ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮಾವಾ, ಗಾಂಜಾ, ಮದ್ಯ ಮಾರಾಟಕ್ಕೆ ಇಲ್ಲ ತಡೆ

ಹಳ್ಳಿ, ಪಟ್ಟಣ, ನಗರಗಳ ಹೊರವಲಯದಲ್ಲಿ ಡಾಬಾ ದರ್ಬಾರು
Last Updated 28 ಆಗಸ್ಟ್ 2022, 10:12 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಮಾವಾ, ಗಾಂಜಾ, ಅಫೀಮು, ಮದ್ಯ ಮಾರಾಟ ಅತಿಯಾಗಿದೆ. ಅದರಲ್ಲೂ ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ದಂದೆಗಳು ತಲೆ ಎತ್ತಿರುವುದು ಪೊಲೀಸ್‌ ಹಾಗೂ ಅಬಕಾರಿ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಹೇಳಿ, ಕೇಳಿವಿಧಾನಸಭೆ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ರಾಜಕೀಯ ಚರ್ಚೆಗಳಿಗೆ ಡಾಬಾ, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ವೇದಿಕೆಯಾಗಿವೆ. ಅಷ್ಟೇ ಅಲ್ಲ, ಈ ಡಾಬಾಗಳು ಅಕ್ರಮ ವ್ಯವಹಾರ, ಕಾನೂನುಬಾಹಿರ ಚಟುವಟಿಕೆಗಳ ಅಡ್ಡೆಗಳಾಗಿ ಮಾರ್ಪಟ್ಟಿವೆ.

ನಗರ, ಪಟ್ಟಣ ಸೇರಿದಂತೆ ಸಣ್ಣ ಪುಟ್ಟ ಹಳ್ಳಿಗಳಲ್ಲೂ ನಾಯಿ ಕೊಡೆಗಳಂತೆ ಡಾಬಾ, ಬಾರ್‌, ರೆಸ್ಟೋರೆಂಟ್‌ಗಳು ತಲೆ ಎತ್ತಿ ನಿಂತಿವೆ. ಕೆಲವು ಡಾಬಾಗಳಂತೂ ಅಕ್ರಮ ಮದ್ಯ, ಗಾಂಜಾ, ಅನೈತಿಕ ಚಟುವಟಿಕೆಗಳ ಕೇಂದ್ರ ಬಿಂದುಗಳಾಗಿರುವುದು ಸಾಮಾನ್ಯವಾಗಿ ಬಿಟ್ಟಿವೆ. ಪುಂಡ ಪೋಕರಿಗಳು, ಪುಡಾರಿಗಳ ತಾಣಗಳಾಗಿರುವ ಕೆಲವು ಡಾಬಾಗಳಲ್ಲಿ ಸಂಜೆಯಾಗುತ್ತಿದ್ದಂತೆ ಕೂಗಾಟ, ಜೀರಾಟ ಕೆಲವೊಮ್ಮೆ ಗಲಾಟೆ, ಹೊಡೆದಾಟ ಸಾಮಾನ್ಯವಾಗಿದೆ.

ಪೊಲೀಸರು ಇವುಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಂಡಿದ್ದರೂ ಸಂಪೂರ್ಣ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ.ಕೆಲವು ಶಾಲಾ ಕಾಲೇಜುಗಳ ಹತ್ತಿರವೇ ಡಾಬಾಗಳು ತಲೆ ಎತ್ತಿ ನಿಂತಿವೆ. ಇವು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೈ ಬೀಸಿ ಕರೆದು ಅವರ ಭವಿಷ್ಯ ಹಾಳು ಮಾಡುತ್ತಿರುವುದು ಗುಟ್ಟಾಗಿಲ್ಲ.

ರಾಜ್ಯದ ಗಡಿ ಅಂಚಿನಲ್ಲಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹಾಗೂ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕ ರಾಜಾರೋಷವಾಗಿ ಮಾದಕ ವಸ್ತುಗಳ ಮಾರಾಟ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.ಡಾಬಾಗಳಲ್ಲಿ ಮಾರಾಮಾರಿ ಸಾಮಾನ್ಯವಾಗಿದೆ.

