನ್ನು ಚುನಾವಣೆಯ ವಿವಿಧ ಕೆಲಸಗಳಾದಸೆಕ್ಟರ್‌ ಅಧಿಕಾರಿಗಳು, ಮಾಸ್ಟರ್‌ ಟ್ರೇನರ್‌ಗಳು, ಮಸ್ಟರಿಂಗ್‌, ಡಿ–ಮಸ್ಟರಿಂಗ್‌ ಹಾಗೂ ಇತರೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದು ತಿಳಿಸಿದರು.

ಚುನಾವಣೆಗೆ ಈಗಾಗಲೇ ನೇಮಕ ಮಾಡಲಾದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಟ್ರೇನರ್‌, ತಾಲ್ಲೂಕು ಮಟ್ಟದ ಮಾಸ್ಟರ್ ಟ್ರೇನರ್‌ಗಳಗೆ ಒಂದು ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ ಎಂದು ಹೇಳಿದರು.

ಅನುದಾನ ಬಿಡುಗಡೆ:ಗ್ರಾಮ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದಿಂದ ಅನುದಾನವು ಸಹ ಬಿಡುಗಡೆಯಾಗಿದ್ದು, ಈ ಅನುದಾನವನ್ನು ಮತಗಟ್ಟೆಗಳ ಅನುಸಾರ ಆಯಾ ತಾಲ್ಲೂಕಿನ ತಹಶೀಲ್ದಾರ್‌ಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಬಂದೋಬಸ್ತ್‌:ಚುನಾವಣೆಗೆ ಅಗತ್ಯ ಪೊಲೀಸ್‌ ಬಂದೋಬಸ್ತ್‌ ಯೋಜನೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಮಸ್ಟರಿಂಗ್‌, ಡಿ ಮಸ್ಟರಿಂಗ್‌ ಕೇಂದ್ರ:

ವಿಜಯಪುರ ತಾಲ್ಲೂಕಿಗೆ ಡಿ.ಎನ್‌.ದರಬಾರ ಪ್ರೌಢಶಾಲೆ, ಬಬಲೇಶ್ವರ–ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಿಕೋಟಾ–ಎ.ಬಿ.ಜತ್ತಿ.ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ, ಬಸವನ ಬಾಗೇವಾಡಿ–ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಲ್ಹಾರ –ಸರ್ಕಾರಿ ಪ್ರೌಢಶಾಲೆ, ನಿಡಗುಂದಿ–ಗ್ರಾ.ವಿ.ವ ಸಂಘ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮುದ್ದೇಬಿಹಾಳ–ಎ.ಜಿ.ವಿ.ಸಿ ಕಾಲೇಜು, ತಾಳಿಕೋಟೆ ಎಸ್‌.ಕೆ.ಪದವಿ ಪೂರ್ವ ಕಾಲೇಜು, ಇಂಡಿ–ಸರ್ಕಾರಿ ಆದರ್ಶ ವಿದ್ಯಾಲಯ, ಚಡಚಣ–ಮೋಹನ ಶಿಕ್ಷಣ ಸಂಸ್ಥೆ, ಸಿಂದಗಿ–ಜಿ.ಪಿ.ಪೋರವಾಲ ಮತ್ತು ಆರ್‌.ಡಿ.ಪಾಟೀಲ ಕಾಲೇಜು ಹಾಗೂ ದೇವರ ಹಿಪ್ಪರಗಿ–ಎ.ಬಿ.ಸಾಲಕ್ಕಿ ಪಿ.ಯು.ಕಾಲೇಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT