ಭಾನುವಾರ, ಏಪ್ರಿಲ್ 11, 2021
29 °C

ಅಂಗವಿಕಲರ ಊರುಗೋಲು ‘ಉಪಾಧ್ಯೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸರ್ಕಾರಿ ಅಧಿಕಾರಿಯಾಗಿ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ವಿಠ್ಠಲ ರಾವ್‌ ಉಪಾಧ್ಯೆ ತಮ್ಮ  ಬಹುಮುಖ ಪ್ರತಿಭೆಯ ಮೂಲಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿದು, ಅಪಾರ ಜನಮನ್ನಣೆ ಗಳಿಸಿದ್ದ ಅಪರೂಪದ ಅಧಿಕಾರಿಯಾಗಿದ್ದಾರೆ.

ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಉಪಾಧ್ಯೆ ವಿಜಯಪುರ ಜಿಲ್ಲೆಯಲ್ಲಿ ಅಂಗವಿಕಲರ ಪಾಲಿನ ಊರುಗೋಲಾಗಿ ಕಾರ್ಯನಿರ್ವಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯಪುರ ಜಿಲ್ಲೆಯ ಸಾವಿರಾರು ಅಂಗವಿಕಲರು, ಅಂಧರು, ವೃದ್ಧರಿಗೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಹಾಗೂ ಸಂಘ, ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅವರ ಬಾಳಿಗೆ ನೆಮ್ಮದಿ ಕಲ್ಪಿಸಿದ್ದಾರೆ.

ಅವರ ಸರ್ಕಾರಿ ಸೇವೆಯನ್ನು ಮೆಚ್ಚಿ ವಿಜಯಪುರ ಜಿಲ್ಲಾಡಳಿತ 2017ರ ಜನವರಿ 26ರಂದು ‘ಜಿಲ್ಲಾ ಸರ್ವೋತ್ತಮ ಸೇವಾ ಅಧಿಕಾರಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಬಾಲಮಂದಿರದ ಶಿಕ್ಷಕರಾಗಿ 12 ವರ್ಷ ಹಾಗೂ ಬಾಲ ಮಂದಿರದ ಮುಖ್ಯೋಪಾಧ್ಯಾಯರಾಗಿ 12 ವರ್ಷ ಕಾರ್ಯನಿರ್ವಹಿಸುವ ಮೂಲಕ ಬಾಲ ಮಂದಿರದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯತ್ನಿಸಿದರು. ಬಾಲ ಮಂದಿರದ ಮಕ್ಕಳಿಗೆ ನೈತಿಕ, ಸಾಮಾಜಿಕ ಶಿಕ್ಷಣ ನೀಡುವ ಜೊತೆಗೆ ಅವರ ಕೈಯಿಂದಲೇ ನಾಟಕ ಆಡಿಸುವ ಮೂಲಕ, ಹಾಡುಗಳನ್ನು ಹಾಡಿಸುವ ಮೂಲಕ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ, ಸಮಗ್ರ ಪರಿವರ್ತನೆಗೆ ದಾರಿದೀಪವಾಗಿದ್ದಾರೆ.

ಮೈಸೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಬಾಲ ಮಂದಿರದ ಮಕ್ಕಳಿಂದ ಅಭೂತಪೂರ್ವ ಕಾರ್ಯಕ್ರಮ ಕೊಡಿಸುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.

ಶ್ರವಣದೋಷ ಇರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಉಪಾಧ್ಯೆ ಅವರು ಮೈಸೂರಿನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡು ಬಂದು, ಅವರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.

ಬಹುಮುಖ ಪ್ರತಿಭೆಯಾದ ಉಪಾಧ್ಯೆ ಅವರು ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆ, ಭಾವಗೀತೆ, ದಾಸರಪದ, ವಚನಗಳ ಗಾಯನದ ಮೂಲಕ ಜನಮನಸೂರೆಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ದ.ರಾ.ಬೇಂದ್ರೆ ವಿರಚಿತ ಕವನಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಜಯಪುರದ ಕಲಾ ಮಾಧ್ಯಮ ಹವ್ಯಾಸಿ ನಾಟಕ ಸಂಸ್ಥೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೂತ್ರಧಾರರಾಗಿ, ಹಿನ್ನೆಲೆ ಗಾಯಕರಾಗಿ ವಿಜಯಪುರ ಸೇರಿದಂತೆ ನವದೆಹಲಿ, ಮುಂಬೈ, ಪುಣೆ, ಚಿಂಚವಾಡ, ಬೆಂಗಳೂರಿನಲ್ಲಿ ನಾಟಕ ಪ್ರದರ್ಶಿಸಿದ ಹೆಗ್ಗಳಿಕೆ ಅವರದಾಗಿದೆ.

ಪ್ರಸಿದ್ಧ ನಾಟಕಕಾರರಾದ ಟಿ.ಎಸ್.ರಂಗ, ಅಶೋಕ ಬಾದರದಿನ್ನಿ, ಜಿ.ಎಸ್‌.ದೇಶಪಾಂಡೆ, ಶ್ರೀನಿವಾಸ ತಾವರಗೇರಿ ಅವರ ನಿರ್ದೇಶನದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರೆ. 

ಮೈಸೂರಿನಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಗೊಂಡ ‘ಬಾಗಲ ತೆಗೆರಪ್ಪೋ ಬಾಗಿಲ’ ನಾಟಕದಲ್ಲಿ ಸೂತ್ರಧಾರ, ಹಿನ್ನೆಲೆಗಾಯಕರಾಗಿ ಅಪಾರ ಮನ್ನಣೆ ಗಳಿಸಿದ್ದಾರೆ.

‘ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ಇದೆ. ಇನ್ನು ಮುಂದೆಯೂ ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯಲು ಉತ್ಸುಕನಾಗಿದ್ದೇನೆ’ ಎಂದು ಹೇಳುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.