ಗೋವಾ ಮದ್ಯ ಮಾರಾಟವೂ ಜಿಲ್ಲೆಯಲ್ಲಿ ಅತಿಯಾಗಿದೆ.ಅಬಕಾರಿ ನಿಯಮಗಳನ್ನು ಮೀರಿ ಕೆಲವು ಗ್ರಾಮಗಳ ಕಿರಾಣಿ (ದಿನಸಿ) ಅಂಗಡಿಗಳಲ್ಲಿಯೂ ಕೂಡಾ ಅಕ್ರಮ ಮದ್ಯ ಮಾರಾಟ ಜೋರಾಗಿದೆ.ಇವುಗಳಿಂದ ಗ್ರಾಮೀಣ ಪ್ರದೇಶಗಳ ಯುವಕರು ದುಶ್ಚಟಗಳಿಗೆ ಅಂಟಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ನೋಡಿಯೂ ನೋಡದಂತೆ ಕುಳಿತುಕೊಂಡಿದ್ದಾರೆ.ಮದ್ಯದ ಕಾಟ ತಾಳಲಾರದೇ ಕೆಲವು ಗ್ರಾಮಗಳಲ್ಲಿ ಮಹಿಳೆಯರು ಪ್ರತಿಭಟನೆ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಇತ್ತೀಚೆಗೆ ನಡೆಸಿದ ಕೆಡಿಪಿ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ, ವಿಧಾನ ಪರಿಷತ್‌ ಸುನೀಲ್‌ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಅವರೇ ದ್ವನಿ ಎತ್ತುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿರುವ ಅಕ್ರಮ ದಂದೆಗಳ ಬಗ್ಗೆ ಗಮನ ಸೆಳೆದರು. ಈ ಬಗ್ಗೆ ಚರ್ಚೆಯಾಗಿ ಒಂದು ತಿಂಗಳಾದರೂ ಅಕ್ರಮ ದಂದೆಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ.

***

ಅಕ್ರಮ ತಡೆಗೆ ಕಠಿಣ ಕ್ರಮ: ಎಸ್‌ಪಿ

ವಿಜಯಪುರ: ಜಿಲ್ಲೆಯಲ್ಲಿ ಮಾವಾ, ಗಾಂಜಾ, ಅಫೀಮು, ಅಕ್ರಮ ಮದ್ಯ ಮಾರಾಟ ತಡೆಗೆ ಜಿಲ್ಲಾ ಪೊಲೀಸ್‌ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಪರಿಣಾಮ ನಿಯಂತ್ರಣವಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌.

ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಗಾಂಜಾ, ಅಫೀಮು ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಹಿಂದೆ ಹೊರ ರಾಜ್ಯದ ವಿದ್ಯಾರ್ಥಿಗಳು ಜಿಲ್ಲೆಗೆ ಮೆಡಿಕಲ್‌, ಎಂಜಿನಿಯರಿಂಗ್‌ ಓದಲು ಬರುತ್ತಿರುವವರು ಉಪಯೋಗ ಮಾಡುತ್ತಿದ್ದರು ಎಂಬುದು ಗಮನಕ್ಕೆ ಬಂದಿದೆ. ಪ್ರಸಕ್ತ ಹೊರರಾಜ್ಯದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಬಹಳ ಕಡಿಮೆ ಇದ್ದಾರೆ. ಹಾಗಾಗಿ ಯಾವುದೇ ಗಾಂಜಾ, ಅಫೀಮು ಅಕ್ರಮ ಮಾರಾಟ, ಬಳಕೆ ಇಲ್ಲ.

ಜಿಲ್ಲೆಯ ನೀರಾವರಿ ಪ್ರದೇಶದ ಕೆಲವು ಕಬ್ಬಿನ ಹೊಲದಲ್ಲಿ ಹಲವಾರು ಬಾರಿ ಗಾಂಜಾ ಗಿಡಗಳನ್ನು ಬೆಳೆಸಿರುವುದು ಗಮನಕ್ಕೆ ಬಂದಿದ್ದು, ಅವುಗಳ ಮೇಲೆ ಕೇಸ್‌ ಹಾಕಿ ಕ್ರಮಕೈಗೊಳ್ಳಲಾಗಿದೆ.

ಉತ್ತರ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಮುಖ್ಯ ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾದುಹೋಗಿರುವುದರಿಂದ ಪ್ರತಿನಿತ್ಯ ಇಲ್ಲಿ ಸಾವಿರಾರು ಟ್ರಕ್‌ ಮತ್ತಿತರರ ವಾಹನಗಳು ಚಲಿಸುತ್ತವೆ. ಟ್ರಕ್‌ ಚಾಲಕರು ಮತ್ತು ಪ್ರಯಾಣಿಕರು ಗಾಂಜಾ ತಂದು ಡಾಬಾಗಳಲ್ಲಿ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಡಾಬಾಗಳ ಮೇಲೂ ದಾಳಿ ಮಾಡಿ, ಪ್ರಕರಣ ದಾಖಲಿಸಿದ್ದೇವೆ.‌

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ತಡೆಗೆ ಪೊಲೀಸ್‌ ಇಲಾಖೆ ಕಠಿಣ ಕ್ರಮಕೈಗೊಂಡಿದೆ. ಒಂದು ವೇಳೆ ಸಾರ್ವಜನಿಕರಿಗೆ ಇಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್‌ ಇಲಾಖೆಗೆ ಮಾಹಿತಿ ಕೊಟ್ಟರೆ ತಕ್ಷಣ ಕಠಿಣ ಕ್ರಮಕೈಗೊಳ್ಳುತ್ತೇವೆ ಎನ್ನುತ್ತಾರೆ ಅವರು.

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಅಲ್ಲಮಪ್ರಭು ಕರ್ಜಗಿ,ಎ.ಸಿ.ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT