ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹10.69 ಕೋಟಿ ಲಾಭ: ಶಿವಾನಂದ ಪಾಟೀಲ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌
Last Updated 24 ಅಕ್ಟೋಬರ್ 2020, 12:11 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್‌ 2019–20ನೇ ಸಾಲಿನಲ್ಲಿ ₹10.69 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ಬ್ಯಾಂಕಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2018–19ನೇ ಸಾಲಿಗೆ ಹೋಲಿಸಿದರೆ ಬ್ಯಾಂಕ್‌ ಪ್ರಸಕ್ತ ಸಾಲಿನಲ್ಲಿ ₹2.34 ಕೋಟಿ ಲಾಭ ಕಡಿಮೆಯಾಗಿದೆ ಎಂದರು.

ಮುಖ್ಯಮಂತ್ರಿ ಕೋವಿಡ್‌ ನಿಧಿಗೆ ₹1ಕೋಟಿ, ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ಪರಿಹಾರನಿಧಿಗೆ ₹50 ಲಕ್ಷ, ಜಿಲ್ಲೆಯ 500 ಆಶಾ ಕಾರ್ಯಕರ್ತೆಯರಿಗೆ ₹15 ಲಕ್ಷ ಪ್ರೋತ್ಸಾಹಧನ ಹಾಗೂ ಸರ್ಕಾರ ಠೇವಣಿ ಮೇಲೆ ನೀಡುವ ಬಡ್ಡಿ ಪ್ರಮಾಣವನ್ನು ಕಡಿತ ಮಾಡಿದ ಕಾರಣಕ್ಕೆ ಬ್ಯಾಂಕಿನ ಲಾಭಾಂಶ ತುಸು ಕಡಿಮೆಯಾಗಿದೆ ಎಂದು ಹೇಳಿದರು.

‘ಅ’ ವರ್ಗದ ಬ್ಯಾಂಕ್‌:2020 ಮಾರ್ಚ್‌ 31ಕ್ಕೆ ಬ್ಯಾಂಕಿನ ದುಡಿಯುವ ಬಂಡವಾಳ ₹3291 ಕೋಟಿಯಷ್ಟು ಇದೆ. 2019–20ನೇ ಸಾಲಿನ ಬ್ಯಾಂಕಿನ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ‘ಅ’ ವರ್ಗದ ಬ್ಯಾಂಕನ್ನಾಗಿ ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.

₹1132 ಕೋಟಿ ಬೆಳೆ ಸಾಲ:ಜಿಲ್ಲೆಯ 2.08 ಲಕ್ಷ ರೈತರಿಗೆ ₹1132 ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ನೀಡಿದ್ದು, ಈ ಪೈಕಿ 2019–20ನೇ ಸಾಲಿನಲ್ಲಿ ಒಟ್ಟು 6873 ಹೊಸ ರೈತರಿಗೆ ₹50.16 ಕೋಟಿ ಸಾಲ ವಿತರಿಸಿದೆ. ರೈತರ ಅರ್ಹತೆ ಆಧರಿಸಿ ಕನಿಷ್ಠ ₹45 ಸಾವಿರ ಬೆಳೆ ಸಾಲ ನೀಡುವ ಮಿತಿಯನ್ನು ₹55 ಸಾವಿರಗಳಿಗೆ ಹೆಚ್ಚಿಸಿ ಸಾಲ ವಿತರಣೆ ಮಾಡಲಾಗಿದೆ. ಇದುವರೆಗೆ ₹98 ಕೋಟಿ ಹೆಚ್ಚುವರಿ ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.

ಐದು ಹೊಸ ಶಾಖೆ:ಜಿಲ್ಲೆಯಾದ್ಯಂತ ಒಟ್ಟು 42 ಶಾಖೆಗಳು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. 2020ನೇ ಸಾಲಿನಲ್ಲಿ ವಿಜಯಪುರ ನಗರದ ಅಥಣಿ ರೋಡ್‌, ಧೂಳಖೇಡ, ಕನಮಡಿ, ಢವಳಗಿ ಮತ್ತು ಮುಳವಾಡದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ ಎಂದರು.

ಮಮದಾಪುರ, ನಾಗಠಾಣ, ಶಿವಣಗಿ, ಇಂಗಳೇಶ್ವರ, ಉಕ್ಕಲಿ, ಮುದ್ದೇಬಿಹಾಳ (ಮಹಿಳಾ), ಹಿರೂರ, ಹುಲ್ಲೂರ, ಹಿರೇಬೇವನೂರ ಮತ್ತು ಅಥರ್ಗಾ ಸೇರಿದಂತೆ ಹೊಸದಾಗಿ ಇನ್ನೂ 10 ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.

ಬ್ಯಾಂಕ್‌ ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತಮಾನೋತ್ಸವ ಭವನದ ನಿರ್ಮಾಣದೊಂದಿಗೆ ಶತಮಾನೋತ್ಸವ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಕೈಗೊಳ್ಳಲಾಗಿದೆ. ಆದರೆ, ಕೋವಿಡ್‌ ಪರಿಣಾಮ ಆಚರಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

ಸಹಕಾರ ಸಪ್ತಾಹ ಸಮಾರೋಪ ನ.20ಕ್ಕೆ

ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ನವಂಬರ್‌ 14ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದ್ದು, ಸಮಾರೋಪ ಸಮಾರಂಭ ನ.20ರಂದು ವಿಜಯಪುರದಲ್ಲಿ ನಡೆಯಲಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಭಾಗವಹಿಸಲಿದ್ದಾರೆ. ರಾಜ್ಯದ ಸಹಕಾರಿಗಳಿಗೆ ಸನ್ಮಾನ ನಡೆಯಲಿದೆ. ಅದೇ ದಿನ ಬ್ಯಾಂಕಿನ ವಾರ್ಷಿಕ ಸಭೆ ನಡೆಸುವ ಉದ್ದೇಶವಿದೆ ಎಂದರು.

ಆರೋಗ್ಯ ಇಲಾಖೆ ಅಧೋಗತಿಗೆ

ಆರೋಗ್ಯ ಇಲಾಖೆಯು ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇಲಾಖೆ ಅಧೋಗತಿಗೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವರೂ ಆದ ಶಿವಾನಂದ ಪಾಟೀಲ ಆರೋಪಿಸಿದರು.

ಕೋವಿಡ್‌ ಹೆಸರಲ್ಲಿ ಇತರೆ ರೋಗಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಉದಾಹರಣೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ 1300ಕ್ಕೂ ಅಧಿಕ ಜನರು ಹೊರರೋಗಿ ವಿಭಾಗಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು. ಆದರೆ, ಸದ್ಯ 200 ಜನರೂ ಬರುತ್ತಿಲ್ಲ. ಹೀಗಾಗಿ ಇತರೆ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.

ಕೋವಿಡ್‌ ಬಳಿಕ ಇದುವರೆಗೆ ರಾಜ್ಯದಲ್ಲಿ ಕೋವಿಡ್‌ನಿಂದ ಎಷ್ಟು ಜನ ಹಾಗೂ ಇತರೆ ಕಾಯಿಲೆಗಳಿಂದ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ಅಂಕಿ–ಅಂಶವನ್ನು ಸರ್ಕಾರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT